
Save Lalbagh| ಲಾಲ್‌ಬಾಗ್ ಹಾಳು ಮಾಡುವಷ್ಟು ಮೂರ್ಖನಲ್ಲ; ಬಿಜೆಪಿ ನಾಯಕರಿಗೆ ಡಿಸಿಎಂ ತಿರುಗೇಟು
"ಆರ್‌ಎಸ್‌ಎಸ್ ಇಲ್ಲದೇ ಹೋದರೆ ಬಿಜೆಪಿ ಶೂನ್ಯ. ಬಿಜೆಪಿ ಬದುಕಿರುವುದೇ ಆರ್‌ಎಸ್‌ಎಸ್‌ನಿಂದ. ಇದು ಬಿಟ್ಟರೆ ಬೇರೆ ಯಾವುದೇ ಅಸ್ತ್ರ ಅವರ ಬಳಿ ಇಲ್ಲ. ಅವರಲ್ಲಿ ಶೇ 20 ರಷ್ಟು ಜನ ಬಿಟ್ಟರೆ ಮಿಕ್ಕ ಎಲ್ಲರೂ ಭ್ರಷ್ಟರೇ" ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿ ನಾಯಕರು ಟೀಕೆ ಬಿಟ್ಟು ಸಲಹೆ ನೀಡಲಿ. ಈ ಯೋಜನೆ ನನ್ನ ಆಸ್ತಿಯಲ್ಲ. ಸಾರ್ವಜನಿಕರಿಗಾಗಿ ಮಾಡುತ್ತಿರುವ ಯೋಜನೆ. ನನಗೆ ಬಿಜೆಪಿಯವರು ಪರಿಹಾರ ಮಾತ್ರ ತಿಳಿಸಲಿ, ಅಷ್ಟಕ್ಕೂ ಲಾಲ್‌ಬಾಗ್ ಹಾಳು ಮಾಡುವಷ್ಟು ಮೂರ್ಖ ನಾನಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟನಲ್ ರಸ್ತೆ ವಿರೋಧಿಸಿ ಬಿಜೆಪಿಯವರು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ. ಅವರಿಗಿಂತ ಹೆಚ್ಚು ಸಂಘಟನೆ ಮಾಡುವವನು ನಾನು. ಅವರು ಆರ್‌ಎಸ್‌ಎಸ್ ಮುಂದಿಟ್ಟುಕೊಂಡು ಸಂಘಟನೆ ಮಾಡುತ್ತಿದ್ದಾರೆ. ನಾವು ಪಕ್ಷದ ಮೂಲಕವೇ ಸಂಘಟನೆ ಮಾಡುತ್ತಿದ್ದೇವೆ. ಯಾವುದೇ ಪರಿಹಾರ ಹೇಳದೆ ಟೀಕೆ ಮಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಇಲ್ಲದೇ ಹೋದರೆ ಬಿಜೆಪಿ ಶೂನ್ಯ
"ಆರ್‌ಎಸ್‌ಎಸ್ ಇಲ್ಲದೇ ಹೋದರೆ ಬಿಜೆಪಿ ಶೂನ್ಯ. ಬಿಜೆಪಿ ಬದುಕಿರುವುದೇ ಆರ್‌ಎಸ್‌ಎಸ್‌ನಿಂದ. ಇದು ಬಿಟ್ಟರೆ ಬೇರೆ ಯಾವುದೇ ಅಸ್ತ್ರ ಅವರ ಬಳಿ ಇಲ್ಲ. ಅವರಲ್ಲಿ ಶೇ 20 ರಷ್ಟು ಜನ ಬಿಟ್ಟರೆ ಮಿಕ್ಕ ಎಲ್ಲರೂ ಭ್ರಷ್ಟರೇ. ದಳ, ಕಾಂಗ್ರೆಸ್ ಹಾಗೂ ಬೇರೆ, ಬೇರೆ ಪಕ್ಷಗಳಿಂದ ಹೋಗಿರುವವರೇ ಅಲ್ಲಿರುವುದು" ಎಂದು ತಿವಿದರು.
"ಮೆಟ್ರೋ ಮಾರ್ಗ ಹೋಗುವುದು ಟನಲ್ ಮೂಲಕವೇ ಅಲ್ಲವೇ?, ಈ ಯೋಜನೆ ತಂದವರು ಯಾರು?, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಹತ್ತು ದೇಶಗಳನ್ನು ತಿರುಗಿ ಅಧ್ಯಯನ ನಡೆಸಿ ವರದಿ ಮಾಡಿದ್ದೆ. ಎಸ್.ಎಂ. ಕೃಷ್ಣ , ಅನಂತಕುಮಾರ್ ಅವರು ಹಾಗೂ ನಾನು ದೆಹಲಿಗೆ ತೆರಳಿ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ವರದಿ ನೀಡಿದ್ದೆವು. ಹೀಗೆ ಯೋಜನೆ ಪ್ರಾರಂಭವಾಯಿತು" ಎಂದು ವಿವರಿಸಿದರು.
