ಟೆಕ್ಕಿ ಆತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ;  ತಲೆಮರೆಸಿಕೊಂಡಿದ್ದ ಪತ್ನಿ,ಅತ್ತೆ ಕೊನೆಗೂ ಬಂಧನ
x

ಟೆಕ್ಕಿ ಆತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ; ತಲೆಮರೆಸಿಕೊಂಡಿದ್ದ ಪತ್ನಿ,ಅತ್ತೆ ಕೊನೆಗೂ ಬಂಧನ

ದೇಶಾದ್ಯಂತ ಸದ್ದು ಮಾಡಿದ್ದ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆತನ ಪತ್ನಿ ನಿಖಿತಾ ಸಿಂಘಾನಿಯಾ, ಅಕೆಯ ತಾಯಿ ನಿಶಾ ಸಿಂಘಾನಿಯಾ ಹಾಗೂ ಸಃೋದರ ಅನುರಾಗ್‌ ಸಿಂಘಾನಿಯಾರನ್ನು ಬಂಧಿಸಲಾಗಿದೆ


ದೇಶಾದ್ಯಂತ ಸದ್ದು ಮಾಡಿದ್ದ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆತನ ಪತ್ನಿ ನಿಖಿತಾ ಸಿಂಘಾನಿಯಾರನ್ನು ಬೆಂಗಳೂರು ಪೊಲೀಸರು ಹರಿಯಾಣದ ಗುರುಗ್ರಾಮ, ಆಕೆಯ ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್‌ ಸಿಂಘಾನಿಯಾರನ್ನು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿರುವ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಕಳೆದ ಮೂರ್ನಾಲ್ಕು ದಿನಗಳಿಂದ ನಿಖಿತಾ ಸಿಂಘಾನಿಯಾ ವಿಚಾರಣೆಗೆ ಅಲ್ಲೇ ಬೀಡುಬಿಟ್ಟಿದ್ದರು. ತನಿಖೆಗೆ ಹಾಜರಾಗುವಂತೆ ನೊಟೀಸ್‌ ನೀಡಲಾಗಿದ್ದರೂ ತಲೆಮರೆಸಿಕೊಂಡಿದ್ದ ಅರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ನಾಲ್ಕನೇ ಆರೋಪಿ ಸುಶೀಲ್‌ ಸಿಂಘಾನಿಯಾ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು ಪೊಲೀಸ್ ತಂಡ ಗುರುವಾರ ಉತ್ತರ ಪ್ರದೇಶದ ಜಾನ್‌ಪುರ ತಲುಪಿತ್ತು. ಬೆಂಗಳೂರು ಪೊಲೀಸರ ತಂಡ ಅತುಲ್ ಸುಭಾಷ್ ಅವರ ಅತ್ತೆಯ ಮನೆಗೆ ತಲುಪಿ ವಿಚಾರಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಪೊಲೀಸ್ ತಂಡ ಬರುವ ಮುನ್ನವೇ ನಿಖಿತಾ ಸಿಂಘಾನಿಯಾ ಮನೆಯಿಂದ ನಾಪತ್ತೆಯಾಗಿದ್ದರು..

ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಗುರುವಾರ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಸ್ಥಳೀಯ ಪೊಲೀಸರ ಸಹಾಯದಿಂದ ಅತುಲ್ ಸುಭಾಷ್ ಅವರ ಅತ್ತೆ ಮನೆಗೆ ಹೋಗಿದ್ದರು. ಆದರೆ, ಪೊಲೀಸರು ಬರುವ ಮುನ್ನವೇ ಅತುಲ್​ ಅತ್ತೆ ಮನೆಯವರು ಫೋನ್ ಸ್ವಿಚ್‌ ಆಫ್‌ ಮಾಡಿಕೊಂಡು, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಮನೆಯ ಪ್ರವೇಶದ್ವಾರದಲ್ಲಿ ನೋಟಿಸ್ ಅಂಟಿಸಿದ್ದು, ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನೋಟಿಸ್​ನಲ್ಲಿ ಹೇಳಿದ್ದರು.

ಪ್ರಕರಣವೇನು?

