
ಬಳ್ಳಾರಿ ಘರ್ಷಣೆ| ನಿಯುಕ್ತಿಗೊಂಡ ಒಂದೇ ದಿನದಲ್ಲಿ ಎಸ್ಪಿ ತಲೆದಂಡ
ಪರಿಸ್ಥಿತಿ ನಿಭಾಯಿಸುವಲ್ಲಿ ಎಸ್ಪಿ ಪವನ್ ನೆಜ್ಜೂರು ವಿಫಲರಾಗಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಪರಿಸ್ಥಿತಿಯ ಸೂಕ್ಷ್ಮತೆ ತಿಳಿಸಲಿಲ್ಲ ಎಂಬ ಕಾರಣ ನೀಡಲಾಗಿದೆ.
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಕಲ್ಲುತೂರಾಟ ಹಾಗೂ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಬಳ್ಳಾರಿ ಜಿಲ್ಲೆಗೆ ಜ.1 ರಂದು ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪವನ್ ನೆಜ್ಜೂರು ಅವರು ಒಂದೇ ದಿನದಲ್ಲಿ ಅಮಾನತಾಗಿದ್ದಾರೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿತ್ತು. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಬಳ್ಳಾರಿ ವಲಯದ ಡಿಐಜಿಪಿ ಅಮಾನತು ಮಾಡಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ಪವನ್ ನೆಜ್ಜೂರು ವಿಫಲರಾಗಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಪರಿಸ್ಥಿತಿಯ ಸೂಕ್ಷ್ಮತೆ ತಿಳಿಸಲಿಲ್ಲ ಎಂಬ ಕಾರಣ ನೀಡಲಾಗಿದೆ.
ಎಸ್ಪಿಯ ನಡವಳಿಕೆಯು ಅಖಿಲ ಭಾರತೀಯ ಸೇವೆಗಳ (ನಡತೆ) ನಿಯಮಗಳು, 1968 ರ ನಿಯಮ 3 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಬಾಕಿ ಉಳಿಸಿ ಅಮಾನತು ಮಾಡಲಾಗಿದೆ.

