
ಬೆಂಗಳೂರು ಹಿಟ್ ಅಂಡ್ ರನ್: ಮೂವರು ವಿದ್ಯಾರ್ಥಿಗಳ ಭೀಕರ ಸಾವು
ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲ ಬಳಿ ತಡರಾತ್ರಿ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವು ಕಂಡಿದ್ದಾರೆ. ಇದೊಂದು ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ಅಪಘಾತ ನಡೆಸಿದ ವಾಹನ ಸಹಿತ ಚಾಲಕ ಪರಾರಿಯಾಗಿದ್ದಾನೆ.
ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.
ಜಿಕೆವಿಕೆಯಲ್ಲಿ ಬಿಎಸ್ಸಿ ಓದುತ್ತಿರುವ ಮೂವರು ಯುವಕರು, ರಾತ್ರಿ ಬೈಕ್ನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಮೃತ ಯುವಕರನ್ನು ರೋಹಿತ್(22), ಸುಚಿತ್(22), ಹರ್ಷ(22) ಎಂದು ಗುರುತಿಸಲಾಗಿದೆ.
ಅಪಘಾತದ ಭೀಕರತೆಗೆ ಹೆದ್ದಾರಿಯಲ್ಲಿ ಬೈಕುಗಳು ನಜ್ಜು ಗುಜ್ಜಾದ ಸ್ಥಿತಿಯಲ್ಲಿ ಬಿದ್ದಿವೆ. ಮೃತ ದೇಹಗಳು ಕೂಡ ಚಲ್ಲಾಪಿಲ್ಲಿಯಾಗಿವೆ. ಅಪಘಾತ ಮಾಡಿದ ಚಾಲಕ, ಕೂಡಲೇ ವಾಹನ ಸಮೇತ ಪರಾರಿಯಾಗಿದ್ದಾನೆ. ಮೃತದೇಹಗಳನ್ನು ಸದ್ಯ ಅಂಬೇಡ್ಕರ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಘಟನೆಯ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆಸಿದ ವಾಹನವನ್ನು ಕಾರು ಎಂದು ಗುರುತಿಸಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.