ಬೆಂಗಳೂರಿನ ಆಟೊಮೊಬೈಲ್‌ ಕಂಪನಿಯೊಂದರಲ್ಲಿ ಕೃತಕ ಬುದ್ಧಿಮತ್ತೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅತುಲ್‌ ಸುಭಾಷ್‌ ಡಿ. 8ರಂದು ಭಾನುವಾರ ರಾತ್ರಿ ತಾವು ವಾಸುಸುತ್ತಿದ್ದ ಮಾರತ್ತಹಳ್ಳಿ ಸಮೀಪದ ಮುಂಜುನಾಥ ಲೇಔಟ್‌ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೂಲತಃ ಬಿಹಾರದ ಅತುಲ್ ಸುಭಾಷ್ ಐದು ವರ್ಷಗಳ ಹಿಂದೆ ನಿಖಿತಾ ಸಿಂಘಾನಿಯಾ ಎಂಬುವರನ್ನು ವಿವಾಹವಾಗಿದ್ದರು. ಉತ್ತರ ಪ್ರದೇಶದಲ್ಲೇ ವಾಸವಿದ್ದ ದಂಪತಿ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈಚೆಗೆ ಕೌಟುಂಬಿಕ ವಿಚಾರವಾಗಿ ಜಗಳ ಮಾಡಿಕೊಂಡು ಪತ್ನಿ ನಿಖಿತಾ ಸಿಂಘಾನಿಯಾ ಅವರು ಮಗನೊಂದಿಗೆ ಉತ್ತರ ಪ್ರದೇಶಕ್ಕೆೆ ವಾಪಸ್ ಹೋಗಿದ್ದರು. ಅಂದಿನಿಂದ ಅತುಲ್ ಸುಭಾಷ್ ಒಬ್ಬರೇ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು.

ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇಧನದ ಮೊರೆ ಹೋಗಿದ್ದರು. ಅತುಲ್‌ ವಿರುದ್ಧ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಸುಮಾರು ಕೊಲೆ ಸೇರಿದಂತೆ 9 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಜರ್ಜರಿತರಾದ ಅತುಲ್‌ ಸುಭಾಷ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಅತುಲ್‌ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಮಾರತ್ತಹಳ್ಳಿ ಪೊಲೀಸರು ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ಆಕೆಯ ಸೋದರ ಅನುರಾಗ್ ಹಾಗೂ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಖಿತಾ ಸಿಂಘಾನಿಯಾ ಅವರೊಂದಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಂಘರ್ಷ ಏರ್ಪಟ್ಟಾಗಿನಿಂದ ನನ್ನ ಸೋದರ ಅತುಲ್ ಸುಭಾಷ್ ದೈಹಿಕ ಹಾಗೂ ಮಾನಸಿಕವಾಗಿ ನೊಂದಿದ್ದರು. ಪ್ರತಿ ಬಾರಿ ನ್ಯಾಯಾಲಯದ ವಿಚಾರಣೆಗೆ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಬರಬೇಕಿತ್ತು. ಈ ವೇಳೆ ನಿಖಿತಾ ಸಿಂಘಾನಿಯಾ ಕುಟುಂಬಸ್ಥರು ಎದುರಲ್ಲೇ ನಿಂದಿಸುತ್ತಿದ್ದರು. ಹಣ ಕೊಡಲು ಆಗದಿದ್ದರೆ ಸಾಯುವಂತೆ ಪ್ರಚೋದಿಸುತ್ತಿದ್ದರು ಎಂದು ಬಿಕಾಸ್ ಕುಮಾರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಟ್ರಂಪ್, ಎಲಾನ್ ಮಸ್ಕ್ ನೆರವಿಗೂ ಮೊರೆ

ಸುಭಾಷ್ ಅತುಲ್ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಸಾಧ್ಯವಾದರೆ ನನ್ನ ಕುಟುಂಬಕ್ಕೆೆ ಸಹಾಯ ಮಾಡುವಂತೆ ಕೋರಿದ್ದಾರೆ. ಅಲ್ಲದೇ ಪುರುಷರ ಹಕ್ಕುಗಳ ಬಗ್ಗೆ ಹೋರಾಟಕ್ಕೆ ನೆರವಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಹಾಯವನ್ನೂ ಯಾಚಿಸಿದ್ದರು.

