
ಬೆಂಗಳೂರು ರಸ್ತೆ ಗುಂಡಿ. ಕಸದ ಸಮಸ್ಯೆ | ಬೈಕ್‌ನಲ್ಲಿ ರಾಜೇಂದ್ರ ಚೋಳನ್ ರೌಂಡ್ಸ್
ಚಿಕ್ಕಪೇಟೆ ವಿಭಾಗ ವ್ಯಾಪ್ತಿಯ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಗುಂಡಿಗಳು, ದುರಸ್ಥಿ ಕಾಮಗಾರಿಗಳು ಹಾಗೂ ಇತರೆ ನಾಗರಿಕ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಸೋಮವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ನಗರ ಪ್ರದಕ್ಷಿಣೆ ಹಾಕಿ, ಕಸ ಹಾಗೂ ರಸ್ತೆ ಗುಂಡಿ ಸಮಸ್ಯೆ ವೀಕ್ಷಿಸಿದರು.
ಚಿಕ್ಕಪೇಟೆ ವಿಭಾಗ ವ್ಯಾಪ್ತಿಯ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಗುಂಡಿಗಳು, ದುರಸ್ಥಿ ಕಾಮಗಾರಿಗಳು ಹಾಗೂ ಇತರೆ ನಾಗರಿಕ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿದರು.
ಈ ವೇಳೆ ಅಧಿಕಾರಿಗಳಿಗೆ ಪ್ರಮುಖ ಸೂಚನೆ ನೀಡಿದ ಅವರು, ತುರ್ತಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಉತ್ತಮ ರೀತಿಯಲ್ಲಿ ಮುಚ್ಚಬೇಕು. ಜಂಕ್ಷನ್ಗಳು ಮತ್ತು ವೃತ್ತಗಳನ್ನು ಅಭಿವೃದ್ಧಿ ಮಾಡಬೇಕು. ಹೊಸೂರು ರಸ್ತೆಯ ಮೇಲ್ಮೈ ಡಾಂಬರೀಕರಣ ಮಾಡಬೇಕು. ರಸ್ತೆ ಬದಿ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸಿ ತೆರವು ಮಾಡಬೇಕು. ಮತ್ತೊಮ್ಮೆ ಆ ಸ್ಥಳದಲ್ಲಿ ಕಸ ಸುರಿಯದಂತೆ ತಡೆಯಬೇಕು ಎಂದು ಸೂಚಿಸಿದರು.
ಪಾದಚಾರಿ ಮಾರ್ಗಗಳನ್ನು ದುರಸ್ಥಿಗೊಳಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕು. ಜೆ.ಸಿ ರಸ್ತೆಯಲ್ಲಿರುವ ನಗರಪಾಲಿಕೆ ಜಾಗದ ಸುತ್ತಲು ಕಾಂಪೌಂಡ್, ತಂತಿ ಬೇಲಿ ಹಾಕಿ, ಅದನ್ನು ಅಭಿವೃದ್ಧಿಪಡಿಸಲು ಡಿ.ಪಿ.ಆರ್ ತಯಾರಿಸಬೇಕು ಎಂದು ತಾಕೀತು ಮಾಡಿದರು.
ಪರಿಶೀಲಿಸಿದ ಪ್ರಮುಖ ರಸ್ತೆಗಳು
ಬುಲ್ ಟೆಂಪಲ್ ರಸ್ತೆ, ವಾಣಿವಿಲಾಸ್ ರಸ್ತೆ, ಶಂಕರಮಠ ರಸ್ತೆ, ಕೆ.ಆರ್ ರಸ್ತೆ, ನ್ಯಾಷನಲ್ ಕಾಲೇಜು ರಸ್ತೆ, ಆರ್.ವಿ ರಸ್ತೆ, ಟೀಚರ್ಸ್ ಕಾಲೇಜು ರಸ್ತೆ, ಕನಕನಪಾಳ್ಯ ರಸ್ತೆ, ಟಿ.ಮಾರಿಗೌಡ ರಸ್ತೆ, ಹೊಸೂರು ರಸ್ತೆ, ಕುರುಂಬಿಗಲ್ ರಸ್ತೆ, ಜೆ.ಸಿ ರಸ್ತೆ, ಪೂರ್ಣಿಮಾ ಟಾಕೀಸ್ ರಸ್ತೆ ಹಾಗೂ ಲಾಲ್ಬಾಗ್ ರಸ್ತೆಗಳಲ್ಲಿ ರಾಜೇಂದ್ರ ಚೋಳನ್ ಬೈಕ್ನಲ್ಲಿ ಸಿಟಿ ರೌಂಡ್ಸ್ ಹಾಕಿದರು.
ಈ ವೇಳೆ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್, ಅಧೀಕ್ಷಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಎಇಇ, ಎಇ, ಜೆಇ ಹಾಗೂ ಮಾರ್ಷಲ್‌ಗಳು ಇದ್ದರು.
ಗುಂಡಿ ಮುಚ್ಚಲು ಗಡುವು ನೀಡಿದ್ದ ಸಿಎಂ
ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳನ್ನು ಒಂದು ತಿಂಗಳಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಡುವು ನೀಡಿದ್ದರು. ಸೆ.27ರಂದು ಸಿದ್ದರಾಮಯ್ಯ ಅವರು ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಪ್ರದಕ್ಷಿಣೆ ಕೈಗೊಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು.
ರಸ್ತೆ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಬೇಕು. ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ದುರಸ್ತಿ ಸರಿಯಾಗಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಕಳಪೆ ಕಾಮಗಾರಿಗೆ ಎಇಇ ತಲೆದಂಡ
ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಸಿಟಿ ರೌಂಡ್ಸ್ ವೇಳೆ ಕಳಪೆ ಕಾಮಗಾರಿಗೆ ಕಾರಣರಾದ ಹೆಣ್ಣೂರು-ಬಾಗಲೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಅಮಾನತು ಮಾಡಲಾಗಿತ್ತು.
ಹೆಣ್ಣೂರು ಭಾಗದಲ್ಲಿ ಕಸ ಹಾಗೂ ರಸ್ತೆ ಗುಂಡಿ ಸಮಸ್ಯೆ ವೀಕ್ಷಿಸುವ ವೇಳೆ ರಸ್ತೆ ಗುಂಡಿಯನ್ನು ಡಾಂಬರು ಹಾಕದೇ ಕೇವಲ ಜಲ್ಲಿ ಕಲ್ಲು ಹಾಕಿ ಮುಚ್ಚಿದ್ದರು. ಇದನ್ನು ನೋಡಿದ ಸಿಎಂ ಸ್ಥಳದಲ್ಲೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಮಾನತಿಗೆ ಸೂಚಿಸಿದ್ದರು.