
Karnataka Budget 2025 | ಬೆಂಗಳೂರು ನಗರ ವಿವಿಗೆ ಡಾ.ಮನಮೋಹನ ಸಿಂಗ್ ಹೆಸರು; ಉನ್ನತ ಶಿಕ್ಷಣ ಬಲವರ್ಧನೆ
ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ (Centre of Excellence) ಸ್ಥಾಪಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಖ್ಯಾತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ಹೆಸರು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಗರ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಮಾದರಿಯನ್ನಾಗಿಸುವ ಉದ್ದೇಶದಿಂದ ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್.ಸಿ. ಕಾಲೇಜುಗಳನ್ನು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ (Centre of Excellence) ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆ ಅನುಷ್ಠಾನಕ್ಕೆ ಗೊಳಿಸಲು ಉದ್ದೇಶಿಸಲಾಗಿದೆ.
ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 31 ಮಹಿಳಾ ಕಾಲೇಜುಗಳನ್ನು ಹಿಂದಿನ ವರ್ಷದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಉಳಿದ 26 ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ 26 ಕೋಟಿ ರೂ. ಒದಗಿಸಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ಗಳಲ್ಲಿ ಖಾಲಿಯಿರುವ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಈ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ಒಟ್ಟಾರೆ 275 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ Chevening Karnataka Masters Fellowship ನೆರವಿನೊಂದಿಗೆ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯುವ ಯೋಜನೆ ರೂಪಿಸಲಾಗಿದೆ.
ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದಿಂದ ಉದ್ಯೋಗಾರ್ಹತೆ ಹೆಚ್ಚಿಸಲು ವೃತ್ತಿಪರ ವಿಷಯ ತಜ್ಞರನ್ನು ʻProfessor of Practiceʼ ರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು 150 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಜೀಂ ಪ್ರೇಮ್ಜೀ ಫೌಂಡೇಶನ್ ಸಹಯೋಗದೊಂದಿಗೆ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲಾ ಬೋಧಕರಿಗೆ ಬೋಧನೆ ಮತ್ತು ಕಲಿಕೆ ಉತ್ತಮಪಡಿಸಲು ಮುಂದಿನ ಮೂರು ವರ್ಷದೊಳಗೆ ಪುನರ್ ಮನನ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ನಂಜುಂಡ ಸ್ವಾಮಿ ಸಂಶೋಧನಾ ಪೀಠ ಆರಂಭಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು
ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ.
177 ಕೋಟಿ ರೂ. ಮೊತ್ತದಲ್ಲಿ 114 Modular Operation Theater, 34 ಕೋಟಿ ರೂ. ವೆಚ್ಚದಲ್ಲಿ 64 Anaesthesia Work Station ಗಳನ್ನು ಸ್ಥಾಪಿಸಲಾಗಿದೆ. ಗದಗ ಮೆಡಿಕಲ್ ಕಾಲೇಜಿನಲ್ಲಿ Cathlab ಸೌಲಭ್ಯದೊಂದಿಗೆ Super Speciality Cardiac Unit ಅನ್ನು 10 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಕಲಬುರಗಿಯಲ್ಲಿ 92 ಕೋಟಿ ರೂ. ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಹಾಗೂ 304 ಕೋಟಿ ರೂ. ವೆಚ್ಚದ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲಾಗಿದೆ. 26 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ನೆಫ್ರೊ-ಯುರಾಲಾಜಿ ಸಂಸ್ಥೆಯ ಕಟ್ಟಡವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ವೈದ್ಯಕೀಯ ಕಾಲೇಜನ್ನು ಹಾಗೂ ಕೋಲಾರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ವೈದ್ಯಕೀಯ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ.
ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗವನ್ನು ಆರಂಭಿಸಲಾಗುವುದು. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 297 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಸುಧಾರಿತ ಆರೋಗ್ಯ ಸೇವೆಗೆ ಕ್ರಮ
ರಾಜ್ಯದ 22 ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ.
ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ (Endocrinology) ಕೇಂದ್ರಗಳನ್ನು ಆರಂಭಿಸಲಾಗುವುದು. ಮೈಸೂರು ಮತ್ತು ಕಲಬುರಗಿಯ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ತಲಾ ಆರು ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನರ್ಸಿಂಗ್ ಕಾಲೇಜುಗಳನ್ನು KKRDB ಅನುದಾನದಲ್ಲಿ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.