Axe attack on Jnanabharati campus forest in the name of development; High Court orders not to cut down trees
x

ಜ್ಞಾನಭಾರತಿ ಆವರಣದಲ್ಲಿ ಮರಗಳನ್ನು ಕತ್ತರಿಸಿ ಸಾಗಿಸುತ್ತಿರುವುದು.

ಅಭಿವೃದ್ಧಿಯ ಹೆಸರಿನಲ್ಲಿ ಉಸಿರುಗಟ್ಟುತ್ತಿರುವ ಜ್ಞಾನಭಾರತಿ: ಮರಗಳ ಹನನಕ್ಕೆ ಭಾರೀ ವಿರೋಧ

ಜ್ಞಾನಭಾರತಿ ಕ್ಯಾಂಪಸ್‌ ಒಟ್ಟು 1,112 ಎಕರೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ವಿಶ್ವವಿದ್ಯಾನಿಲಯದ ಬಯೋಪಾರ್ಕ್‌ನಲ್ಲಿ ಔಷಧೀಯ ಸಸ್ಯಗಳು, ಬಿದಿರು, ಅಶೋಕ, ಬೇವು, ನೇರಳೆ ಹಣ್ಣು ಸೇರಿದಂತೆ ವಿವಿಧ ಬಗೆಯ ಮರಗಳಿವೆ.


Click the Play button to hear this message in audio format

ನಗರದ ಶ್ವಾಸಕೋಶ ಎಂದೇ ಕರೆಯಲ್ಪಡುವ ಬೆಂಗಳೂರು ವಿಶ್ವವಿದ್ಯಾಲಯದ ಹಸಿರು ಸಿರಿಯಾದ ಜ್ಞಾನಭಾರತಿ ಆವರಣದಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಕೊಡಲಿ ಏಟು ಬೀಳುತ್ತಿದೆ. ಪರಿಸರ ಸಂರಕ್ಷಣೆಗಾಗಿ "ದಿನಕ್ಕೊಂದು ಗಿಡ ನೆಡು, ಪ್ಲಾಸ್ಟಿಕ್ ದೂರ ಮಾಡು" ಎಂಬ ಘೋಷವಾಕ್ಯದ ಬೋರ್ಡ್‌ಗಳು ರಾರಾಜಿಸುತ್ತಿರುವ ವಿಶ್ವವಿದ್ಯಾಲಯದ ಆವರಣದಲ್ಲಿಯೇ, ಅದೇ ಬೋರ್ಡ್‌ಗಳ ಕೂಗಳತೆಯ ದೂರದಲ್ಲಿ ನೂರಾರು ಮರಗಳು ನೆಲಕ್ಕುರುಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆಡಳಿತಾತ್ಮಕ ಮತ್ತು ಸಂಶೋಧನಾ ಬ್ಲಾಕ್‌ಗಳ ನಿರ್ಮಾಣಕ್ಕಾಗಿ ಬರೋಬ್ಬರಿ 150ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದು, ಸರ್ಕಾರದ ಈ ನಡೆಗೆ ಪರಿಸರವಾದಿಗಳು ಹಾಗೂ ವಿದ್ಯಾರ್ಥಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯೋಜನೆ ಮತ್ತು ವಿವಾದದ ಹಿನ್ನೆಲೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಪಿಎಂ-ಉಷಾ' (PM-USHA) ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂಪಾಯಿ ಅನುದಾನ ಲಭ್ಯವಾಗಿದೆ. ಇದರಲ್ಲಿ 65 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ಯೋಜನೆಯ ಭಾಗವಾಗಿ ನಿರ್ಮಾಣವಾಗಲಿರುವ ನೂತನ ಕಟ್ಟಡಗಳಿಗೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ, ಈ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ನಾಶವೇ ಅಡಿಪಾಯವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಅಂಬೇಡ್ಕರ್ ಥೀಮ್ ಪಾರ್ಕ್, ಯುವಿಸಿಇ (UVCE) ಹೊಸ ಕ್ಯಾಂಪಸ್ ಮತ್ತು ಇತರೆ ಸಂಶೋಧನಾ ಬ್ಲಾಕ್‌ಗಳಿಗಾಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ದಟ್ಟ ಕಾಡನ್ನು ಬಲಿ ಪಡೆಯಲಾಗುತ್ತಿದೆ ಎಂಬುದು ಪರಿಸರವಾದಿಗಳ ಆರೋಪ.

