ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಯಶಸ್ವಿ, 2026ರ ಆವೃತ್ತಿ ಘೋಷಣೆ
x

ಬೆಂಗಳೂರು ಕೌಶಲ್ಯ ಶೃಂಗಸಭೆ

ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಯಶಸ್ವಿ, 2026ರ ಆವೃತ್ತಿ ಘೋಷಣೆ

6500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ, ಭವಿಷ್ಯಕ್ಕೆ ಸಿದ್ಧವಾದ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ನಿರ್ಮಿಸುವ ಕುರಿತು ಸರ್ಕಾರಿ ಮುಖಂಡರು, ಕಾರ್ಪೊರೇಟ್ ಪ್ರವರ್ತಕರು, ಶೈಕ್ಷಣಿಕ ತಜ್ಞರು ಮತ್ತು ಅಂತರರಾಷ್ಟ್ರೀಯ ಪಾಲುದಾರರು ಮಹತ್ವದ ಚರ್ಚೆಗಳನ್ನು ನಡೆಸಿದರು.


Click the Play button to hear this message in audio format

"ವರ್ಕ್‌ಫೋರ್ಸ್ 2030: ಸ್ಕೇಲ್, ಸಿಸ್ಟಮ್ಸ್, ಸಿನರ್ಜಿ" (Workforce 2030: Scale, Systems, Synergy) ಎಂಬ ಧ್ಯೇಯವಾಕ್ಯದೊಂದಿಗೆ, ರಾಜ್ಯದ ಯುವಜನತೆಯನ್ನು ಜಾಗತಿಕ ಉದ್ಯೋಗಗಳಿಗೆ ಸಜ್ಜುಗೊಳಿಸುವ ಗುರಿಯೊಂದಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಚೊಚ್ಚಲ 'ಬೆಂಗಳೂರು ಕೌಶಲ್ಯ ಶೃಂಗಸಭೆ 2025' ಯಶಸ್ವಿಯಾಗಿ ಮುಕ್ತಾಯಗೊಂಡಿತು.

6500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ, ಭವಿಷ್ಯಕ್ಕೆ ಸಿದ್ಧವಾದ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ನಿರ್ಮಿಸುವ ಕುರಿತು ಸರ್ಕಾರಿ ಮುಖಂಡರು, ಕಾರ್ಪೊರೇಟ್ ಪ್ರವರ್ತಕರು, ಶೈಕ್ಷಣಿಕ ತಜ್ಞರು ಮತ್ತು ಅಂತರರಾಷ್ಟ್ರೀಯ ಪಾಲುದಾರರು ಮಹತ್ವದ ಚರ್ಚೆಗಳನ್ನು ನಡೆಸಿದರು. ಈ ಯಶಸ್ಸಿನ ಹಿನ್ನೆಲೆಯಲ್ಲಿ, ಶೃಂಗಸಭೆಯ ಎರಡನೇ ಆವೃತ್ತಿಯನ್ನು 2026ರ ನವೆಂಬರ್ 3 ರಿಂದ 5ರವರೆಗೆ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.

