
Bangalore Sub-Urban Rail Project | ಕಾಮಗಾರಿ ಒಪ್ಪಂದ ರದ್ದು; ಎಲ್&ಟಿ ಏಕಪಕ್ಷೀಯ ನಡೆಗೆ ಕೆ-ರೈಡ್ ಆಕ್ಷೇಪ
ಭೂಮಿ ಲಭ್ಯವಿಲ್ಲದ ಕಾರಣದಿಂದಾಗುವ ವಿಳಂಬಕ್ಕೆ ಒಪ್ಪಂದದಲ್ಲಿ ಗಡುವು ವಿಸ್ತರಣೆ ಹಾಗೂ ತಂತ್ರದ ಪ್ರಕಾರ ದೂರುಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ. ಇದನ್ನು ಬಳಸದೇ ಎಲ್ & ಟಿಯು ಒಪ್ಪಂದವನ್ನು ಏಕಪಕ್ಷೀಯವಾಗಿ ಮತ್ತು ಅಕ್ರಮವಾಗಿ ರದ್ದುಗೊಳಿಸಿದೆ.
ಬೆಂಗಳೂರು ಉಪನಗರ ಯೋಜನೆ ಒಪ್ಪಂದ ರದ್ದುಪಡಿಸಿದ ಎಲ್ ಅಂಡ್ ಟಿ ಸಂಸ್ಥೆಯ (L&T) ಕ್ರಮಕ್ಕೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ಪ್ರೈಸ್ (K-RIDE) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕೆ-ರೈಡ್ ಜತೆ ಎರಡು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಒಪ್ಪಂದದ ಷರತ್ತುಗಳ ಪ್ರಕಾರ ತನಗೆ ನೀಡಿರುವ ಕೆಲಸ ಕಾರ್ಯಗಳನ್ನು ನಿಗದಿತ ಸಮಯ ಅಂದರೆ 27 ತಿಂಗಳಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಹೊಂದಿದೆ. ಎಲ್ & ಟಿ ಮನವಿಯಂತೆ ಕಾರಿಡಾರ್-2 (ಚಿಕ್ಕಬಾಣಾವರದಿಂದ ಬೆನ್ನಿಗಾನಹಳ್ಳಿ) ಯೋಜನೆಯ ಗಡುವು ವಿಸ್ತರಿಸಲಾಗಿದ್ದು, 2026 ಸೆ.30 ರವರೆಗೆ ನಿಗದಿಯಾಗಿದೆ.
ಇನ್ನು ಕಾರಿಡಾರ್-4 (ಹೀಲಲಿಗೆ-ರಾಜಾನುಕುಂಟೆ)ರ ಯೋಜನೆಯ ಗಡುವು ಅಕ್ಟೋಬರ್ 2026ರವರೆಗೆ ಇದೆ. ಈ ಒಪ್ಪಂದಗಳಲ್ಲಿ ಎಲ್ & ಟಿಗೆ ಯಾವುದೇ ಒಪ್ಪಂದ ರದ್ದುಗೊಳಿಸುವ ಅಧಿಕಾರವಿಲ್ಲ. ಆದರೂ, ಆ. 31ರಂದು ಈ ಎರಡು ಕಾರಿಡಾರ್ ಒಪ್ಪಂದವನ್ನು ತಕ್ಷಣದಿಂದಲೇ ರದ್ದುಗೊಳಿಸಿರುವುದಾಗಿ ಹೇಳಿದೆ. ಇದು ಒಪ್ಪಂದದ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ.
L&T ನಡೆ ನಿರೀಕ್ಷಿತವಲ್ಲ
ಎಲ್ & ಟಿಯು ಒಪ್ಪಂದ ಅವಧಿಯಲ್ಲಿಯೇ ಒಪ್ಪಂದದ ಬೆಲೆಯ ಪರಿಷ್ಕರಣೆ ಹಾಗೂ EPC ಒಪ್ಪಂದವನ್ನು BOQ (items-wise) ಒಪ್ಪಂದವಾಗಿ ಪರಿವರ್ತನೆ ಮಾಡುವ ಬೇಡಿಕೆಯನ್ನು ಮುಂದಿರಿಸಿದೆ, ಇದು ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ. ಎಲ್ & ಟಿಯು ಮಾಡಿದ ಎಲ್ಲ ಬೇಡಿಕೆಗಳನ್ನು K-RIDE ಒಪ್ಪಂದದ ನಿಯಮಗಳ ಪ್ರಕಾರ ಗಮನಕ್ಕೆ ತೆಗೆದುಕೊಂಡಿದೆ. ಈ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಕೆ- ರೈಡ್ ಪತ್ರಿಕಾ ಪ್ರಕಟಣೆಯಲ್ಲಿ ದೂರಿದೆ.
ಭೂಮಿ ಲಭ್ಯವಿಲ್ಲದ ಕಾರಣದಿಂದಾಗುವ ವಿಳಂಬಕ್ಕೆ ಒಪ್ಪಂದದಲ್ಲಿ ಗಡುವು ವಿಸ್ತರಣೆ ಹಾಗೂ ತಂತ್ರದ ಪ್ರಕಾರ ದೂರುಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ. ಇದನ್ನು ಬಳಸದೇ ಎಲ್ & ಟಿಯು ಒಪ್ಪಂದವನ್ನು ಏಕಪಕ್ಷೀಯವಾಗಿ ಮತ್ತು ಅಕ್ರಮವಾಗಿ ರದ್ದುಗೊಳಿಸಿದೆ.
ಎಲ್ & ಟಿಯ ಮನವಿಯಂತೆ, ಹಣಕಾಸು ಸಂಬಂಧಿತ ಬೇಡಿಕೆಗಳನ್ನು "ಸೌಹಾರ್ದ ಸಮಿತಿ"ಗೆ ಒಪ್ಪಿಸಲಾಗಿತ್ತು. ಆದರೆ, ಇದೇ ಸಮಯದಲ್ಲಿ ಎಲ್ & ಟಿಯು ಒಪ್ಪಂದವನ್ನು ಅಕ್ರಮವಾಗಿ ರದ್ದುಗೊಳಿಸಿದ್ದರಿಂದ, ಯೋಜನೆಗೆ ನಿರ್ಲಕ್ಷ್ಯ ತೋರಿರುವುದು ತಿಳಿಯುತ್ತದೆ ಎಂದಿದೆ.
ಎಲ್ & ಟಿಗೆ ವಹಿಸಲಾಗಿರುವ ಕೆಲಸದಲ್ಲಿ ಕಾರಿಡಾರ್-2ರ ಒಟ್ಟು ಉದ್ದದ ಶೇ 84 ಮತ್ತು ಕಾರಿಡಾರ್-4ರಲ್ಲಿ ಸುಮಾರು 17 ಕಿ.ಮೀ. ಕಾರ್ಯಸ್ಥಳ ಲಭ್ಯವಿದೆ. ಆದರೂ, ಈ ಲಭ್ಯವಿರುವ ಸ್ಥಳಗಳಿಗೆ ಹೊಂದಿಕೊಂಡಂತೆ ಎಲ್ & ಟಿಯು ಸಾಧಿಸಿದ ಪ್ರಗತಿ ಸಾಕಷ್ಟು ಕುಂಠಿತವಾಗಿದ್ದು, ಈ ಮೂಲಕ "ಕಾರ್ಯಸ್ಥಳ ಲಭ್ಯವಿಲ್ಲ" ಎಂಬ ಅವರ ತರ್ಕವನ್ನು ಕೆ- ರೈಡ್ ಖಂಡಿಸುತ್ತದೆ. ಎಲ್ & ಟಿಯು ಅಗತ್ಯ ಸಂಪತ್ತುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲದ ಕಾರಣ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. ವಿನ್ಯಾಸ ಅಂತಿಮ ಹಂತದಲ್ಲಿ ವಿಳಂಬವಾಗಿದ್ದು ಸಹ ಕಾಮಗಾರಿಗೆ ಹಿನ್ನಡೆಯಾಗಿದೆ. ಈ ದೋಷಗಳನ್ನು K-RIDE ನ ಅಧಿಕಾರಿಗಳು ಹಲವು ಬಾರಿ ಎಲ್ & ಟಿಗೆ ಸೂಚಿಸಿ, ಕೆಲಸ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. ಅಲ್ಲದೆ ಕಾರಿಡಾರ್-2 ಮತ್ತು 4 ರಲ್ಲಿ ಎಲ್ & ಟಿಯ ಯೋಜನಾ ನಿರ್ವಾಹಕರನ್ನು ಪದೇಪದೇ ಬದಲಾಯಿಸಿದ್ದು ಕೂಡ ಕಾಮಗಾರಿ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ ಎಂದು ಅರೋಪಿಸಿದೆ.
K-RIDE ಈಗ ಕಾರಿಡಾರ್-2 ಮತ್ತು ಕಾರಿಡಾರ್-4 ರಲ್ಲಿ ಉಳಿದ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ತಂತ್ರ ರೂಪಿಸುತ್ತಿದ್ದು, ಯೋಜನೆಯ ದೀರ್ಘ ವಿಳಂಬ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.