
ಬಳ್ಳಾರಿ ಘರ್ಷಣೆ| ಎಸ್ಪಿ ಅಮಾನತು ಬೆನ್ನಲ್ಲೇ ಐಜಿ ವರ್ತಿಕಾ ಕಟಿಯಾರ್ ಎತ್ತಂಗಡಿ!
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಗೆ ಭೇಟಿ ನೀಡಿ ಘಟನೆಯ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಡಿಕೆಶಿ ಭೇಟಿ ಬೆನ್ನಲ್ಲೇ ಐಜಿ ವರ್ತಿಕಾ ಕಟಿಯಾರ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಬ್ಯಾನರ್ ಅಳವಡಿಕೆ ವಿಚಾರವಾಗಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಬೆನ್ನಲ್ಲೇ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ಪವನ್ ನೆಜ್ಜೂರು ಅವರನ್ನು ಘಟನೆಗೆ ಹೊಣೆಯಾಗಿಸಿ ಸರ್ಕಾರ ಅಮಾನತು ಮಾಡಿತ್ತು. ಈಗ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕಿ (ಐಜಿ) ವರ್ತಿಕಾ ಕಟಿಯಾರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ವರ್ತಿಕಾ ಕಟಿಯಾರ್ ಜಾಗಕ್ಕೆ ನೂತನ ಐಜಿಯಾಗಿ ಹರ್ಷ ಗುಪ್ತ ಅವರನ್ನು ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಡಾ. ಸುಮನ ಡಿ. ಪೆನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ.
ಜ.1ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಪವನ್ ನೆಜ್ಜೂರು ಅಧಿಕಾರ ಸ್ವೀಕರಿಸಿದ್ದರು. ಅಂದು ಸಂಜೆಯೇ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ನಿವಾಸದ ಮುಂದೆ ಘರ್ಷಣೆ ಸಂಭವಿಸಿತ್ತು. ಶಾಸಕ ನಾ.ರಾ.ಭರತ್ ರೆಡ್ಡಿ ಆಪ್ತನಾದ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕ ಗುಂಡು ಹಾರಿಸಿದ್ದರು. ಆ ಗುಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವರಿಗೆ ತಗುಲಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದ.
ಈ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೂತನ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಎಸ್ಪಿ ವಿಫಲರಾಗಿದ್ದರು ಎಂಬ ಕಾರಣ ನೀಡಲಾಗಿತ್ತು. ಈ ಮಧ್ಯೆ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಡಿಜಿ–ಐಜಿಪಿ ಡಾ. ಎಂ.ಎ. ಸಲೀಂ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ವರ್ಟಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ನಿನ್ನೆಯಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಗೆ ಭೇಟಿ ನೀಡಿ ಘಟನೆಯ ಕುರಿತು ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದಿದ್ದರು. ಡಿಕೆಶಿ ಭೇಟಿ ಬೆನ್ನಲ್ಲೇ ಐಜಿ ವರ್ತಿಕಾ ಕಟಿಯಾರ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ.
ಇನ್ನು ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಗನ್‌ಮ್ಯಾನ್ ಗುರುಚರಣ್ ಸಿಂಗ್ ಬಳಸಿದ್ದ ಬಂದೂಕಿನಿಂದಲೇ ಗುಂಡು ತಗುಲಿ ರಾಜಶೇಖರ್ ಮೃತಪಟ್ಟಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ರಾಜಶೇಖರ್ ದೇಹದಿಂದ 12 ಎಂಎಂ ಸಿಂಗಲ್ಬೋರ್ ಬುಲೆಟ್ ಹೊರತೆಗೆದು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಮೂವರು ಗನ್‌ಮ್ಯಾನ್‌ಗಳು ಸೇರಿ ಎರಡೂ ಕಡೆಯವರ 26 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