ರಾಜ್ಯವನ್ನು ಕೌಶಲ್ಯದ ಹೆಬ್ಬಾಗಿಲಾಗಿಸುವ ಸಂಕಲ್ಪ

ಈ ಶೃಂಗಸಭೆಯು ಕೇವಲ ಒಂದು ಚರ್ಚಾ ವೇದಿಕೆಯಾಗಿರದೆ, ಕರ್ನಾಟಕವನ್ನು ಜಗತ್ತಿಗೆ ಕೌಶಲ್ಯದ ಹೆಬ್ಬಾಗಿಲನ್ನಾಗಿ ಮಾಡುವ ಸರ್ಕಾರದ ಬದ್ಧತೆಗೆ ಸಾಕ್ಷಿಯಾಯಿತು. ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, "ನಿರುದ್ಯೋಗವು ದೇಶದ ದೊಡ್ಡ ಸವಾಲಾಗಿದೆ. ಆದರೆ, ಕರ್ನಾಟಕವು ಪ್ರಗತಿಪರ ರಾಜ್ಯವಾಗಿದ್ದು, ಶಿಕ್ಷಣ ಮತ್ತು ಕೌಶಲ್ಯದಲ್ಲಿ ಬಲವಾದ ಅಡಿಪಾಯವನ್ನು ಹೊಂದಿದೆ. ತರಗತಿಗಳಲ್ಲೇ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲು ಪಠ್ಯಕ್ರಮವನ್ನು ಪುನರ್‌ರಚಿಸಲಾಗುವುದು. ಉದ್ಯಮಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಗುರುತಿಸಿ, ತರಬೇತಿ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಸಿದ್ಧವಿದೆ. ತರಬೇತಿ ಪಡೆದ ಪ್ರತಿಯೊಬ್ಬ ಯುವಕ/ಯುವತಿಗೂ ಉದ್ಯೋಗ ಸಿಗುವಂತೆ ನೋಡಿಕೊಂಡು, ಕರ್ನಾಟಕವನ್ನು ಭಾರತದ ಕೌಶಲ್ಯ ರಾಜಧಾನಿಯನ್ನಾಗಿ ಮಾಡಲಾಗುವುದು," ಎಂದು ಭರವಸೆ ನೀಡಿದರು.

ಯುವಕರಿಗೆ ಉದ್ಯೋಗ

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, "ಇಂದು ಜಗತ್ತು 85 ಮಿಲಿಯನ್ ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿದೆ. ಈ ಅಂತರವನ್ನು ತುಂಬಲು ನಮ್ಮ ರಾಜ್ಯದ ಯುವಕರು ಸಿದ್ಧರಾಗಿದ್ದಾರೆ. ರಾಜ್ಯದ ಹೊಸ ಕೌಶಲ್ಯ ನೀತಿಯಡಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಯುವಕರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. 'ನಿಪುಣ' ಕಾರ್ಯಕ್ರಮದ ಮೂಲಕ ಸ್ಥಳೀಯವಾಗಿ ಕೌಶಲ್ಯ ನೀಡಿ, ಜಾಗತಿಕವಾಗಿ ಉದ್ಯೋಗ ಪಡೆಯುವ ('Skilling locally, working globally') ದೃಷ್ಟಿ ಹೊಂದಿದ್ದೇವೆ. ಕರ್ನಾಟಕದ ಭವಿಷ್ಯದ ಕಾರ್ಯಪಡೆ ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗ ಸೃಷ್ಟಿಕರ್ತರು ಮತ್ತು ಪರಿವರ್ತನೆಯ ಹರಿಕಾರರಾಗಲಿದ್ದಾರೆ," ಎಂದು ಹೇಳಿದರು.

ತಳಮಟ್ಟದಲ್ಲಿ ಕೌಶಲ್ಯ ಶಿಕ್ಷಣ

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, "ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯು ಈಗ ಶ್ರೇಣಿ-1 ನಗರಗಳಿಂದ ಶ್ರೇಣಿ-2 ಮತ್ತು ಶ್ರೇಣಿ-3 ಪ್ರದೇಶಗಳಿಗೂ ವಿಸ್ತರಿಸುತ್ತಿದೆ. ಮೈಕ್ರೋಸಾಫ್ಟ್, ಎಚ್‌ಪಿ, ಕಿರ್ಲೋಸ್ಕರ್, ವರ್ಮಾ ಫೌಂಡೇಶನ್ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಂತಹ ಸಂಸ್ಥೆಗಳೊಂದಿಗೆ ಸರ್ಕಾರ ಪಾಲುದಾರಿಕೆ ಹೊಂದಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ್ಯಗಳನ್ನು ನೀಡಲು ಸರ್ಕಾರ ಗಮನಹರಿಸಿದೆ," ಎಂದು ತಿಳಿಸಿದರು.

