ಜಾತಿ ಗಣತಿ ಬಿಕ್ಕಟ್ಟು: ರಜೆ, ಪಾಠ, ತಂತ್ರಜ್ಞಾನದ ಒಳಸುಳಿಯಲ್ಲಿ ಶಿಕ್ಷಕರು
x

ಜಾತಿ ಗಣತಿ ಬಿಕ್ಕಟ್ಟು: ರಜೆ, ಪಾಠ, ತಂತ್ರಜ್ಞಾನದ ಒಳಸುಳಿಯಲ್ಲಿ ಶಿಕ್ಷಕರು

ದಸರಾ ರಜೆಯು ಶಿಕ್ಷಕರಿಗೆ, ವಿಶೇಷವಾಗಿ ಶಿಕ್ಷಕಿಯರಿಗೆ ಅತ್ಯಂತ ಮಹತ್ವದ್ದು. ಹಬ್ಬದ ಸಿದ್ಧತೆ, ಕೌಟುಂಬಿಕ ಕಾರ್ಯಕ್ರಮಗಳಿಗಾಗಿ ಅವರು ಈ ರಜೆಯನ್ನು ಎದುರು ನೋಡುತ್ತಿರುತ್ತಾರೆ. ಇದೇ ಸಮಯದಲ್ಲಿ ಗಣತಿ ಬಂದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.


ರಾಜ್ಯ ಸರ್ಕಾರವು ಸೆಪ್ಟೆಂಬರ್ 22ರಿಂದ ಆರಂಭಿಸಲು ಹೊರಟಿರುವ ಜಾತಿ ಗಣತಿಯು ಇದೀಗ ಶಿಕ್ಷಕ ಸಮುದಾಯದ ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಪಾಠ, ಪರೀಕ್ಷೆ, ದಸರಾ ರಜೆಯ ಸಂತೋಷ ಮತ್ತು ತಾಂತ್ರಿಕ ಸವಾಲುಗಳ ನಡುವೆ ಸಿಲುಕಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ಈ ಶೈಕ್ಷಣಿಕೇತರ ಹೊರೆಯಿಂದ ತಮ್ಮನ್ನು ಕಾಪಾಡಿ ಎಂದು ಹೇಳಿಕೊಳ್ಳುವಂತಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗಣತಿ ಕಾರ್ಯವನ್ನು ದಸರಾ ರಜೆ ಮುಗಿದ ನಂತರ ನಡೆಸುವಂತೆ ಅಥವಾ ನಿರುದ್ಯೋಗಿ ಪದವೀಧರರನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದೆ.

ಸರ್ಕಾರದ ಈ ಕ್ರಮವನ್ನು ಬಲವಾಗಿ ಖಂಡಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನಂಗ್ಲಿ 'ದ ಫೆಡರಲ್​ ಕರ್ನಾಟಕ' ಜತೆ ಮಾತನಾಡಿ, "ಶಿಕ್ಷಕರನ್ನು ನಿರಂತರವಾಗಿ ಸಮೀಕ್ಷೆಗಳಿಗೆ ಬಳಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಚುನಾವಣೆಗಳಂತಹ ರಾಷ್ಟ್ರೀಯ ಕಾರ್ಯಗಳಿಗೆ ನಮ್ಮ ಸೇವೆ ಅನಿವಾರ್ಯ. ಆದರೆ, ಒಂದರ ಹಿಂದೆ ಒಂದರಂತೆ ಸಮೀಕ್ಷೆಗಳಿಗೆ ನಮ್ಮನ್ನು ನಿಯೋಜಿಸಿದರೆ, ತರಗತಿಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದು ಯಾರು?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅವರು ಶಿಕ್ಷಕರ ಮೇಲಿನ ಸರಣಿ ಸಮೀಕ್ಷೆಗಳ ಹೊರೆಯನ್ನು ವಿವರಿಸುತ್ತಾ, "ಮೊದಲು ಜಯಪ್ರಕಾಶ್ ಹೆಗ್ಡೆ ಆಯೋಗದ ಸಮೀಕ್ಷೆ, ನಂತರ ಒಳಮೀಸಲಾತಿ ಸಮೀಕ್ಷೆ, ಈಗ ಮತ್ತೆ ಜಾತಿ ಗಣತಿ. ಇದರ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗದಿಂದ 'ಎಸ್‌ಐಆರ್' ಸಮೀಕ್ಷೆ ಹಾಗೂ ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯವೂ ನಮ್ಮ ಹೆಗಲಿಗೆ ಬೀಳಲಿದೆ. ಹೀಗೆ ನಿರಂತರವಾಗಿ ನಾವು ಸಮೀಕ್ಷೆಗಳಲ್ಲೇ ಮುಳುಗಿದರೆ, ರಾಜ್ಯದ ಶೈಕ್ಷಣಿಕ ಪ್ರಗತಿ ಏನಾಗಬೇಕು? ಇದು ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ," ಎಂದು ಆತಂಕ ವ್ಯಕ್ತಪಡಿಸಿದರು.

