ಮಳೆ ಮ್ಯಾಜಿಕ್‌ | ಧಗೆಯಿಂದ ದಹಿಸುತ್ತಿದ್ದ ಬೆಂಗಳೂರು ಕೂಲ್‌ ಕೂಲ್‌..! ಮೈಸೂರು, ಮಂಡ್ಯ, ತುಮಕೂರಿನಲ್ಲೂ ಮಳೆ
x
ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಖುಷಿಯಾಗಿದ್ದಾರೆ.

ಮಳೆ ಮ್ಯಾಜಿಕ್‌ | ಧಗೆಯಿಂದ ದಹಿಸುತ್ತಿದ್ದ ಬೆಂಗಳೂರು ಕೂಲ್‌ ಕೂಲ್‌..! ಮೈಸೂರು, ಮಂಡ್ಯ, ತುಮಕೂರಿನಲ್ಲೂ ಮಳೆ

ನಿನ್ನೆಯಿಂದ ವರುಣ ದೇವನ ಕೃಪೆಯಾಗಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಉತ್ತಮ ಮಳೆಯಾಗಿ ವಾತಾವರಣವನ್ನು ತಂಪು ಮಾಡಿದೆ


Click the Play button to hear this message in audio format

ಬೆಂಗಳೂರು: ಹಿಂದೆಂದೂ ಕಂಡಿರದ ಬಿಸಿಲಬೇಗೆಗೆ ಬಸವಳಿದಿದ್ದ ರಾಜ್ಯದ ಜನತೆಗೆ ಶುಕ್ರವಾರ ಸುರಿದ ಮಳೆ ಒಂದಿಷ್ಟು ಸಮಾಧಾನ ತಂದಿದೆ.

ಶುಕ್ರವಾರ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಉತ್ತಮ ಮಳೆ ಸುರಿದಿದ್ದು, ಐದು ತಿಂಗಳ ಬಳಿಕ ನಗರದ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನವೇ ನಗರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಶುರುವಾಗಿದೆ.

ಕಂಟೋನ್ಮೆಂಟ್, ರಾಜಾಜಿನಗರ, ಮಲ್ಲೇಶ್ವರಂ, ವಸಂತ ನಗರ, ಬಾಣಸವಾಡಿ, ಹೆಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಹೆಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ನಾಯಂಡಹಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ.

ಬೆಳಗ್ಗೆಯಿಂದಲೂ ತುಸು ಹೆಚ್ಚೇ ಇದ್ದ ಬಿಸಿಲು ಮಧ್ಯಾಹ್ನ ಒಂದು ಗಂಟೆಯ ಬಳಿಕ ಇಳಿದು, ಸಂಜೆಯ ವಾತಾವರಣ ಸೃಷ್ಟಿಯಾಯಿತು. ಎಲ್ಲೆಲ್ಲೂ ಕಾರ್ಮೋಡಗಳೇ ಕಂಡು ಬಂದು, ಮೋಡ ಮುಸುಕಿದ ವಾತಾವರಣ ಬೆಂಗಳೂರಿನಲ್ಲಿ ಇತ್ತು.

ಇನ್ನು ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಂತಸ ವ್ಯಕ್ತ ಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಳೆಯ ವಿಡಿಯೋವೊಂದನ್ನು ಶೇರ್‌ ಮಾಡಿ, "ಏರ್‌ಕಂಡೀಶನ್‌ ಸಿಟಿಯ ವೈಭವ ಮತ್ತೆ ಮರುಕಳಿಸಿದೆ. ತಿಂಗಳಾನುಗಟ್ಟಲೆ ಬಿಸಿಲ ಧಗೆಯ ನಂತರ ವರುಣನು ಬೆಂಗಳೂರಿನ ಮೇಲೆ ಕೃಪೆ ತೋರಿದ್ದಾನೆ. ಬಿಸಿಲ ಝಳದಿಂದ ಕೊನೆಗೂ ಮುಕ್ತಿ ಸಿಗುತ್ತಿದೆ. ದ್ವೇಷ- ಕೋಮು ದಳ್ಳುರಿಯ ಧಗೆಯಿಂದ ಮುಕ್ತಿ ಸಿಗಲು ಇನ್ನೊಂದು ತಿಂಗಳಷ್ಟೇ ಬಾಕಿ ಇದೆ" ಎಂದು ಮಾರ್ಮಿಕ ಪೋಸ್ಟ್‌ ಬರೆದುಕೊಂಡಿದ್ದಾರೆ.

ಧರೆಗೆ ಬಿದ್ದ ಮರಗಳು

ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ.

ಟ್ರಾನ್ಸ್ ಫಾರ್ಮರ್ ಸ್ಫೋಟ

ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟ್ರಾನ್ಸ್ ಫಾರ್ಮನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬ್ಲಾಸ್ಟ್‌ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮನರ್‌ ಸ್ಫೋಟದಿಂದಾಗಿ ವಿದ್ಯುತ್‌ ಕಡಿತವಾಗಿದೆ.

ರಾಜ್ಯದಲ್ಲಿ ಮೇ 4 ರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More
Next Story