ತಜ್ಞರ ದೃಷ್ಟಿಯಲ್ಲಿ ಕೌಶಲ್ಯದ ಮಹತ್ವ

ಮೈಂಡ್‌ಟ್ರೀ ಸಹ-ಸಂಸ್ಥಾಪಕ ಸುಬ್ರೊತೊ ಬಾಗ್ಚಿ, "ಕೌಶಲ್ಯ ಅಭಿವೃದ್ಧಿ ಕೇವಲ ಆರ್ಥಿಕ ಗುರಿಯಲ್ಲ, ಅದು ಘನತೆ, ಉದ್ದೇಶ ಮತ್ತು ರಾಷ್ಟ್ರ ನಿರ್ಮಾಣದ ನೈತಿಕ ಹೊಣೆಗಾರಿಕೆಯಾಗಿದೆ. ಕೌಶಲ್ಯವನ್ನು ದಾನ ಅಥವಾ ಅನುಸರಣೆ ಎಂದು ಪರಿಗಣಿಸಬಾರದು. ನಾವು ಜನರ ಮೇಲೆ ಹೂಡಿಕೆ ಮಾಡಿದಾಗ, ನಾವು ಭಾರತದ ಆತ್ಮದ ಮೇಲೆ ಹೂಡಿಕೆ ಮಾಡುತ್ತೇವೆ," ಎಂದರು. ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ, "ಕೇವಲ ಜನಸಂಖ್ಯಾ ಬಲದಿಂದ ಸಮೃದ್ಧಿ ಸಾಧ್ಯವಿಲ್ಲ, ಅದನ್ನು ಶಿಕ್ಷಿತ, ನುರಿತ ಮತ್ತು ಉದ್ಯೋಗಾರ್ಹ ಮಾನವ ಬಂಡವಾಳವಾಗಿ ಪರಿವರ್ತಿಸಬೇಕು. ಭಾರತದ ಶೇ. 93ರಷ್ಟು ಕೆಲಸಗಾರರು ಅನೌಪಚಾರಿಕ ವಲಯದಲ್ಲಿದ್ದಾರೆ. ಅವರನ್ನು ಡಿಜಿಟಲ್ ಜಗತ್ತಿನಲ್ಲಿ ಸೇರಿಸಿಕೊಳ್ಳುವುದು ಅತ್ಯಗತ್ಯ," ಎಂದು ಅಭಿಪ್ರಾಯಪಟ್ಟರು.

ಕೌಶಲ್ಯ ಮೇಳ, ಪ್ರಶಸ್ತಿ ಪ್ರದಾನ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವ

ಶೃಂಗಸಭೆಯ ಅಂಗವಾಗಿ ಆಯೋಜಿಸಲಾಗಿದ್ದ 'ಸ್ಕಿಲ್ ಎಕ್ಸ್‌ಪೋ'ದಲ್ಲಿ 50ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಿದರು. 'ಕೌಶಲ್ಯ ಕರ್ನಾಟಕ' ಪ್ರಶಸ್ತಿಗಳನ್ನು ಕಾರ್ಪೊರೇಟ್ ಮತ್ತು ಸಾಂಸ್ಥಿಕ ವಿಭಾಗಗಳಲ್ಲಿ ಪ್ರದಾನ ಮಾಡಲಾಯಿತು. ಜರ್ಮನಿಯಂತಹ ರಾಷ್ಟ್ರಗಳೊಂದಿಗೆ ಸಹಭಾಗಿತ್ವ, ಭಾಷಾ ತರಬೇತಿ ಮತ್ತು ವಲಸೆ ನೀತಿಗಳ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದವು. ಯಶಸ್ವಿಯಾಗಿ ನಡೆದ ಈ ಸಂಪೂರ್ಣ ಕಾರ್ಯಕ್ರಮವನ್ನು 'ಟ್ರೆಸ್ಕಾನ್' (Trescon) ಸಂಸ್ಥೆಯು ನಿರ್ವಹಿಸಿತ್ತು.

Read More
Next Story