ಜ್ಞಾನಭಾರತಿ: ಕೇವಲ ಕ್ಯಾಂಪಸ್ ಅಲ್ಲ, ಅದೊಂದು ಜೀವವೈವಿಧ್ಯದ ತಾಣ

ಬೆಂಗಳೂರು ನಗರದಲ್ಲಿ ಇನ್ನೂ ಹಸಿರು ಉಳಿದುಕೊಂಡಿರುವ ಬೆರಳೆಣಿಕೆಯ ಪ್ರದೇಶಗಳಲ್ಲಿ ಜ್ಞಾನಭಾರತಿ ಕ್ಯಾಂಪಸ್ ಪ್ರಮುಖವಾದುದು. ಒಟ್ಟು 1,112 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಪ್ರದೇಶವು ಕೇವಲ ಶಿಕ್ಷಣ ಸಂಸ್ಥೆಗಳಿಗೆ ಸೀಮಿತವಾಗಿಲ್ಲ. ಇದು ದಟ್ಟ ಕಾಡು, ಜೌಗು ಪ್ರದೇಶಗಳು ಮತ್ತು ನೈಸರ್ಗಿಕ ಜಲಮೂಲಗಳನ್ನು ಒಳಗೊಂಡಿರುವ ಒಂದು ಪರಿಪೂರ್ಣ ಪರಿಸರ ವ್ಯವಸ್ಥೆಯಾಗಿದೆ. ಈ ಹಸಿರು ವಲಯವು ನವಿಲುಗಳು, ಹಾವುಗಳು, ಕಾಡುಬೆಕ್ಕುಗಳು ಸೇರಿದಂತೆ 16ಕ್ಕೂ ಹೆಚ್ಚು ಜಾತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. ಸ್ಥಳೀಯರ ಪ್ರಕಾರ, ಅಪರೂಪಕ್ಕೆಂಬಂತೆ ಇಲ್ಲಿ ಚಿರತೆಗಳೂ ಕಾಣಿಸಿಕೊಳ್ಳುತ್ತವೆ. ಬಯೋಪಾರ್ಕ್‌ನಲ್ಲಿರುವ ಔಷಧೀಯ ಸಸ್ಯಗಳು, ಬಿದಿರು, ಅಶೋಕ, ಬೇವು, ನೇರಳೆ ಮುಂತಾದ ಮರಗಳು ಈ ಪ್ರದೇಶದ ಹಸಿರು ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇಂತಹ ಸೂಕ್ಷ್ಮ ಜೀವವೈವಿಧ್ಯತೆಯ ತಾಣದಲ್ಲಿ ಮರಗಳ ಹನನವು ಪ್ರಾಣಿ ಸಂಕುಲಕ್ಕೆ ಮತ್ತು ಒಟ್ಟಾರೆ ಪರಿಸರಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ನ್ಯಾಯಾಲಯದ ಅಂಗಳದಲ್ಲಿ ಮರಗಳ ರಕ್ಷಣೆ

ಮರಗಳ ಕಡಿಯುವಿಕೆಯ ವಿರುದ್ಧ ಕಾನೂನು ಹೋರಾಟವೂ ಆರಂಭವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ. ಅಜಯ್ ಕುಮಾರ್ ಮತ್ತು ಕೋರಮಂಗಲದ ಪಾರ್ವತಿ ಶ್ರೀರಾಮ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ. "ಪಿಎಂ-ಉಷಾ ಯೋಜನೆಗೆ 138 ಮರಗಳನ್ನು ಕಡಿಯಲಾಗಿದೆ ಮತ್ತು 54 ಮರಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಆರ್ಕಿಟೆಕ್ಚರ್ ಕೌನ್ಸಿಲ್ ಕಟ್ಟಡಕ್ಕಾಗಿ ಮತ್ತೆ 350 ಮರಗಳನ್ನು ಕಡಿಯುವ ಭೀತಿ ಎದುರಾಗಿದೆ," ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ನಡೆಸಿದ ಹೈಕೋರ್ಟ್, ಈಗಾಗಲೇ ಕತ್ತರಿಸಿರುವ ಮರಗಳ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲವಾದರೂ, ಸದ್ಯಕ್ಕೆ ಹೊಸದಾಗಿ ಯಾವುದೇ ಮರಗಳನ್ನು ಕಡಿಯಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಅಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಸರ್ಕಾರ ಹಾಗೂ ಎನ್‌ಎಲ್‌ಎಸ್‌ಯುಐ (NLSIU) ಸೇರಿದಂತೆ 40 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಕೂಗು

ಅಭಿವೃದ್ಧಿಯ ಅಗತ್ಯತೆಯನ್ನು ಯಾರೂ ಅಲ್ಲಗಳೆಯುತ್ತಿಲ್ಲವಾದರೂ, ಅದಕ್ಕಾಗಿ ಪರಿಸರವನ್ನು ಬಲಿಕೊಡಬೇಕೇ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ. ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. "ನಮ್ಮ ಮರಗಳನ್ನು ನಾವೇ ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಆಮ್ಲಜನಕ ಬೇಕಿದ್ದರೆ ಇಂದೇ ನಾವು ಎಚ್ಚೆತ್ತುಕೊಳ್ಳಬೇಕು. ದೆಹಲಿಯಲ್ಲಿ ಮರಗಳಿಲ್ಲದೆ ವಾಯುಮಾಲಿನ್ಯದಿಂದ ಜನ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಫಾಗ್ ಆವರಿಸಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಬೆಂಗಳೂರಿಗೂ ಅಂತಹ ದುಸ್ಥಿತಿ ಬರುವುದು ಬೇಡ. ನಮ್ಮ 'ಗಾರ್ಡನ್ ಸಿಟಿ' ಎಂಬ ಹೆಗ್ಗಳಿಕೆ ಉಳಿಯಬೇಕಾದರೆ ಮರಗಳು ಉಳಿಯಲೇಬೇಕು," ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕೆಲವರು ಅಭಿವೃದ್ಧಿಯ ಪರವಾಗಿ ಮಾತನಾಡಿದರೂ, ಅದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. "ಕಟ್ಟಡಗಳು ಬೇಕು, ಆದರೆ ಅದಕ್ಕಾಗಿ ಇರುವ ಮರಗಳನ್ನೆಲ್ಲಾ ಕಡಿಯುವುದು ಸರಿಯಲ್ಲ. ಅನಿವಾರ್ಯವಾಗಿ ಒಂದು ಮರವನ್ನು ಕಡಿದರೆ, ಅದಕ್ಕೆ ಪ್ರತಿಯಾಗಿ ಹತ್ತು ಸಸಿಗಳನ್ನು ನೆಟ್ಟು ಪೋಷಿಸಬೇಕು. ಸುಮ್ಮನೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶ ಮಾಡುವುದು ತಪ್ಪು," ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಅತಿಕ್ರಮಣ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಿ

ಕಳೆದ ಹಲವು ವರ್ಷಗಳಿಂದ ವಿಶ್ವವಿದ್ಯಾಲಯದ 75 ಎಕರೆ ಒತ್ತುವರಿ ಮಾಡಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಈ ಹಿಂದೆ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಅದರಲ್ಲಿ 35 ಎಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಆಗಸ್ಟ್‌ನಲ್ಲಿ ಕುಲಪತಿಗಳು ತಿಳಿಸಿದ್ದರು. ಅಗತ್ಯವಿದ್ದರೆ ಒತ್ತುವರಿಯಾಗಿರುವ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಿ. ವಿಶ್ವವಿದ್ಯಾನಿಲಯದ ನಾಲ್ಕು ಭಾಗಗಳಲ್ಲಿ ಮಾತ್ರ ನೈಜ ಕಾಡನ್ನು ಉಳಿಸಿಕೊಳ್ಳಲಾಗಿದೆ. ಅದನ್ನು ಬಯೋ ರಿಸರ್ವ್‌ ಪಾರ್ಕ್‌ ಎಂದು ಗುರುತಿಸಲಾಗಿದೆ. ಆ ಜಾಗವನ್ನು ಬಿಟ್ಟು ಬೇರೆ ಕಡೆ ಅಭಿವೃದ್ಧಿ ಮಾಡಲಿ. ವಿಶ್ವ ವಿದ್ಯಾಲಯದಲ್ಲಿ ಬಹಳಷ್ಟು ಕಡೆ ಶಿಥಿಲ ಸ್ಥಿತಿಯಲ್ಲಿವೆ. ಅವಗಳನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಿ. 29ಕ್ಕೂ ಹೆಚ್ಚು ಕಟ್ಟಡಗಳು 8,000 ಚದರ ಅಡಿಗಿಂತ ದೊಡ್ಡದಾಗಿವೆ. ಅದೇ ಕಟ್ಟಡಗಳ ಮೇಲೆ ಮತ್ತೊಂದು ಕಟ್ಟಡ ಕಟ್ಟಿದರೆ ಹೊಸ ಕ್ಯಾಂಪಸ್‌ನಷ್ಟೇ ವಿಸ್ತೀರ್ಣ ಹೊಂದಿದಂತಾಗುತ್ತದೆ. ನಗರದಲ್ಲಿ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಹತ್ತಕ್ಕೂ ಹೆಚ್ಚು ವಿಭಾಗಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿ ತಲುಪಿವೆ. ಆ ವಿಭಾಗಗಳ ಕಟ್ಟಡದಲ್ಲೇ ಹೊಸ ವಿಭಾಗಗಳಿಗೆ ಜಾಗ ನೀಡಬಹುದು ಎಂದು ಸಲಹೆ ನೀಡಿದರು.

ಜೀವ ವೈವಿಧ್ಯತೆಗೆ ಧಕ್ಕೆ

ಪರಿಸರ ಹೋರಾಟಗಾರ್ತಿ ಪಾರ್ವತಿ ಶ್ರೀರಾಮ್‌ ಮಾತನಾಡಿ,"ಹಳೇ ಕಟ್ಟಡಗಳನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಿ. ಆದರೆ ಕಾಡನ್ನು ನಾಶ ಮಾಡಿ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಅರಣ್ಯ ಇಲಾಖೆ ಕಾಡಿನ ವಿಸ್ತೀರ್ಣವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಆದರೆ ಇಂದು ಪರಿಸರವಾದಿಗಳು ಕಾಡನ್ನು ಉಳಿಸಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ಮುಂದಿನ ಪೀಳಿಗೆಗೆ ಅರಣ್ಯವನ್ನು ಉಳಿಸುವ ಕಾರ್ಯ ಮಾಡಬೇಕು. ಜ್ಞಾನಭಾರತಿ ಕ್ಯಾಂಪಸ್‌ ಬೆಂಗಳೂರಿಗೆ ಪ್ರಮುಖವಾಗಿದೆ" ಎಂದರು.

ವಿಶ್ವವಿದ್ಯಾನಿಲಯದಲ್ಲಿ ನೂರಾರು ವರ್ಷಗಳಷ್ಟು ಹಳೆಯ ಮರಗಳು, ಸಾವಿರಾರು ಪ್ರಾಣಿಪಕ್ಷಿಗಳಿವೆ. ಹೊಸ ಕಾಮಗಾರಿಗಳನ್ನು ಮಾಡುವುದರಿಂದ ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗಲಿದೆ. ಕ್ಯಾಂಪಸ್‌ನೊಳಗೆ ಸಂಚರಿಸಿದರೆ ಸಾಕು ಉತ್ತಮ ವಾತಾವರಣದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ನಾವು ನ.21ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ನಂತರವೂ ಹಲವಾರು ಮರಗಳನ್ನು ಕಡಿಯಲಾಗಿದೆ. ನಾವು ಮತ್ತೊಮ್ಮೆ ಅರ್ಜಿ ಸಲ್ಲಿಸಿದಾಗ ಮರ ಕಡಿಯಬಾರದು ಎಂದು ಆದೇಶಿಸಿದ್ದರೂ. ಮರ ಕಡಿಯುವುದನ್ನು ಮುಂದುವರೆಸಲಾಗಿದೆ ಎಂದು ಆರೋಪಿಸಿದರು.