ನನ್ನದಲ್ಲದ ತಪ್ಪಿಗೂ ನನ್ನ ಮೇಲೆ ಪತ್ನಿ ನಿಖಿತಾ ಹಾಗೂ ಕುಟುಂಬಸ್ಥರು 9 ದೂರುಗಳನ್ನು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಗೆ ಪ್ರತಿಬಾರಿ ಉತ್ತರ ಪ್ರದೇಶಕ್ಕೆ ಹೋಗಬೇಕಿದೆ. ಪತ್ನಿ ಕುಟುಂಬದವರ ಹಣಕಾಸಿನ ಬೇಡಿಕೆ ಪೂರೈಸಿ ಸಾಕಾಗಿದೆ. ನನ್ನ ದುಡಿಮೆಯ ಎಲ್ಲಾ ಹಣವನ್ನು ಶತ್ರುಗಳನ್ನು ಸಾಕಲು ಕೊಡಬೇಕಾಗಿದೆ. ಇದರಿಂದ ಶತ್ರುಗಳು ಬಲವಾಗುತ್ತಿದ್ದಾರೆ. ಭಾರತದಲ್ಲಿ ಪುರುಷರ ಹಕ್ಕುಗಳ ಹರಣವಾಗುತ್ತಿದೆ. ಇದರಿಂದ ಪುರುಷರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಟ್ರಂಪ್ ಹಾಗೂ ಎಲಾನ್ ಮಸ್ಕ್ಗೆ ಮನವಿ ಮಾಡಿದ್ದರು.

ಮಗನ ಮೇಲೆ ಅತಿಯಾಗಿ ಪ್ರೀತಿ ಇಟ್ಟುಕೊಂಡಿದ್ದ ಅತುಲ್‌ ಸುಭಾಷ್‌, ಸಾಯುವ ಮುನ್ನ ಮಗನಿಗಾಗಿ ವಿಶೇಷ ಗಿಫ್ಟ್‌ ಬಾಕ್ಸ್‌ ಕೂಡ ಸಿದ್ದ ಮಾಡಿಟ್ಟಿದ್ದರು. ಈ ಗಿಫ್ಟ್‌ ಬಾಕ್ಸನ್ನು ತನ್ನ ನಾಲ್ಕು ವರ್ಷದ ಮಗನಿಗೆ ತಲುಪಿಸುವಂತೆ ಉಲ್ಲೇಖಿಸಿದ್ದರು. ಗೋಡೆಗಳ ಮೇಲೆ ‘JUSTICE IS DUE’ ಎಂಬ ಬರಹದ ಪೋಸ್ಟರ್ ಅಂಟಿಸಿದ್ದರು. ತಾನು ಪೂರ್ಣಗೊಳಿಸಿದ ಎಲ್ಲ ಕೆಲಸಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ, ಬದುಕಿಗೆ ವಿದಾಯ ಹೇಳಿದ್ದರು.

ಮಗನನ್ನು ನನ್ನ ಪೋಷಕರಿಗೆ ಒಪ್ಪಿಸಬೇಕು. ತಮ್ಮ ಪತ್ನಿ ಹಾಗೂ ಆಕೆಯ ಮನೆಯವರು ಯಾವುದೇ ಕಾರಣಕ್ಕೂ ನನ್ನ ಶವ ನೋಡಬಾರದು ಎಂದು ಷರತ್ತು ವಿಧಿಸಿದ್ದರು ಎಂದು ಬರೆದುಕೊಂಡಿದ್ದರು.

ನ್ಯಾಯದಾನದ ಬಗ್ಗೆಯೂ ಬೇಸರ

ವಿಚ್ಛೇಧನ ಹಾಗೂ ಮಗನನ್ನು ಸುಪರ್ದಿಗೆ ಪಡೆಯಲು ಕೋರಿದ್ದ ಪ್ರಕರಣದಲ್ಲಿ ಉತ್ತರಪ್ರದೇಶದ ನ್ಯಾಯಾಧೀಶರ ಧೋರಣೆಯ ಬಗ್ಗೆ ಡೆತ್‌ನೋಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರು ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ನನ್ನ ಚಿತಾಭಸ್ಮವನ್ನು ನೀರಿಗೆ ಬಿಡಬೇಡಿ. ನ್ಯಾಯ ಸಿಗದೇ ಹೋದರೆ ಚಿತಾಭಸ್ಮವನ್ನು ನ್ಯಾಯಾಲಯದ ಮುಂದಿರುವ ಚರಂಡಿಗೆ ಸುರಿಯಿರಿ. ಏಕೆಂದರೆ ಈ ದೇಶದಲ್ಲಿ ಮನುಷ್ಯನ ಜೀವನ ಚರಂಡಿಯಾಗಿದೆ ಎಂದು ನೋವು ತೋಡಿಕೊಂಡಿದ್ದರು.

