ಬಂಡೀಪುರ | ರಾತ್ರಿ ವಾಹನ ಸಂಚಾರ ನಿರ್ಬಂಧ ತೆರವು ಹೇಳಿಕೆಗೆ ವ್ಯಾಪಕ ವಿರೋಧ
x

ಬಂಡೀಪುರ | ರಾತ್ರಿ ವಾಹನ ಸಂಚಾರ ನಿರ್ಬಂಧ ತೆರವು ಹೇಳಿಕೆಗೆ ವ್ಯಾಪಕ ವಿರೋಧ

ಕಳೆದ ಹದಿನೈದು ವರ್ಷಗಳಿಂದ ಈ ಮಾರ್ಗದಲ್ಲಿ ಜಾರಿಯಲ್ಲಿರುವ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವುದಾಗಿ ರಾಜ್ಯ ಸರ್ಕಾರದ ಹಿರಿಯ ಸಚಿವರು ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿರುವುದರಿಂದ ವನ್ಯಜೀವಿಗಳು ಮತ್ತು ಪರಿಸರಕ್ಕೆ ಮತ್ತೆ ಆತಂಕ ಎದುರಾಗಿದೆ.


ಬಂಡೀಪುರ ರಾಷ್ಟ್ರೀಯ ಉದ್ಯಾನದ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರೆ 766 ಮತ್ತೆ ಸುದ್ದಿಯಲ್ಲಿದೆ.

ಕಳೆದ ಹದಿನೈದು ವರ್ಷಗಳಿಂದ ಈ ಮಾರ್ಗದಲ್ಲಿ ಜಾರಿಯಲ್ಲಿರುವ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವುದಾಗಿ ರಾಜ್ಯ ಸರ್ಕಾರದ ಹಿರಿಯ ಸಚಿವರು ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿರುವುದರಿಂದ ವನ್ಯಜೀವಿಗಳು ಮತ್ತು ಪರಿಸರಕ್ಕೆ ಮತ್ತೆ ಆತಂಕ ಎದುರಾಗಿದೆ.

ಕರ್ನಾಟಕದ ಗಡಿಯ ವಯನಾಡು ಜಿಲ್ಲೆಯ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದು, ಅಲ್ಲಿನ ಚುನಾವಣೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ವಿಷಯ ತೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಕೆಲವು ಕಾಂಗ್ರೆಸ್ ಪ್ರಮುಖರು ನೆರೆಯ ವಯನಾಡು ಸೇರಿದಂತೆ ಕೇರಳದ ಬಹುದಿನಗಳ ಬೇಡಿಕೆಯಾಗಿರುವ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಕೀಯ ಪ್ರೇರಿತ ಈ ಹೇಳಿಕೆಗಳ ಬೆನ್ನಲ್ಲೇ ರಾಜ್ಯದ ಪರಿಸರ ತಜ್ಞರು ಮತ್ತು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಟ್ಟನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಹಾಗಾಗಿ ರಾತ್ರಿ ಹೊತ್ತು ಸಂಚರಿಸುವ ಆನೆ, ಹುಲಿ, ಕಾಡುಕೋಣ, ಚಿರತೆ, ಕರಡಿ, ಸೇರಿದಂತೆ ವನ್ಯಜೀವಿಗಳ ಪ್ರಾಣಕ್ಕೆ ಈ ಹೆದ್ದಾರಿ ಸಂಚಕಾರ ತಂದಿತ್ತು. ಪ್ರತಿ ವರ್ಷ ನೂರಾರು ಪ್ರಾಣಿಗಳು ಹೆದ್ದಾರಿಯಲ್ಲಿ ಅತಿವೇಗದಲ್ಲಿ ಸಂಚರಿಸುವ ವಾಹನಗಳಿಗೆ ಸಿಕ್ಕು ಸಾವು ಕಾಣುತ್ತಿದ್ದವು. ಆ ಹಿನ್ನೆಲೆಯಲ್ಲಿ 2009ರಲ್ಲಿ ನ್ಯಾಯಾಲಯಗಳ ಸೂಚನೆ ಮೇರೆಗೆ ಈ ಹೆದ್ದಾರಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಸಂಚಾರ ನಿರ್ಬಂಧ ಹೇರಿ ಕರ್ನಾಟಕ ಸರ್ಕಾರ ಆದೇಶಿಸಿತ್ತು.

ಕೇವಲ ವನ್ಯಜೀವಿಗಳು ಮಾತ್ರವಲ್ಲದೆ, ಆ ಮಾರ್ಗದಲ್ಲಿ ಅಪಾಯಕಾರಿ ಪ್ರಾಣಿಗಳ ಸಂಚಾರದ ನಡುವೆ ಸಾಗುವ ಪ್ರಮಾಣಿಕರ ಹಿತದೃಷ್ಟಿಯಿಂದಲೂ ಸರ್ಕಾರದ ಈ ನಿರ್ಬಂಧವನ್ನು ನ್ಯಾಯಾಲಯ ಕೂಡ ಎತ್ತಿಹಿಡಿದಿತ್ತು.

ಚುನಾವಣೆಗಾಗಿ ವನ್ಯಜೀವಿ ಬಲಿಯೇ?

ಆದರೆ, ಕೇರಳ ಮಾತ್ರ ಕಳೆದ ಹದಿನೈದು ವರ್ಷಗಳಿಂದಲೂ ಈ ಮಾರ್ಗದ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ತನ್ನ ವ್ಯವಹಾರ ಮತ್ತು ವಹಿವಾಟುಗಳ ಕಾರಣವೊಡ್ಡಿ ಕೇರಳ ಈ ಒತ್ತಡ ಹೇರುತ್ತಿದೆ. ಇದೀಗ ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಲೋಕಸಭಾ ಉಪ ಚುನಾವಣೆಗೆ ಕಣಕ್ಕಿಳಿದ ಬಳಿಕ, ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಕೇರಳದ ಆ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚುನಾವಣಾ ಕಣದಲ್ಲಿ ಪ್ರಮುಖ ವಿಷಯವಾಗಿ ಚರ್ಚೆಗೆ ಗ್ರಾಸವಾಗಿದೆ.

“ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹುಲಿ ಸಂರಕ್ಷಿತ ಸ್ಥಳವಾಗಿದೆ. ಆನೆ, ಹುಲಿ, ಸೀಳುನಾಯಿ, ಜಿಂಕೆ, ಕಾಡುಕೋಣ, ಕರಡಿ, ಚಿರತೆ ಸೇರಿದಂತೆ ಅಪಾರ ವನ್ಯಜೀವಿಗಳು ವೇಗವಾಗಿ ಚಲಿಸುವ ಹೆದ್ದಾರಿಯ ವಾಹನಗಳಿಂದ ಅಪಾಯಕ್ಕೆ ಈಡಾಗುತ್ತವೆ. ವಾಹನಗಳ ಸದ್ದಿಗೆ ಹೆದರಿ ಪಕ್ಷಿಗಳು ಜೀವ ಕಳೆದುಕೊಳ್ಳುತ್ತವೆ. ರಸ್ತೆ ದಾಟುವಾಗ ವೇಗವಾಗಿ ಬಂದು ಡಿಕ್ಕಿ ಹೊಡೆಯುವ ವಾಹನಗಳಿಗೆ ಆನೆಗಳೂ ಬಲಿಯಾದ ಉದಾಹರಣೆಗಳಿವೆ. ಹಾಗಾಗಿಯೇ ಅಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಸ್ತವಾಂಶ ಹಾಗಿರುವಾಗ, ಕೇವಲ ಓಟಿಗಾಗಿ, ಜನರನ್ನು ಮನವೊಲಿಸಲು ನಿರ್ಬಂಧ ತೆರವು ಮಾಡುತ್ತೇವೆ ಎಂಬುದು ಮೂರ್ಖತನ. ಇದು ವನ್ಯಜೀವಿ ಕಾಯ್ದೆಯಷ್ಟೇ ಅಲ್ಲದೆ, ನಮ್ಮ ಸಂವಿಧಾನದ ಆಶಯಗಳಿಗೂ ವಿರುದ್ಧ” ಎಂದು ವನ್ಯಜೀವಿ ಸಂರಕ್ಷಕ ಹಾಗೂ ಪತ್ರಕರ್ತ ಜೋಸೆಫ್ ಹೂವಾರ್ ಆತಂಕ ವ್ಯಕ್ತಪಡಿಸಿದ್ದಾರೆ.

“2022ರ ಡಿಸೆಂಬರ್ ತಿಂಗಳಲ್ಲಿ ಟ್ರಕ್ ಡಿಕ್ಕಿ ಹೊಡೆದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿತ್ತು. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ತಾಯಿಯ ಗರ್ಭದಿಂದ ಸತ್ತ ಆನೆಯ ಮರಿಯನ್ನು ಹೊರತೆಗೆದಾಗ ಅಪಘಾತದ ತನಿಖೆ ನಡೆಸುತ್ತಿರುವ ಜನರು ಕೂಡ ಕಣ್ಣೀರು ಹಾಕಿದ್ದರು. ಈ ಅಪಘಾತವಾಗದಿದ್ದರೆ ಒಂದು ವಾರದಲ್ಲೇ ಆನೆ ಮರಿ ಜನಿಸುತ್ತಿತ್ತು. ಆದರೆ, ಅವಿವೇಕಿ ಟ್ರಕ್ ಚಾಲಕ ಎರಡು ಜೀವಗಳನ್ನು ಕಿತ್ತುಕೊಂಡಿದ್ದ. ಕಾಡು ನಮಗೆ ಸೇರಿದ್ದಲ; ಅದು ವನ್ಯಜೀವಿಗಳಿಗೆ ಸೇರಿದೆ ಎಂಬುದನ್ನು ಮರೆಯದಿರೋಣ. ಹೀಗಾಗಿ, ಬಂಡೀಪುರದಲ್ಲಿ ರಾತ್ರಿ ವಾಹನಗಳ ಸಂಚಾರಕ್ಕೆ ಅವಕಾಶ ಸಲ್ಲದು” ಎಂದು ಅವರು ಹೇಳಿದ್ದಾರೆ.

Read More
Next Story