ಮರ ಕಡಿಯಬಾರದು ಎಂದು ಸುಮಾರು 25 ಸಾವಿರ ನಾಗರಿಕರ ಸಹಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದ್ದು, ವಿಶ್ವವಿದ್ಯಾನಿಲಯಕ್ಕೂ ಸಹಿ ಪ್ರತಿಯನ್ನು ಒದಗಿಸಲಾಗಿದೆ. ಆದರೆ ವಿವಿ ನಮ್ಮ ಮನವಿಯನ್ನು ಪರಿಗಣಿಸಿಯೇ ಇಲ್ಲ. ಮಾನವನಿಲ್ಲದೆ ಪರಿಸರ ಇರುತ್ತದೆ. ಆದರೆ ಪರಿಸರ ಇಲ್ಲದೇ ಮಾನವನಿರಲು ಸಾಧ್ಯವಿಲ್ಲ. ವಿಶ್ವವಿದ್ಯಾನಿಲಯದ ಪರಿಸರವನ್ನು ಉಳಿಸಲು ಎಲ್ಲಾ ನಾಗರಿಕರು ಒಂದಾಗಬೇಕು ಎಂದರು.

350 ಮರಗಳಿಗೆ ಕೊಡಲಿ ಪೆಟ್ಟು

ಪರಿಸರವನ್ನು ರಕ್ಷಣೆ ಮಾಡುವುದು ಸರ್ಕಾರಕ್ಕೆ ಬೇಕಿಲ್ಲ ಎಂದೆನಸುತ್ತಿದೆ. ವಿಶ್ವವಿದ್ಯಾನಿಲಯ ತಮ್ಮ ಜಾಗವನ್ನು ಬೇರೆ ಸಂಸ್ಥೆಗಳಿಗೆ ನೀಡುವುದಕ್ಕೆ ನಮ್ಮ ವಿರೋಧವಿದೆ. ದೆಹಲಿಯ ವಾಸ್ತಶಿಲ್ಪ ಪರಿಷತ್‌ಗೆ ಜ್ಞಾನಭಾರತಿ ಕ್ಯಾಂಪ್‌ಸ್‌ನಲ್ಲಿ ಜಾಗ ನೀಡಲಾಗಿದೆ. ಇದರಿಂದ 350 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದಕ್ಕಾಗಿ ಟೆಂಡರ್‌ಗೆ ಜಾಹೀರಾತು ನೀಡಲಾಗಿದೆ. ಇದೇ ರೀತಿ ಬೇರೆ-ಬೇರೆ ಸಂಸ್ಥೆಗಳಿಗೆ ಜಾಗ ನೀಡುತ್ತಿದ್ದರೆ ಮುಂದಿನ ದಿನಗಳಲ್ಲಿ ಮರಗಳನ್ನು ಕೇವಲ ಚತ್ರಗಳಲ್ಲಿ ನೋಡಬೇಕಾಗುತ್ತದೆ. ವಿವಿ ಆಡಳಿತ ಮಂಡಳಿ ಕೇವಲ ಎರಡೇ ದಿನದಲ್ಲಿ ಮರ ಕಡಿಯುವ ಟೆಂಡರ್‌ಗೆ ಅನುಮತಿ ನೀಡಿದ್ದು, ಹಲವು ಸಂಶಯಗಳಿಗೂ ಕಾರಣವಾಗಿದೆ ಎಂದು ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌‌ನ ಅಧ್ಯಕ್ಷ ಸಿ. ಅಜಯ್‌ ಕುಮಾರ್‌ ಆರೋಪ ಮಾಡಿದರು.

ಒಟ್ಟಿನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಈ ಸಂಘರ್ಷ ಕೇವಲ ಮರಗಳ ಉಳಿವಿಗಷ್ಟೇ ಸೀಮಿತವಾಗಿಲ್ಲ. ಇದು ಬೆಂಗಳೂರಿನ ಭವಿಷ್ಯದ ಪರಿಸರ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನದ ಪ್ರಶ್ನೆಯಾಗಿದೆ. ನ್ಯಾಯಾಲಯದ ಮುಂದಿನ ಆದೇಶ ಮತ್ತು ಸರ್ಕಾರದ ನಡೆ ಈ ಹಸಿರು ತಾಣದ ಭವಿಷ್ಯವನ್ನು ನಿರ್ಧರಿಸಲಿವೆ.

ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮರಗಳ ಆಹುತಿ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ವರದಿ ಮಾಡಿತ್ತು.

Read More
Next Story