Bangalore Rain Politics | ಮಳೆಯಲ್ಲೂ ರಾಜಕೀಯ ಜೋರು; ಬೆಂಗಳೂರಿನ ದುಸ್ಥಿತಿಗೆ ಜನರ ಕಣ್ಣೀರು
x

Bangalore Rain Politics | ಮಳೆಯಲ್ಲೂ ರಾಜಕೀಯ ಜೋರು; ಬೆಂಗಳೂರಿನ ದುಸ್ಥಿತಿಗೆ ಜನರ ಕಣ್ಣೀರು

ಬ್ರಾಂಡ್ ಬೆಂಗಳೂರು ಎಂದು ಘೋಷಣೆ ಕೂಗುತ್ತಲೇ ಇರುವ ಸರ್ಕಾರ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಗಮನವೇ ಕೊಡುತ್ತಿಲ್ಲ. ಒಂದೇ ಮಳೆಗೆ ಬೆಂಗಳೂರಿನ ಸ್ಥಿತಿ ಅಧ್ವಾನವಾಗಿದೆ. ಈ ನಡುವೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುವಲ್ಲಿಯೇ ಬ್ಯುಸಿಯಾಗಿದೆ.


ಮುಂಗಾರು ಪೂರ್ವದ ಒಂದೇ ಮಳೆಗೆ ಗ್ರೇಟರ್ ಬೆಂಗಳೂರಿನ ಕತೆ ಅಯೋಮಯವಾಗಿದೆ. ಕಾಂಕ್ರೀಟ್ ಕಾಡಾಗಿರುವ ಉದ್ಯಾನ ನಗರದಲ್ಲಿ ಸತತವಾಗಿ ಸುರಿದ ವರ್ಷಧಾರೆಗೆ ರಸ್ತೆಗಳೆಲ್ಲವೂ ಬಾಯ್ತೆರಿದಿವೆ. ಮರಗಳು ಧರೆಗೆ ಉರುಳಿದ್ದು, ಸಂಚಾರ ದಟ್ಟಣೆಯ ಕಾವು ಜನರನ್ನು ಬಾಧಿಸುತ್ತಿದ್ದು, ಹಲವೆಡೆ ಬಡಾವಣೆಗಳು, ರಸ್ತೆಗಳು ಜಲಾವೃತವಾಗಿವೆ.

ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿರುವ ಅವಾಂತರ, ನಿರ್ವಹಣೆಯಲ್ಲಿ ಆಡಳಿತ ಯಂತ್ರದ ಲೋಪಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಗ್ರೇಟರ್ ಬೆಂಗಳೂರು ಮಾಡುವುದಾಗಿ ಕಾಯ್ದೆ ಜಾರಿಗೆ ತಂದಿರುವ ಸರ್ಕಾರವನ್ನು ಪ್ರತಿಪಕ್ಷಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿವೆ.

ಮಳೆ ಹಾನಿ ಹಾಗೂ ಅವಾಂತರದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಇದೇನಾ ಗ್ರೇಟರ್ ಬೆಂಗಳೂರು ಎಂದು ಲೇವಡಿ ಮಾಡುತ್ತಿವೆ. ಪ್ರತಿಪಕ್ಷಗಳ ಜೊತೆಗೆ ಸರ್ಕಾರದ ಸಚಿವರು ಕೂಡ ಬಿಬಿಎಂಪಿ ಕಾರ್ಯ ವೈಖರಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಕಿದ್ದಾರೆ. ಇದು ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.

ಮಳೆ ರಾಜಕೀಯ ಜೋರು

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚು ಮಳೆಯಾದರೆ ಗ್ರೇಟರ್ ಬೆಂಗಳೂರು ಮುಳುಗುತ್ತದೆ, ಕಡಿಮೆ ಸುರಿದರೆ ತೇಲುತ್ತದೆ, ರಸ್ತೆಗಳಲ್ಲಿಯೇ ಕೆರೆ, ಚರಂಡಿಗಳು ನಿರ್ಮಾಣವಾಗಿವೆ. ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಸರ್ಕಾರದ ಬಳಿ ಬಿಡಿಗಾಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತುಗಳಲ್ಲೀ ಬಣ್ಣ ಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ಏದುಸಿರು ಬಿಡುತ್ತಿದೆ. ಬೆಂಗಳೂರಿನಿಂದ ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ, ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಇದು ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್' ಬೆಂಗಳೂರು ಎಂದು ಕಿಡಿ ಕಾರಿದ್ದಾರೆ.

