
ಸಾಂದರ್ಭಿಕ ಚಿತ್ರ
ಉಪನಗರ ರೈಲು ಯೋಜನೆಗೆ ಹಿನ್ನಡೆ: ಒಪ್ಪಂದ ರದ್ದುಗೊಳಿಸಿದ ಎಲ್ಆ್ಯಂಡ್ಟಿ
ಯೋಜನೆಯನ್ನು ಕಾರ್ಯಗತಗೊಳಿಸಲು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಭೂಮಿಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಎಲ್ ಅಂಡ್ ಟಿ ಆರೋಪಿಸಿದೆ.
ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲ್ವೆ ಯೋಜನೆಗೆ ಮತ್ತೊಮ್ಮೆ ದೊಡ್ಡ ಅಡಚಣೆ ಎದುರಾಗಿದ್ದು, ಯೋಜನೆಯು ಮತ್ತಷ್ಟು ವಿಳಂಬವಾಗುವ ಹಾದಿ ಹಿಡಿದಿದೆ. ಯೋಜನೆಗೆ ಅಗತ್ಯ ಭೂಮಿಯನ್ನು ಒದಗಿಸುವಲ್ಲಿ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ವಿಫಲವಾಗಿದೆ ಎಂದು ಆರೋಪಿಸಿ, ನಿರ್ಮಾಣ ಗುತ್ತಿಗೆ ಪಡೆದಿದ್ದ ಪ್ರತಿಷ್ಠಿತ ಎಲ್ಆ್ಯಂಡ್ಟಿಕಂಪನಿಯು ಕಾರಿಡಾರ್ 2 ಮತ್ತು 4ರ ಒಪ್ಪಂದವನ್ನು ರದ್ದುಗೊಳಿಸಿದೆ.
2022ರ ಆಗಸ್ಟ್ನಲ್ಲಿ ಒಪ್ಪಂದ ಮಾಡಿಕೊಂಡಾಗಿನಿಂದ, ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯಲ್ಲಿ ಕೇವಲ ಶೇ. 8.28ರಷ್ಟು ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ತಮಗೆ ಲಭ್ಯವಾಗಿದೆ ಎಂದು ಎಲ್ ಆ್ಯಂಡ್ ಟಿ ಹೇಳಿದೆ. ಹಲವು ಬಾರಿ ಭರವಸೆ ನೀಡಿದರೂ ಕೆ-ರೈಡ್ ಭೂಮಿ ಒದಗಿಸಲು ವಿಫಲವಾಗಿದ್ದರಿಂದ ಯಂತ್ರೋಪಕರಣಗಳು ನಿಷ್ಕ್ರಿಯಗೊಂಡು, ಯೋಜನಾ ವೆಚ್ಚವು ವಿಪರೀತವಾಗಿ ಏರಿಕೆಯಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದು ಅಸಾಧ್ಯವೆಂದು ತಿಳಿಸಿ ಎಲ್ ಆ್ಯಂಡ್ ಟಿ ಒಪ್ಪಂದದಿಂದ ಹಿಂದೆ ಸರಿದಿದೆ.
ಈ ಬೆಳವಣಿಗೆಯ ನಂತರ, ಎಲ್ಆ್ಯಂಡ್ಟಿ ಕಂಪನಿಯು ಜುಲೈ 29 ರಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಸಾಕಷ್ಟು ಭೂಮಿ ಲಭ್ಯವಿಲ್ಲದೆ ಯೋಜನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಎಲ್ ಆ್ಯಂಡ್ ಟಿ ನೀಡಿದ್ದ ಬ್ಯಾಂಕ್ ಗ್ಯಾರಂಟಿಗಳನ್ನು ಕೆ-ರೈಡ್ ಬಳಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ, ಎಲ್ಆ್ಯಂಡ್ಟಿ ಕಂಪನಿಯು ಕಾರಿಡಾರ್ 2ಕ್ಕೆ ಸುಮಾರು 500 ಕೋಟಿ ರೂಪಾಯಿ ಮತ್ತು ಕಾರಿಡಾರ್ 4ಕ್ಕೆ ಸುಮಾರು 150 ಕೋಟಿ ರೂಪಾಯಿಗಳ ಪರಿಹಾರವನ್ನು ಕೋರಿದೆ ಎಂದು ತಿಳಿದುಬಂದಿದೆ.
2020ರ ಅಕ್ಟೋಬರ್ನಲ್ಲಿ ಮಂಜೂರಾಗಿ, ಆರು ವರ್ಷಗಳಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಿದ್ದ ಈ ಯೋಜನೆಯು ಆರಂಭದಿಂದಲೂ ಹಲವಾರು ವಿಳಂಬಗಳನ್ನು ಎದುರಿಸುತ್ತಲೇ ಬಂದಿದೆ. ಇದೀಗ ಎಲ್ಆ್ಯಂಡ್ಟಿ ಯೋಜನೆಯಿಂದ ಹೊರನಡೆದಿರುವುದರಿಂದ, ಕಾರಿಡಾರ್ 2 ಮತ್ತು 4ರ ಕಾಮಗಾರಿಗಾಗಿ ಕೆ-ರೈಡ್ ಹೊಸದಾಗಿ ಟೆಂಡರ್ ಕರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ.