ಬೈಕ್ ಕಳ್ಳರ ಬಂಧನ, 15 ಲಕ್ಷ ರೂಪಾಯಿ ಮೌಲ್ಯದ 18 ವಾಹನಗಳು ವಶ
x

ಬೈಕ್ ಕಳ್ಳರ ಬಂಧನ, 15 ಲಕ್ಷ ರೂಪಾಯಿ ಮೌಲ್ಯದ 18 ವಾಹನಗಳು ವಶ

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು.


Click the Play button to hear this message in audio format

ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಡೇಪಾಳ್ಯ ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ರೂಪಾಯಿ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವ ಮೂಲಕ, ನಗರದ 13 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು.

ಮೊದಲ ಕಾರ್ಯಾಚರಣೆ

ಖಚಿತ ಮಾಹಿತಿ ಆಧರಿಸಿ, ಪೊಲೀಸರು ನವೆಂಬರ್ 14 ರಂದು ಹೊಸೂರು ರಸ್ತೆಯ ಬಾಷ್ ಕಂಪನಿ ಬಳಿ ಕದ್ದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ, ಆತ ತನ್ನ ತಪ್ಪೊಪ್ಪಿಕೊಂಡಿದ್ದು, ಕದ್ದ ವಾಹನಗಳನ್ನು ಫುಟ್‌ಬಾಲ್ ಮೈದಾನದ ಪಾರ್ಕಿಂಗ್ ಮತ್ತು ಎಲ್‌ಟಿ ಲೇಔಟ್ ಬಳಿ ನಿಲ್ಲಿಸಿರುವುದಾಗಿ ಮಾಹಿತಿ ನೀಡಿದ. ಆತನಿಂದ ಒಟ್ಟು 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಎರಡನೇ ಕಾರ್ಯಾಚರಣೆ

ನವೆಂಬರ್ 15 ರಂದು, ಮತ್ತೊಂದು ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಹೊಸೂರು ರಸ್ತೆಯ ಕೂಡ್ಲು ಜಂಕ್ಷನ್ ಬಳಿ ಕದ್ದ ಬೈಕ್ ಸಮೇತ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು. ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಗಾರೇಭಾವಿಪಾಳ್ಯದ ಗ್ಲಾಸ್ ಬಿಲ್ಡಿಂಗ್ ಹಿಂಭಾಗದ ಖಾಲಿ ಜಾಗದಲ್ಲಿ ಕದ್ದ ಬೈಕ್‌ಗಳನ್ನು ನಿಲ್ಲಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ. ನವೆಂಬರ್ 16 ರಂದು ಅಲ್ಲಿಂದ 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ ಒಟ್ಟು 10 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ 8.5 ಲಕ್ಷ ರೂಪಾಯಿ.

ಈ ಎರಡು ಕಾರ್ಯಾಚರಣೆಗಳಲ್ಲಿ ಬಂಧಿತರಾದ ಮೂವರು ಆರೋಪಿಗಳಿಂದ ಒಟ್ಟು 18 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ ಬಂಡೇಪಾಳ್ಯ ಠಾಣೆಯ 4, ಹಾಗೂ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ವಿವೇಕನಗರ, ಇಂದಿರಾನಗರ, ಕೆ.ಎಸ್. ಲೇಔಟ್, ಬಾಗಲಗುಂಟೆ, ಗಿರಿನಗರ, ರಾಜಗೋಪಾಲ ನಗರ ಮತ್ತು ಹೆಣ್ಣೂರು ಠಾಣೆಗಳ ತಲಾ 1 ಪ್ರಕರಣ ಸೇರಿದಂತೆ ಒಟ್ಟು 13 ಬೈಕ್ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಉಳಿದ 5 ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.

Read More
Next Story