ಮತ್ತೊಂದೆಡೆ ಪ್ರತಿಪಕ್ಷ ಬಿಜೆಪಿ ಕೂಡ ಸರ್ಕಾರವನ್ನು ಟೀಕಿಸಿದೆ. ಮಾಜಿ ಸಚಿವ ಅಶ್ವತ್ಥ್​ ನಾರಾಯಣ್ ಅವರು, ಭಾನುವಾರ ರಾತ್ರಿಯ ಮಳೆಯು ಬೆಂಗಳೂರಿನ ಮೂಲಸೌಕರ್ಯ ಅವ್ಯವಸ್ಥೆಯನ್ನಷ್ಟೇ ತೋರಿಸಿಲ್ಲ. ಕಳೆದ 2 ವರ್ಷಗಳಲ್ಲಿ ಏನನ್ನೂ ಮಾಡದ ಬೆಂಗಳೂರು ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್ ಅವರ ಸಾಧನೆಯನ್ನೂ ಬಹಿರಂಗಪಡಿಸಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಕೋಟಿಗಟ್ಟಲೆ ಖರ್ಚು ಮಾಡಿದರೂ ಫಲಿತಾಂಶ ಮಾತ್ರ ಶೂನ್ಯ. ಹಾಳಾದ ರಸ್ತೆಗಳು. ತುಂಬಿ ಹರಿಯುತ್ತಿರುವ ಚರಂಡಿಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಅನಾಹುತಗಳಿಗೆ ಸರ್ಕಾರದ ಬೇಜವಾಬ್ದಾರಿತನ ಕಾರಣ. ಮಳೆ ಪರಿಹಾರ ಕಾರ್ಯಕ್ಕೆ ಒಂದು ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಭಾನುವಾರ ರಾತ್ರೀ ಸುರಿದ ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲಾಗಿದೆ. ನಗರದಲ್ಲಿ 103 ರಿಂದ 130 ಮಿಲಿ ಮೀಟರ್ ಮಳೆ ಸುರಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಇಷ್ಟಾದರೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿರುವುದು ಹೊಣೆಗೇಡಿತನದ ಪರಮಾವಧಿ ಎಂದು ಹರಿ ಹಾಯ್ದಿದ್ದಾರೆ.

ಭರವಸೆಯಾಗೇ ಉಳಿದ ಆಶ್ವಾಸನೆ

ಕಳೆದ ಬಾರಿ ಮಳೆಯಿಂದ ಮುಳುಗಡೆಯಾಗಿದ್ದ ಮಾರತ್ತಹಳ್ಳಿಯ ಸಾಯಿ ಬಡಾವಣೆ, ನಂದಗೋಕುಲ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿತ್ತು. ಆಗ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಈಗ ಮತ್ತೆ ಸಾಯಿ ಬಡಾವಣೆ ಜಲಾವೃತವಾಗಿದೆ. ಆದರೂ, ಉಸ್ತುವಾರಿ ಸಚಿವರು ಮಳೆ ಸಂತ್ರಸ್ತರ ಅಳಲು ಕೇಳಲು ಬಂದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಹೆಬ್ಬಾಳ, ಕೋರಮಂಗಲ ಹಾಗೂ ವೃಷಭಾವತಿ ಕಾಲುವೆ ಸಮೀಪದ ಬಡಾವಣೆಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಮಳೆ ನೀರು ನಿಂತಾಗ ಮಾತ್ರ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಹಾಯವಾಣಿ ಆರಂಭಿಸದ ಪಾಲಿಕೆ

ಮುಂಗಾರು ಪೂರ್ವ ಮಳೆ ರಾಜ್ಯದ ಎಲ್ಲೆಡೆ ಅಬ್ಬರಿಸುತ್ತಿದೆ. ಮೇ 27ರಿಂದ ಮುಂಗಾರು ಪ್ರವೇಶಿಸುವ ಮುನ್ಸೂಚನೆಯೂ ಇದೆ. ಆದರೂ ಬೆಂಗಳೂರಿನಲ್ಲಿ ಮಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಪಾಲಿಕೆ ಎಡವಿದೆ. ಬೆಂಗಳೂರಿನ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ರಸ್ತೆ ಹಾಗೂ ಬಡಾವಣೆಗಳು ಜಲಾವೃತವಾದರೂ ಬಿಬಿಎಂಪಿ ಯಿಂದ ಈವರೆಗೂ ಸಹಾಯವಾಣಿ ತೆರಿದಿಲ್ಲ. ಸಮಸ್ಯೆ ಹೇಳಿಕೊಳ್ಳಲು ಪಾಲಿಕೆ ಸದಸ್ಯರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಧಾವಿಸಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸಾಯಿ ಬಡಾವಣೆ ನಿವಾಸಿಗಳು ದೂರಿದ್ದಾರೆ.

