ಪ್ರಲ್ಹಾದ್‌ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿಯಿಂದ ಆಡಿಯೋ ಸಂದೇಶ
x

ಪ್ರಲ್ಹಾದ್‌ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿಯಿಂದ ಆಡಿಯೋ ಸಂದೇಶ


ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮತ ನೀಡದಂತೆ ಬಾಲೇಹೊಸೂರು ಹಾಗೂ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಮಠಗಳ ಪೀಠಾಧಿಪತಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ಆಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೆಲವೇ ಕ್ಷಣಗಳಷ್ಟೇ ಬಾಕಿ ಉಳಿದಿರುವಾಗ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ, ಮತ್ತೆ ಹಿಂದಕ್ಕೆ ಪಡೆದಿದ್ದ ದಿಂಗಾಲೇಶ್ವರ ಸ್ವಾಮಿ ಅವರು ಕೊನೆಯ ಕ್ಷಣದಲ್ಲಿ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮತ ಚಲಾಯಿಸಿದಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಸುಮಾರು ಐದು ನಿಮಿಷಗಳ ಈ ಆಡಿಯೋದಲ್ಲಿ, ಜೋಶಿ ಅವರು ತಮ್ಮ ಕ್ಷೇತ್ರಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಆರೋಪಿಸಿರುವ ಅವರು, ದೇಶದ ಹಿತದೃಷ್ಟಿಯಿಂದ, ರಾಜ್ಯದ ಹಿತ ದೃಷ್ಟಿಯಿಂದ ಜೋಶಿ ಅವರಿಗೆ ಮತ ನೀಡಬೇಡಿ ಎಂಬ ಸಂದೇಶ ಬಿತ್ತರಿಸಿದ್ದಾರೆ. ರೈತರಿಗೆ ಅತ್ಯಗತ್ಯವಾದ ಮಹದಾಯಿ ಸಮಸ್ಯೆಯನ್ನು ಬಗೆಹರಿಸದಿರಲು ಜೋಶಿ ಅವರೇ ಕಾರಣ ಎಂದು ಅವರು ದೂರಿದ್ದಾರೆ.

ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕೆಲವು ದಿನಗಳ ಹಿಂದೆ ಫಕೀರ ದಿಂಗಾಲೇಶ್ವರ ಸ್ವಾಮಿ ಧಾರವಾಡ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಹಿಂಪಡೆದಿದ್ದರು. ಆ ಬಳಿಕ ಅವರು ಜೋಶಿ ಅವರಿಗೆ ಮತ ನೀಡದಂತೆ ಕ್ಷೇತ್ರದಾದ್ಯಂತ ಕಾರ್ಯಕ್ರಮಗಳನ್ನು ನಡೆಸಿದ್ದರು.

Read More
Next Story