ಹಬ್ಬದ ಖುಷಿಗೆ ಸರ್ಕಾರದ ಕತ್ತರಿ

ದಸರಾ ರಜೆಯು ಶಿಕ್ಷಕರಿಗೆ, ವಿಶೇಷವಾಗಿ ಶಿಕ್ಷಕಿಯರಿಗೆ ಅತ್ಯಂತ ಮಹತ್ವದ್ದು. ಹಬ್ಬದ ಸಿದ್ಧತೆ, ಕೌಟುಂಬಿಕ ಕಾರ್ಯಕ್ರಮಗಳಿಗಾಗಿ ಅವರು ಈ ರಜೆಯನ್ನು ಎದುರು ನೋಡುತ್ತಿರುತ್ತಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗವು ಈ ಹಬ್ಬದ ಸಮಯದಲ್ಲೇ ಗಣತಿ ನಡೆಸಲು ಮುಂದಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. "ಅನೇಕ ಶಿಕ್ಷಕಿಯರು ದಸರಾ ರಜೆಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಅವರ ಭಾವನೆಗಳನ್ನು ಸರ್ಕಾರ ಗೌರವಿಸಬೇಕು. ಕನಿಷ್ಠಪಕ್ಷ ದಸರಾ ರಜೆ ಮುಗಿದ ನಂತರವಾದರೂ ಸಮೀಕ್ಷೆ ನಡೆಸಲಿ. ಈ ಬಗ್ಗೆ ನಾವು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇವೆ," ಎಂದು ನಂಗ್ಲಿ ಹೇಳಿದ್ದಾರೆ.

ಈ ವಾದಕ್ಕೆ ಪೂರಕವಾಗಿ, ಕೆಲವು ದಿನಗ್ಳ ಹಿಂದೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಸರ್ಕಾರಕ್ಕೆ ಪತ್ರ ಬರೆದು, ಶಿಕ್ಷಕರನ್ನು ಬೋಧಕೇತರ ಚಟುವಟಿಕೆಗಳಿಂದ ದೂರವಿಡುವಂತೆ ಮನವಿ ಮಾಡಿರುವುದು ಶಿಕ್ಷಕರ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.

ಸಮೀಕ್ಷೆ ಅನಿವಾರ್ಯ

"ಸರ್ಕಾರಿ ನೌಕರಿಗೆ ಸೇರಿದ ಮೇಲೆ ಸರ್ಕಾರದ ಎಲ್ಲಾ ಆದೇಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಸರ್ಕಾರದ ಪ್ರಮುಖ ಯೋಜನೆಗಳ ಜಾರಿಗೆ ಅಗತ್ಯವಾದ ನಿಖರ ದತ್ತಾಂಶವನ್ನು ಒದಗಿಸುವಲ್ಲಿ ಶಿಕ್ಷಕರ ಮೇಲೆ ಅಪಾರ ವಿಶ್ವಾಸವಿದೆ. ಆದರೆ, ದಸರಾ ರಜೆಯ ಸಮಯದಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ನಡೆಸುವುದು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನುಂಟುಮಾಡಿದೆ. ಹಬ್ಬದ ರಜೆಯನ್ನೂ ಲೆಕ್ಕಿಸದೆ ವಿಶ್ರಾಂತಿ ಇಲ್ಲದಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ," ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಧನಂಜಯ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಮುಂದುವರಿದು, "ವೈಯಕ್ತಿಕವಾಗಿ ನಮಗೆ ಕಷ್ಟವಾದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲು ಈ ಸಮೀಕ್ಷೆ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ, ಈ ಮಹತ್ವದ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳಲೇಬೇಕು. ನಮ್ಮ ಮೇಲಿರುವ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ," ಎಂದು ತಮ್ಮ ವೃತ್ತಿಪರ ಬದ್ಧತೆಯನ್ನು ವ್ಯಕ್ತಪಡಿಸಿದರು.