ಸಾಧನಾ ಸಮಾವೇಶದ ಸಿದ್ಧತೆಯಲ್ಲಿ ಡಿಕೆಶಿ

ಬೆಂಗಳೂರಿನಲ್ಲಿಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಗಳಲ್ಲಿ ನೀರುನಿಂತು ಜನ ಪರದಾಡುತ್ತಿದ್ದಾರೆ. ಹೀಗಿರುವಾಗ ಬೆಂಗಳೂರು ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಸರ್ಕಾರದ ಎರಡು ವರ್ಷದ ಸಾಧನ ಸಮಾವೇಶದ ಸಿದ್ಧತೆಯಲ್ಲಿ ತೊಡಗಿರುವುದು ಟೀಕೆಗೆ ಗುರಿಯಾಗಿದೆ.

ಬ್ರಾಂಡ್ ಬೆಂಗಳೂರು ಎಂದು ಹೇಳಿಕೊಳ್ಳುವ ಶಿವಕುಮಾರ್ ಅವರು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಕಳೆಯುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಹೊಣೆಗೇಡಿತನದ ಪರಮಾವಧಿ

ಕಳೆದ ಮುಳುಗಡೆಯಾಗಿದ್ದ ಸಾಯಿ ಬಡಾವಣೆ, ನಂದಗೋಕುಲ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ, ಅದು ಮಾತಿನಲ್ಲೇ ಉಳಿದು ಈ ಸಲ ಮತ್ತೆ ಆ ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಆದರೂ ನಿವಾಸಿಗಳ ಅಳಲು ಕೇಳಲು ಯಾರೂ ಮುಂದಾಗಿಲ್ಲ ಎಂದು ಟೀಕಿಸಿದ್ದಾರೆ.

ಮೂರು ವ್ಯಾಲಿಗಳಲ್ಲೂ ಪ್ರವಾಹ

ಹೆಬ್ಬಾಳ, ಕೋರಮಂಗಲ ಮತ್ತು ವೃಷಭಾವತಿ ವ್ಯಾಲಿಯಲ್ಲಿ ಪ್ರವಾಹ ಬಂದಿದೆ. ಇನ್ನೂ ಮೂರು - ನಾಲ್ಕು ದಿನ ಭಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಕ್ಷಣ ತುರ್ತು ಪರಿಹಾರ ಕಾರ್ಯಪಡೆ ರಚಿಸಿ, ಸಹಾಯವಾಣಿ ಆರಂಭಿಸಬೇಕು.

ನೀರು ನುಗ್ಗಿರುವ ಮನೆಗಳಿಗೆ ತಲಾ ಕನಿಷ್ಠ ಒಂದು ಲಕ್ಷ ರೂ. ಪರಿಹಾರ ವಿತರಿಸಬೇಕು. ಆ ಮನೆಯವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿ ಎರಡು ತಿಂಗಳಿಗೆ ಆಗುವಷ್ಟು ಪರಿಹಾರ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಬಾಗಿಲಿಗೆ ಪರಿಹಾರ ಹೆಸರಿನಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿದ್ದ ಶಿವಕುಮಾರ್ ಅವರು, ಸಾರ್ವಜನಿಕರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಈಗ ಅದೆಲ್ಲಾ ಏನಾಯಿತು ಎಂಬ ಉತ್ತರ ನೀಡಬೇಕು ಆರ್. ಅಶೋಕ್ ಆಗ್ರಹಿಸಿದ್ದಾರೆ.

ಸ್ವಪಾಕ್ಷಿಯರಿಂದಲೂ ಅಸಮಾಧಾನ

ಬೆಂಗಳೂರು ಮಳೆ ಅವಾಂತರಕ್ಕೆ ಸ್ವಪಕ್ಷಿಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕೂ ಮುನ್ನ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ಆದರೆ, ಮಳೆಗಾಲದಲ್ಲಿ ನಗರದ ಹಲವೆಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದೆ. ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ಗೃಹ ಸಚಿವ ಪರಮೇಶ್ವರ ಅಸಮಾಧಾನ ಹೊರಹಾಕಿದ್ದಾರೆ.

Read More
Next Story