ಬ್ಯಾನರ್ ಸಂಘರ್ಷ ಈಗ ರಾಜಕೀಯ ಸಮರ: ಭರತ್ ರೆಡ್ಡಿ ಬಂಧಿಸುವವರೆಗೆ ಹೋರಾಟಕ್ಕೆ ಸಜ್ಜು
x

ಬ್ಯಾನರ್ ಸಂಘರ್ಷ ಈಗ ರಾಜಕೀಯ ಸಮರ: ಭರತ್ ರೆಡ್ಡಿ ಬಂಧಿಸುವವರೆಗೆ ಹೋರಾಟಕ್ಕೆ ಸಜ್ಜು

ಭರತ್‌ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಕೇವಲ ಪ್ರತಿಭಟನೆ ಮಾತ್ರವಲ್ಲದೇ, ಬಳ್ಳಾರಿ ರಾಜಕೀಯ ಅಧಿಪತ್ಯದ ಹೋರಾಟವಾಗಿ ಮಾರ್ಪಟ್ಟಿದೆ.


Click the Play button to hear this message in audio format

ಬಳ್ಳಾರಿ ನಗರದಲ್ಲಿ ನಡೆದ ಬ್ಯಾನರ್‌ ಹರಿದು ಹಾಕಿದ ವಿವಾದ ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಅವರನ್ನು ಬಂಧಿಸುವವರೆಗೂ ಹೋರಾಟ ನಿಲ್ಲಿಸದಿರಲು ಮಾಜಿ ಸಚಿವರಾದ ಗಾಲಿ ಜನಾರ್ದನರೆಡ್ಡಿ ಮತ್ತು ಬಿ. ಶ್ರೀರಾಮುಲು ನಿರ್ಧರಿಸಿದ್ದಾರೆ. ಬ್ಯಾನರ್ ವಿವಾದವು ಈಗ ಬಳ್ಳಾರಿಯ ರಾಜಕೀಯ ಅಧಿಪತ್ಯದ ಕಾಳಗವಾಗಿ ಮಾರ್ಪಟ್ಟಿದ್ದು, ಪ್ರತಿಪಕ್ಷ ಬಿಜೆಪಿ ಇದನ್ನು ರಾಜ್ಯಮಟ್ಟದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.

ಶಾಸಕ ಭರತ್‌ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ರಾಜ್ಯ ನಾಯಕತ್ವವೂ ಬೆಂಬಲ ಸೂಚಿಸಿದ್ದು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜತೆಗೆ ಕೈಜೋಡಿಸಿ ಬಳ್ಳಾರಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಿವೆ.

ವೀಡಿಯೋ ಸಾಕ್ಷ್ಯದ ಅಸ್ತ್ರ

"ಬ್ಯಾನರ್ ಹಾಕಿರುವುದೇ ಗಲಭೆಯನ್ನು ಪ್ರಚೋದಿಸಲು" ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಬಳಿ ಘಟನೆ ಪ್ರಾರಂಭವಾದಾಗಿನಿಂದ ಅಹಿತಕರ ಘಟನೆ ಸಂಭವಿಸುವವರೆಗಿನ ಸಂಪೂರ್ಣ ವಿಡಿಯೋ ದಾಖಲೆಗಳಿದ್ದು, ಶಾಸಕರೇ ಈ ಗಲಭೆಗೆ ಪ್ರೇರಕರು ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಅವರು ಆರೋಪಿಸುತ್ತಿದ್ದಾರೆ. ಯಾವುದೇ ತನಿಖಾ ಸಂಸ್ಥೆ ಕೇಳಿದರೂ ದಾಖಲೆ ನೀಡಲು ಸಿದ್ಧ ಎಂದು ಹೇಳುವ ಮೂಲಕ ತನಿಖಾ ಸಂಸ್ಥೆಗಳ ಮೇಲೂ ಒತ್ತಡ ಹೇರುವ ತಂತ್ರವನ್ನು ಅನುಸರಿಸಲಾಗುತ್ತಿದೆ. ಶಾಸಕ ಭರತ್ ರೆಡ್ಡಿ ಅವರ ಬಂಧನವೇ ನಮ್ಮ ಅಂತಿಮ ಗುರಿ ಎಂಬುದು ಪ್ರತಿಭಟನಾಕಾರರ ನಿಲುವಾಗಿದೆ.

ಸಿಐಡಿ ತನಿಖೆ

ಘಟನೆಯ ಗಾಂಭೀರ್ಯವನ್ನು ಅರಿತ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದೆ. ಬಿಜೆಪಿ ನಾಯಕರು ಇದನ್ನು ಸ್ವಾಗತಿಸಿದ್ದರೂ, ಸ್ಥಳೀಯ ವಲಯದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಸಿಐಡಿಗೆ ನೀಡಲಾಗಿದೆಯೇ ಅಥವಾ ಸ್ಥಳೀಯ ಪೊಲೀಸರ ಮೇಲಿನ ರಾಜಕೀಯ ಒತ್ತಡವನ್ನು ತಪ್ಪಿಸಲು ಈ ಕ್ರಮವೇ ಎಂಬ ಅನುಮಾನ ವ್ಯಕ್ತವಾಗಿದೆ. ಸಿಐಡಿ ವರದಿ ಏನೇ ಬಂದರೂ, ಶಾಸಕರ ಬಂಧನವಾಗದ ಹೊರತು ಹೋರಾಟ ಹಿಂಪಡೆಯದಿರಲು ನಿರ್ಧರಿಸಲಾಗಿದೆ.

ರಾಜ್ಯಮಟ್ಟಕ್ಕೆ ವಿಸ್ತರಣೆ, ಜ.17ರಂದು ಬೃಹತ್ ಹೋರಾಟ?

ಪ್ರಕರಣವನ್ನು ಕೇವಲ ಬಳ್ಳಾರಿಗೆ ಸೀಮಿತಗೊಳಿಸದೆ ರಾಜ್ಯಮಟ್ಟದಲ್ಲಿ ಗಮನ ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಬೆಂಗಳೂರಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಸಂಕ್ರಾಂತಿ ಹಬ್ಬದ ನಂತರ, ಬಹುತೇಕ ಜನವರಿ 17ರಂದು ಬೃಹತ್ ಹೋರಾಟ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದಿನಾಂಕ ಅಂತಿಮವಾಗದಿದ್ದರೂ, ವಿಜಯೇಂದ್ರ ಮತ್ತು ಅಶೋಕ್ ನೇತೃತ್ವದಲ್ಲಿ ಹೋರಾಟ ನಡೆದರೆ ಅದು ಸರ್ಕಾರದ ವಿರುದ್ಧದ ದೊಡ್ಡ ಆಂದೋಲನವಾಗಲಿದೆ.

ರಾಜಕೀಯ ಅಸ್ತಿತ್ವದ ಮರುಸ್ಥಾಪನೆ

ಬಳ್ಳಾರಿಯಲ್ಲಿ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರಿಗೆ ತಮ್ಮ ರಾಜಕೀಯ ಶಕ್ತಿಯನ್ನು ಮರುಸ್ಥಾಪಿಸಲು ಈ ಪ್ರಕರಣ ಒಂದು ವೇದಿಕೆಯಾಗಿದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಜಗಳವಾಗಿ ಉಳಿದಿಲ್ಲ, ಬದಲಾಗಿ ಎರಡು ರಾಜಕೀಯ ಸಿದ್ಧಾಂತಗಳು ಮತ್ತು ಶಕ್ತಿ ಕೇಂದ್ರಗಳ ನಡುವಿನ ಯುದ್ಧವಾಗಿದೆ. ಈ ಹೋರಾಟದ ಮೂಲಕ ರೆಡ್ಡಿ ಮತ್ತು ರಾಮುಲು ಅವರ ಸಂಘಟನಾ ಶಕ್ತಿಯು ಬಿಜೆಪಿಗೆ ಮರುಚೈತನ್ಯ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Read More
Next Story