ಆತ್ಮಹತ್ಯೆಗೂ ಎರಡು ದಿನ ವೇಳಾಪಟ್ಟಿ

ಅತುಲ್‌ ಸುಭಾಷ್‌ ಆತ್ಮಹತ್ಯೆೆ ಮಾಡಿಕೊಳ್ಳುವ ಮೊದಲು ಏನೇಲ್ಲ ಕೆಲಸ ಮಾಡಬೇಕು. ಯಾರಿಗೆಲ್ಲ ಕರೆ ಮಾಡಬೇಕು ಎಂಬ ಬಗ್ಗೆ ಎರಡು ದಿನಗಳ ವೇಳಾಪಟ್ಟಿ ಸಿದ್ದಪಡಿಸಿಕೊಂಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಾವಿಗೂ ಮುನ್ನ ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು, ಗೇಟ್ ಲಾಕ್ ಮಾಡಬೇಕು. 100 ಬಾರಿ ಶಿವನಾಮ ಜಪಿಸಬೇಕು. ಪ್ರಿಡ್ಜ್‌ ಮೇಲೆ ರೂಂ, ಕಾರು, ಬೈಕ್ ಕೀ ಇಡಬೇಕು. ಡೆತ್ ನೋಟ್ ಟೇಬಲ್ ಮೇಲೆ ಇಡಬೇಕು. ಜೊತೆಗೆ ಹೈಕೋರ್ಟ್, ಸುಪ್ರೀಂಕೋರ್ಟ್, ಕಚೇರಿ, ಕುಟುಂಬಸ್ಥರಿಗೆ ಇ ಮೇಲ್ ಕಳಿಸಬೇಕು ಎಂದು ಪಟ್ಟಿ ಮಾಡಿಕೊಂಡಿದ್ದಾರೆ.

ಹಣಕಾಸಿನ ವಿಚಾರ ಪೂರ್ಣಗೊಳಿಸಬೇಕು. ಕಚೇರಿ ಕೆಲಸ ಮುಗಿಸಬೇಕು. ಕಾನೂನಾತ್ಮಕ ತಯಾರಿ ಮುಗಿಸಬೇಕು. ಮುಖ್ಯ ದಾಖಲೆಗಳನ್ನು ಪ್ಯಾಕ್‌ ಮಾಡಬೇಕು. ಆ ನಂತರ ಕೊನೇ ದಿನದ ಆರಂಭಕ್ಕೆೆ ತಯಾರಾಗಬೇಕು ಎನ್ನುವುದು ಮೊದಲ ದಿನದ ವೇಳಾಪಟ್ಟಿಯಲ್ಲಿದೆ.

ಇನ್ನು ಕೊನೆಯ ದಿನ ವೀಡಿಯೋ ಅಪ್‌ಲೋಡ್ ಮಾಡಬೇಕು. ಮೊಬೈಲ್‌ನಿಂದ ಫಿಂಗರ್‌ ಪ್ರಿಂಟ್‌, ಫೇಸ್ ರೆಕಗ್ನೇಷನ್‌ ಅಳಿಸಬೇಕು. ಲ್ಯಾಪ್‌ಟಾಪ್‌, ಚಾರ್ಜರ್, ಕಚೇರಿಯ ಐಡಿಯನ್ನು ಕಚೇರಿಗೆ ಕೊಡಬೇಕು. ಡೆತ್‌ನೋಟ್‌ ಸ್ಕ್ಯಾನ್‌ ಮಾಡಿ ಅಪ್‌ಲೋಡ್ ಮಾಡಬೇಕು. ಎಲ್ಲಾ ಬಾಕಿ ಪೇಮೆಂಟ್‌ ಪೂರ್ಣಗೊಳಿಸಬೇಕು. ಹಗ್ಗದ ಕುಣಿಕೆ ತಯಾರು ಮಾಡಬೇಕು. ನಂತರ ಕುಣಿಕೆಗೆ ಕೊರಲೊಡ್ಡಬೇಕು ಎಂಬುದು ಸಾವಿನ ದಿನ ವೇಳಾಪಟ್ಟಿಯಲ್ಲಿದೆ. ಅತುಲ್‌ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಡೆತ್‌ನೋಟ್ ತೆರೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story