
ಪಿಒಪಿ ಗಣಪತಿ ಬೇಡ, ಮಣ್ಣಿನ ಗಣಪನಿಗೆ ಪೂಜೆ ಸಲ್ಲಿಸಿ: ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ
ಬಣ್ಣರಹಿತ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪೂಜಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿಯಾದ, ಬಣ್ಣರಹಿತ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪೂಜಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
"ಗಣೇಶ ಹಬ್ಬದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ, ನೀರಿನಲ್ಲಿ ಕರಗದ ಪಿಒಪಿ ಹಾಗೂ ವಿಷಕಾರಿ ರಾಸಾಯನಿಕ ಬಣ್ಣ ಲೇಪಿತ ಮೂರ್ತಿಗಳ ಬಳಕೆ ಹೆಚ್ಚಾಗಿದೆ. ಇವುಗಳನ್ನು ಜಲಾಶಯಗಳಲ್ಲಿ ವಿಸರ್ಜಿಸಿದಾಗ, ಅವುಗಳಲ್ಲಿರುವ ಪಾದರಸ, ಸೀಸ, ಕ್ಯಾಡ್ಮಿಯಂನಂತಹ ಭಾರಲೋಹಗಳು ನೀರನ್ನು ಸೇರಿ ಜಲಚರಗಳ ಮತ್ತು ಪಶುಪಕ್ಷಿಗಳ ಸಾವಿಗೆ ಕಾರಣವಾಗುತ್ತಿವೆ. ಇದು ಮನುಷ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ," ಎಂದು ಸಚಿವರು ಎಚ್ಚರಿಸಿದ್ದಾರೆ.
ಕಾನೂನು ಮತ್ತು ಹೈಕೋರ್ಟ್ ಆದೇಶ
"ಪಿಒಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಿ 2023ರ ಸೆಪ್ಟೆಂಬರ್ 15ರಂದೇ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಅಡಿಯಲ್ಲೂ ರಾಜ್ಯದ ಯಾವುದೇ ಜಲಮೂಲಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ, ರಾಜ್ಯ ಹೈಕೋರ್ಟ್ ಕೂಡ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ," ಎಂದು ಸಚಿವರು ಕಾನೂನಾತ್ಮಕ ಕ್ರಮಗಳ ಬಗ್ಗೆ ವಿವರಿಸಿದರು.
"ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಣೇಶನು ಮಣ್ಣಿನಿಂದಲೇ ಹುಟ್ಟಿದ, ಪರಿಸರ ಸ್ನೇಹಿ ದೇವನಾಗಿದ್ದಾನೆ. ಆದ್ದರಿಂದ, ಪ್ರಜ್ಞಾವಂತ ನಾಗರಿಕರು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಪೂಜಿಸಿ ಪರಿಸರವನ್ನು ಉಳಿಸಬೇಕು," ಎಂದು ಈಶ್ವರ ಖಂಡ್ರೆ ಕೋರಿದ್ದಾರೆ.