ತೇಜಸ್ವಿ ದೊಡ್ಡ ನಾಯಕ; ಅಮೆರಿಕಾದಲ್ಲಿ ಉಗಿಸಿಕೊಂಡು ಬಂದ
ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿಗೆ ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ ಎಂಬ ಅಶೋಕ್ ಆರೋಪದ ಬಗ್ಗೆ ಕೇಳಿದಾಗ, "ನಾನೇಕೆ ಧಮ್ಕಿ ಹಾಕಲಿ?, ರಾಮಮೂರ್ತಿ ನಮ್ಮ ಹುಡುಗ. ತೇಜಸ್ವಿಸೂರ್ಯ ದೊಡ್ಡ ನಾಯಕ, ಅತೀ ಬುದ್ದಿವಂತ. ಅದಕ್ಕೆ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಹೋಗಿದ್ದ. ಯಾವುದೇ ಅನುಮತಿ ಇಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಮಾಡಲು ಹೋಗಿ ಉಗಿಸಿಕೊಂಡು ಬಂದ. ಈಗ ಕಾರಲ್ಲಿ ಓಡಾಡಬೇಡಿ ಎನ್ನುತ್ತಾನೆ. ಮದುವೆಯಾಗುವ ವೇಳೆ ಹೊಸ ಕಾರು ಬೇಕು ಎಂದು ಅರ್ಜಿ ನೀಡಿದ್ದ. ದಾಖಲೆ ಬಿಡುಗಡೆ ಮಾಡಿ ಎಂದರೆ ಬಿಡುಗಡೆ ಮಾಡುತ್ತೇವೆ" ಎಂದು ಹೇಳಿದರು.
"ಈಗ ಆತ ಹಾಗೂ ಬಿಜೆಪಿ ನಾಯಕರು ಕಾರಲ್ಲಿ ಓಡಾಡುವುದು ಬಿಟ್ಟು ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಸಲಿ. ಇವರ ನಾಟಕಗಳನ್ನು ಕೇಳುವವರು ಯಾರು?, ಆತನಿಗೆ ಮದುವೆಗೆ ಮುಂಚಿತವಾಗಿ ಹೊಸ ಕಾರು ಏಕೆ ಬೇಕಿತ್ತು?, ಕಾರಲ್ಲಿ ಓಡಾಡುವುದು ಪ್ರತಿಷ್ಠೆಯೇ? , ಸಾಮಾಜಿಕ ಅನಿವಾರ್ಯತೆ ಅವನಿಗೆ ಎದುರಾಯಿತೇ?, ರೈಲು, ಮೆಟ್ರೋದಲ್ಲಿ ಓಡಾಡಲು ಬೇಡ ಎಂದವರಾರು?" ಎಂದು ಕಿಡಿಕಾರಿದರು.
"ತೇಜಸ್ವಿ ಸೂರ್ಯ ರೈಲು ಯೋಜನೆ ಮಾಡಿ ಎಂದು ಹೇಳುತ್ತಾನೆ. ಆ ಯೋಜನೆ ಮಾಡಲು ಬೆಂಗಳೂರಿನಲ್ಲಿ ಜಾಗ ಎಲ್ಲಿದೆ?, ಕೇಂದ್ರ ಸರ್ಕಾರವೇ ಈ ಯೋಜನೆ ಮಾಡಲಿ. ಬಿಆರ್‌ಟಿಎಸ್ ಯೋಜನೆ ಮಾಡಲು ಬೆಂಗಳೂರಿನಲ್ಲಿ ಎಲ್ಲಾದರೂ ಜಾಗ ಇದೆಯೇ?, ಅವರಿಗೆ ತಲೆ ಇದೆಯೇ?, ಇದರಿಂದ ದಿನಕ್ಕೆ ನೂರಾರು ಜನ ಸಾಯಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಅವರು ಬಿಆರ್‌ಟಿಎಸ್ ಯೋಜನೆಯಲ್ಲಿ ವಿಫಲರಾದರು" ಎಂದು ಟೀಕಿಸಿದರು.
ಲಾಲ್ ಬಾಗ್ ಹಾಳು ಮಾಡುವ ಮೂರ್ಖನಲ್ಲ
"ನಾನು ಎಲ್ಲಾ ರೀತಿಯ ಅಧ್ಯಯನ ನಡೆಸಿದ್ದೇನೆ. ಲಾಲ್ ಬಾಗ್ ಹಾಳು ಮಾಡಲು ನಾನೇನು ಮೂರ್ಖನಲ್ಲ. ಇದರ ಇತಿಹಾಸವೂ ನನಗೆ ಗೊತ್ತಿದೆ. ಉದ್ಯಾನದಲ್ಲಿ ಎಷ್ಟು ಭಾಗ ಉಪಯೋಗವಾಗುತ್ತಿದೆ, ಉಪಯೋಗವಾಗುತ್ತಿಲ್ಲ ಎಂಬುದು ನನಗೆ ಗೊತ್ತಿದೆ" ಎಂದರು.
