Bangalore Crime | ಬೆಂಗಳೂರಿನಲ್ಲಿ ಭೀಕರ ಘಟನೆ: ಮಕ್ಕಳಿಗೆ ವಿಷವಿಕ್ಕಿ ನೇಣಿಗೆ ಶರಣಾದ ಟೆಕ್ಕಿ ದಂಪತಿ
ಟೆಕ್ಕಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಸದಾಶಿವನಗರದ ಆರ್‌ಎಂವಿ ಎರಡನೇ ಹಂತದಲ್ಲಿ ನಡೆದಿದೆ.
ಟೆಕ್ಕಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಸದಾಶಿವನಗರದ ಆರ್‌ಎಂವಿ ಎರಡನೇ ಹಂತದಲ್ಲಿ ನಡೆದಿದೆ.
ಐದು ವರ್ಷದ ವಿಶೇಷ ಚೇತನ ಹೆಣ್ಣುಮಗು ಮತ್ತು ಎರಡು ವರ್ಷದ ಗಂಡು ಮಗುವಿಗೆ ವಿಷ ಹಾಕಿ ಬಳಿಕ ತಂದೆ- ತಾಯಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಗಳಿಬ್ಬರೂ ಟೆಕ್ಕಿಗಳಾಗಿದ್ದು, ವರ್ಕ್ಫ್ರಮ್ ಹೋಮ್ ಮಾಡುತ್ತಿದ್ದರು.
ಅನೂಪ್ ಕುಮಾರ್(38) ಮತ್ತು ಅವರ ಪತ್ನಿ ರಾಖಿ(35) ನೇಣಿಗೆ ಶರಣಾದ ದಂಪತಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಉತ್ತರಪ್ರದೇಶದ ಅಲಹಾಬಾದ್ ಮೂಲದವರು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಸಾಲಬಾಧೆಯೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಕೇಂದ್ರ ವಿಭಾಗ ಡಿಸಿಪಿ ಎಚ್ ಟಿ ಶೇಖರ್ ಅವರು, ಆರ್ಎಂವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮೃತರು ಅಲಹಾಬಾದ್ ಮೂಲದವರು. ಎರಡು ವರ್ಷಗಳಿಂದ ಆ ಮನೆಯಲ್ಲಿ ಬಾಡಿಗೆಗೆ ಇದ್ದರು. ಮೃತ ಅನೂಪ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕನ್ಸಲ್ಟೆಂಟ್ ಆಗಿದ್ದರು. ಮೃತರ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಸಂಜೆ ವೇಳೆಗೆ ಅವರು ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಯ ಹಿಂದಿನ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.