
ಬಂಡೀಪುರ: ಅನಾರೋಗ್ಯಕ್ಕೆ ತುತ್ತಾಗಿದ್ದ ಕಾಡಾನೆ ಸಾವು!
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸೋಮವಾರ (ಮೇ 20) ಮೃತಪಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸೋಮವಾರ (ಮೇ 20) ಮೃತಪಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಮೊಳೆಯೂರು ವ್ಯಾಪ್ತಿಯ ಹಿಡುಗಲಪಂಚೆ ಕೆರೆಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಸುಮಾರು 30 ವರ್ಷದ ಹೆಣ್ಣು ಆನೆಯೊಂದು ಅಸ್ವಸ್ಥವಾಗಿ ರಸ್ತೆಯಲ್ಲಿ ಬಿದ್ದಿರುವುದನ್ನು ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ತಂಡ ಪತ್ತೆ ಮಾಡಿತ್ತು. ಕೂಡಲೇ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್, ಡಿಸಿಎಫ್ ಹೆಡಿಯಾಲ ವಿಭಾಗದ ಜಿ.ರವೀಂದ್ರ, ಪಶು ವೈದ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪಶುವೈದ್ಯಾಧಿಕಾರಿ ವಾಸಿಂ ಮಿರ್ಜಾ ಆನೆಯನ್ನು ಪರೀಕ್ಷಿಸಿ, ಅನಾರೋಗ್ಯದಿಂದ ಬಳಲುತ್ತಿದೆ ಎಂದು ತಿಳಿಸಿದರು. ಅವರು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದರು. ಆದರೆ ಸೋಮವಾರ ಬೆಳಗ್ಗೆ ಆನೆ ಮೃತಪಟ್ಟಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಆನೆಯ ಕರಳುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಮಾರ್ಗಸೂಚಿಗಳ ಪ್ರಕಾರ ಅದೇ ಸ್ಥಳದಲ್ಲಿ ಹೂಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.