ಪರ್ಯಾಯ ಮಾರ್ಗ ಸೂಚಿಸಿದ ಸಂಘ

ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನಂಗ್ಲಿ ಅವರು ಸರ್ಕಾರಕ್ಕೆ ಒಂದು ರಚನಾತ್ಮಕ ಸಲಹೆಯನ್ನು ನೀಡಿದ್ದಾರೆ. "ರಾಜ್ಯದಲ್ಲಿ ಸಾವಿರಾರು ನಿರುದ್ಯೋಗಿ ಪದವೀಧರರಿದ್ದಾರೆ. ಅವರಿಗೆ ಉದ್ಯೋಗದ ಅವಶ್ಯಕತೆಯಿದೆ. ಈ ಸಮೀಕ್ಷಾ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಲಿ. ಗಣತಿದಾರರಿಗೆ ನೀಡುವ ಭತ್ಯೆಯನ್ನು ಅವರಿಗೆ ನೀಡಿದರೆ, ಅವರಿಗೂ ತಾತ್ಕಾಲಿಕ ಉದ್ಯೋಗ ಸಿಕ್ಕಂತಾಗುತ್ತದೆ ಮತ್ತು ನಮ್ಮ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೂ ಯಾವುದೇ ಅಡ್ಡಿಯಾಗುವುದಿಲ್ಲ," ಎಂದು ಅವರು ಪ್ರತಿಪಾದಿಸಿದರು.

ತಾಂತ್ರಿಕ ಸವಾಲುಗಳು ಮತ್ತು ಒತ್ತಡ: ಶಿಕ್ಷಕರ ಅಳಲು

ಈ ಬಾರಿ ಸಂಪೂರ್ಣ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುತ್ತಿದ್ದು, ಇದು ಶಿಕ್ಷಕರ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಆ್ಯಪ್ ಬಳಕೆಯ ಬಗ್ಗೆ ಸಮರ್ಪಕ ತರಬೇತಿ ಸಿಕ್ಕಿಲ್ಲ. ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯವಾಗಿದ್ದು, ಆ್ಯಪ್‌ಗೆ ಲಾಗಿನ್ ಆಗಲು ಮತ್ತು ಒಟಿಪಿ ಪಡೆಯಲು ಸಾಧ್ಯವಾಗದಿದ್ದರೆ ಗಣತಿ ಕಾರ್ಯವೇ ಸ್ಥಗಿತಗೊಳ್ಳುತ್ತದೆ. ಇತ್ತೀಚೆಗೆ ನಡೆದ ಒಳಮೀಸಲಾತಿ ಸಮೀಕ್ಷೆಯಲ್ಲಿ ಎದುರಾದ ತಾಂತ್ರಿಕ ದೋಷಗಳು ಈ ಆತಂಕವನ್ನು ಹೆಚ್ಚಿಸಿವೆ.

ಕೇವಲ 15 ದಿನಗಳಲ್ಲಿ ಪ್ರತಿಯೊಬ್ಬ ಶಿಕ್ಷಕ 150ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, 60 ಪ್ರಶ್ನೆಗಳಿರುವ ಪಟ್ಟಿಯನ್ನು ತುಂಬಿಸಬೇಕು. ಇದು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಸೃಷ್ಟಿಸಲಿದೆ.

ದಸರಾ ರಜೆಯ ಕಾರಣದಿಂದ ಬಹುತೇಕ ಜನರು ತಮ್ಮ ಮನೆಗಳಲ್ಲಿ ಇರುವುದಿಲ್ಲ. ಇದರಿಂದಾಗಿ ಗಣತಿದಾರರು ಒಂದೇ ಮನೆಗೆ ಹಲವು ಬಾರಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ವ್ಯರ್ಥಮಾಡಲಿದೆ.