"ಯಾವುದೇ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡರೂ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಾರೆ. ಜಾರ್ಜ್ ಅವರ ಸಮಯದಲ್ಲಿ ಸ್ಟೀಲ್ ಬ್ರಿಡ್ಜ್ ಗೆ ವಿರೋಧ ಮಾಡಿದರು. ಒಂದೂ ಪರಿಹಾರ ಹೇಳುವುದಿಲ್ಲ. ಸಹಿ ಸಂಗ್ರಹ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಿ. ಅಶೋಕ್ ಅವರಲ್ಲಿ ಮನವಿ ಮಾಡುತ್ತೇನೆ. ಅವರ ನೇತೃತ್ವದಲ್ಲಿಯೇ ಸಮಿತಿ ಮಾಡುತ್ತೇವೆ. ಯಾರನ್ನು ಬೇಕಾದರೂ ಅದಕ್ಕೆ ಸೇರಿಸಿಕೊಳ್ಳಲಿ. ಅವರು ಸೂಚಿಸಿದ ತಾಂತ್ರಿಕ ಪರಿಣಿತರನ್ನೇ ಸಮಿತಿಗೆ ಸೇರಿಸೋಣ" ಎಂದು ಹೇಳಿದರು.
ಶಾಸಕರು, ಸಚಿವರು ಅವರವರ ಕೆಲಸಕ್ಕೆ ದೆಹಲಿಗೆ ಹೋಗುತ್ತಾರೆ
ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುತ್ತಿರುವುದರ ಬಗ್ಗೆ ಕೇಳಿದಾಗ, "ನಾಯಕರು ಅವರವರ ಕೆಲಸಗಳಿಗೆ ಹೋಗುತ್ತಿರುತ್ತಾರೆ. ನಾನು ನ.5 ಅಥವಾ 6 ನೇ ತಾರೀಕಿನಂದು ಬಿಹಾರಕ್ಕೆ ತೆರಳುತ್ತಿದ್ದೇನೆ. ಕೇಂದ್ರ ನಗರಾಭಿವೃದ್ಧಿ ಸಚಿವರು ಸಭೆ ಕರೆದಿದ್ದಾರೆ. ಇದರ ನಡುವೆ ಕಾವೇರಿ ನದಿ ನೀರಿನ ತೀರ್ಪಿದೆ. ಈ ಬಗ್ಗೆ ವಕೀಲರಿಂದ ವರದಿ ತರಿಸಿಕೊಂಡಿದ್ದೇನೆ. ಪರಿಸ್ಥಿತಿ ಹೀಗಿರುವಾಗ ದೆಹಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ರಾಜಕೀಯ ಬಣ್ಣ ಕಟ್ಟಿದರೆ ಹೇಗೆ?, ರಾಜಕೀಯ ಕಾರಣಕ್ಕೇ ಹೋಗುತ್ತಿದ್ದಾರೆ ಎಂದು ಬಿಂಬಿಸುವುದು ಏಕೆ ಎಂದು ಪ್ರಶ್ನಿಸಿದರು.
"ಒಂದಷ್ಟು ಜನರಿಗೆ ಬಿಹಾರದ ಜವಾಬ್ದಾರಿ ನೀಡಲಾಗಿದೆ. ರಿಜ್ವಾನ್, ಶ್ರೀನಿವಾಸ್ ಮಾನೆ ಸೇರಿದಂತೆ ಇತರರಿಗೆ ಒರಿಸ್ಸಾ ರಾಜ್ಯಗಳ ಜವಾಬ್ದಾರಿ ನೀಡಿದ್ದಾರೆ. ಸಂಸದ ತುಕಾರಾಂ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲು, ಸಂಘಟನೆ ವಿಚಾರವಾಗಿ ಕಳುಹಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲದರಲ್ಲೂ ರಾಜಕೀಯ ಇರುತ್ತದೆಯೇ" ಎಂದರು.
ಭಾರತಕ್ಕೆ ಜಯವಾಗಲಿ
ಮಹಿಳಾ ಕ್ರಿಕೆಟ್ ವಿಶ್ವಕಪ್ ಪೈನಲ್ ಪಂದ್ಯಾವಳಿ ಬಗ್ಗೆ ಕೇಳಿದಾಗ, "ಜಯ ಎಂದಿಗೂ ಭಾರತದ ಪರವಾಗಿ ಇರುತ್ತದೆ. ನಮ್ಮವರಿಗೆ ಶುಭವಾಗಲಿ" ಎಂದು ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ವನಿತೆಯರು ಗೆಲುವು ಸಾಧಿಸಲಿ ಎಂದು ಹಾರೈಸಿದರು.

