ಬಿವೈ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ: ಪ್ರತಿಭಟನಾಕಾರರ ಬಂಧನ
x

ಬಿವೈ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ: ಪ್ರತಿಭಟನಾಕಾರರ ಬಂಧನ


ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ ಅವರ ಶಿವಮೊಗ್ಗದ ನಂಜಪ್ಪ ಬಡಾವಣೆಯ ಮನೆಗೆ ಇಂದು ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಮಹಾ ಒಕ್ಕೂಟ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿತು. ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದ ಪ್ರತಿಭಟನಾಕಾರರು ವಿಜಯೇಂದ್ರ ಸೇರಿದಂತೆ ಬಿಜೆಪಿ- ಜೆಡಿಎಸ್ ನಾಯಕರ ವಿರುದ್ಧ ಹಾಗೂ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕದಂತೆ ಪೊಲೀಸರು ಬ್ಯಾರಿಕೇಡ್​ ಹಾಕಿ ತಡೆದರು. ಮೊದಲ ಬ್ಯಾರಿಕೇಡನ್ನು ಪ್ರತಿಭಟನಾಕಾರರು ನೂಕಿ ಮುಂದೆ ಸಾಗಿದರು. ಎರಡನೇ ಬ್ಯಾರಿಕೇಡ್‌ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರೂ ಬ್ಯಾರಿಕೇಡ್​ ಮೇಲೆ ಹತ್ತಿ ಒಳ ನುಗ್ಗಲು ಯತ್ನಿಸಿದರು‌. ಈ ವೇಳೆ ಪೊಲೀಸರು ಎಲ್ಲಾ ಪ್ರತಿಭಟನಗಾರರನ್ನು ಬಂಧಿಸಿ, ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು.

ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಮಹಾ ಒಕ್ಕೂಟದ ಸಂಚಾಲಕ ಕೆ.ರಂಗನಾಥ್ ಮಾತನಾಡಿ, ʻʻಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಮೇಲೆ ಮುಡಾದ ವಿಚಾರದಲ್ಲಿ ಸುಳ್ಳು ಆರೋಪ ಮಾಡಿ, ಪಾದಯಾತ್ರೆ ನಡೆಸುತ್ತಿದ್ದಾರೆ. ಇವರ ಮೇಲೆಯೇ ಸಾಕಷ್ಟು ಆರೋಪಗಳು ಇರುವಾಗ ಯಾವುದೇ ತಪ್ಪು ಮಾಡದ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ. ಇದರಿಂದ ನಾವು ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದೇವೆʼʼ ಎಂದು ಹೇಳಿದರು.

Read More
Next Story