ಕುಟುಂಬದ ಜತೆ ಕಾಲ ಕಳೆಯಲು ಆಗದ ಪರಿಸ್ಥಿತಿ

“ಸೆ. 22ರಿಂದ 7ರವರೆಗೆ ಶಾಲೆಗಳಿಗೆ ದಸರಾ ರಜೆ ನೀಡಲಾಗಿದೆ. ಆದರೆ, ಇದೇ ಅವಧಿಯೊಳಗೆ ಜಾತಿಗಣತಿ ನಡೆಸಲು ಸೂಚನೆ ಬಂದಿದೆ. ನವರಾತ್ರಿ ಹಬ್ಬ, ಉತ್ಸವಗಳಲ್ಲಿ ಭಾಗವಹಿಸಲೂ ಆಗದಂತಾಗಿದೆ. ಕಳೆದ ಬೇಸಿಗೆ ರಜೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ ನಡೆಸಿದ್ದೆವು. ಈಗ ಮತ್ತೊಂದು ಸಮೀಕ್ಷೆ ನಡೆಸಬೇಕಾಗಿದೆ. ಈ ಬಾರಿಯಾದರೂ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳುವ ಆಲೋಚನೆ ಇತ್ತು. ಆದರೆ, ಅದೂ ಆಗದಂತಾಗಿದೆ” ಎಂದು ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮಿದೇವಿಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ಶಾಲಾ ಅವಧಿಯಲ್ಲಿ ಯಾವುದೇ ಸಭೆಗಳನ್ನು ಮಾಡದಂತೆ ಇಲಾಖೆಯಿಂದ ಸುತ್ತೋಲೆ ಬಂದಿದೆ. ಹಾಗಾಗಿ ಇಲಾಖಾ ಕೆಲಸಗಳು ಸ್ವಲ್ಪ ಕಡಿಮೆಯಾಗಿವೆ. ಆದರೆ, ಮತದಾರರ ಪಟ್ಟಿ, ಸಮೀಕ್ಷೆಗಳು, ಯೋಜನೆ, ಕಾರ್ಯಕ್ರಮಗಳ ಪ್ರಗತಿಯಂತಹ ಇಲಾಖೇತರ ಕೆಲಸಗಳನ್ನು ವಹಿಸಲಾಗಿದೆ. ಇಲಾಖೆ ಆದೇಶ ಇರುವುದರಿಂದ ಮಾಡದೇ ಇರಲು ಸಾಧ್ಯವಿಲ್ಲ” ಎಂದು ಅಳಲು ತೋಡಿಕೊಂಡರು.

“ಸೋಮವಾರದಿಂದ ಜಾತಿಗಣತಿ ಆರಂಭವಾಗಲಿದೆ. ಭಾನುವಾರ ರಾತ್ರಿಯವರೆಗೂ ಮನೆಗಳನ್ನು ಹಂಚಿಕೆ ಮಾಡಿಲ್ಲ. ನಾವಿರುವ ಸ್ಥಳದಲ್ಲಿಯೇ ಗಣತಿಗೆ ಅವಕಾಶ ನೀಡಿದರೆ ಅನುಕೂಲ ಆಗಲಿದೆ. ಬೇರೆ ಜಾಗಗಳಲ್ಲಿ ಕೊಟ್ಟರೆ ಮನೆ ಹುಡುಕುವುದು ಕಷ್ಟ” ಎಂದು ಮಂಜುನಾಥ್ ಹೇಳಿದರು.

“ಕೆಲ ಮನೆಗಳ ಸದಸ್ಯರು ಕೆಲಸ ಕಾರ್ಯಗಳಿಗೆ ಹೋಗಿರುತ್ತಾರೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿರುತ್ತಾರೆ. ಒಬ್ಬ ಗಣತಿದಾರರಿಗೆ ದಿನವೊಂದಕ್ಕೆ 10 ಮನೆಯಂತೆ ಒಟ್ಟು 150 ಮನೆಗಳನ್ನು ಹಂಚಲಾಗಿದೆ. ಗಣತಿಯ ಬಗ್ಗೆ ಆಯಾ ಪ್ರದೇಶಗಳಲ್ಲಿ ಪ್ರಚಾರ ನಡೆಸಲು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸೂಚಿಸಲಾಗಿದೆ. ಗಣತಿಗೆ ಹೋಗುವ ಪ್ರದೇಶದಲ್ಲಿ ಇಂತಹ ಪ್ರಚಾರ ಕೈಗೊಂಡರೆ ಸಮೀಕ್ಷೆ ಸುಲಭವಾಗಲಿದೆ, ತ್ವರಿತವಾಗಿಯೂ ಆಗಲಿದೆ. ಆಶಾ ಕಾರ್ಯಕರ್ತರು ಎಲ್ಲ ಮನೆಗಳಿಗೆ ಪ್ರಶ್ನಾವಳಿ ಹಂಚಿದ್ದಾರೆ. ಅವೆಲ್ಲವನ್ನೂ ಭರ್ತಿ ಮಾಡಿಟ್ಟುಕೊಳ್ಳುವಂತೆ ಮನೆಯ ಸದಸ್ಯರಿಗೆ ಹೇಳಲಾಗಿದೆ” ಎಂದು ಹೇಳಿದರು.

“ಈಗಾಗಲೇ ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ ನಡೆಸಿರುವುದರಿಂದ ತಂತ್ರಾಂಶ ಬಳಕೆ ಸುಲಭವಾಗಲಿದೆ” ಎಂದರು.

Read More
Next Story