
ಕಳಪೆ ಆಹಾರ ಪ್ರಕರಣ ಮುಚ್ಚಿಹಾಕಲು ಯತ್ನ: ರಾಮೇಶ್ವರಂ ಕೆಫೆ ವಿರುದ್ಧ ಎಫ್‌ಐಆರ್
ಕಳಪೆ ಆಹಾರ ನೀಡಿದ್ದಲ್ಲದೇ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ರಾಮೇಶ್ವರಂ ಕೆಫೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಈ ಘಟನೆ ನಡೆದಿದೆ.
ಕಳಪೆ ಆಹಾರ ನೀಡಿದ್ದಲ್ಲದೇ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನ ರಾಮೇಶ್ವರಂ ಕೆಫೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನ.24 ರಂದು ನಿಖಿಲ್.ಎನ್ ಎಂಬುವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಕೆಫೆಯ ಕೌಂಟರ್ನಲ್ಲಿ ‘ಪೊಂಗಲ್’ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು.
ಪೊಂಗಲ್‌ನಲ್ಲಿ ಹುಳು ಪತ್ತೆಯಾಗಿದೆ ಎಂದು ಸಿಬ್ಬಂದಿಯನ್ನು ಕರೆದು ತೋರಿಸಿದ್ದರು. ಆಗ ಬದಲಿ ಆಹಾರ ನೀಡುವುದಾಗಿ ಹೇಳಿದ್ದರು. ಆದರೆ, ಬೋರ್ಡಿಂಗ್‌ಗೆ ತೆರಳಬೇಕಾದ್ದರಿಂದ ಆಹಾರ ಪಡೆಯಲು ನಿರಾಕರಿಸಿದ್ದರು. ವಾಗ್ವಾದವನ್ನು ಇತರೆ ಪ್ರಯಾಣಿಕರು ವಿಡಿಯೊ ಮಾಡಿಕೊಂಡಿದ್ದರು. ನಿಖಿಲ್ ಯಾವುದೇ ಗಲಾಟೆ ಮಾಡದೇ ಅಲ್ಲಿಂದ ತೆರಳಿದ್ದರು.
ಸಮಸ್ಯೆ ಉದ್ಭವಿಸಿದ್ದು ಹೇಗೆ?
ಆಹಾರದಲ್ಲಿ ಹುಳ ಸಿಕ್ಕಿದ ವಿಡಿಯೊ ಹಾಗೂ ಚಿತ್ರಗಳು ಮರುದಿನ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಹೋಟೆಲ್‌ನವರು ನಿಖಿಲ್‌ಗೆ ಕರೆ ಮಾಡಿ, ರಾಮೇಶ್ವರಂ ಕೆಫೆ ಹೆಸರಿಗೆ ಕಳಂಕ ತಂದಿರುವ ಕಾರಣ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೆಫೆಯ ಮಾಲೀಕರು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ನಿಖಿಲ್ ಮತ್ತು ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದರು. ನಿಖಿಲ್ ಅವರು ಕೆಫೆಯ ಮಾಲೀಕರ ಆರೋಪ ನಿರಾಕರಿಸಿ, ತಾನು ಯಾವುದೇ ಮರುಪಾವತಿ ಕೇಳಿರಲಿಲ್ಲ. ಜತೆಗೆ ಹುಳು ಸಿಕ್ಕಿರುವ ವಿಡಿಯೊ ವೈರಲ್ ಮಾಡಿರಲಿಲ್ಲ ಎಂದು ಹೇಳಿದ್ದರು.
ಇದನ್ನು ಪರಿಶೀಲಿಸಿದ ಪೊಲೀಸರಿಗೆ ನಿಖಿಲ್ ಆಗಲಿ, ಅವರ ಸ್ನೇಹಿತರಾಗಲಿ ಸುಲಿಗೆ ಮಾಡಲು ಪ್ರಯತ್ನಿಸಿದ ಬಗ್ಗೆ ಪುರಾವೆ ಸಿಕ್ಕಿರಲಿಲ್ಲ. ಆದರೆ, ಪೊಲೀಸ್ ಠಾಣೆಗೆ ಕರೆಸಿದ್ದರಿಂದ ಬೇಸರಗೊಂಡಿದ್ದ ನಿಖಿಲ್ ಅವರು ಕೆಫೆ ಮಾಲೀಕರ ವಿರುದ್ಧ ಪ್ರತಿದೂರು ದಾಖಲಿಸಿ, ‘ಗಂಭೀರ ಆಹಾರ ಸುರಕ್ಷತೆಯ ವೈಫಲ್ಯ’ ಎಂದು ಉಲ್ಲೇಖಿಸಿದ್ದರು.
ರಾಮೇಶ್ವರಂ ಕೆಫೆಯ ಮಾಲೀಕರು ತನ್ನ ವರ್ಚಸ್ಸಿಗೆ ಕಳಂಕ ತಂದಿದ್ದಲ್ಲದೇ ತನ್ನನ್ನು ಬೆದರಿಸುವ ಸಲುವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಅನ್ವಯ ಕೆಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ವ್ಯವಸ್ಥಾಪಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ದೂರು ಪೊಲೀಸರು ನ.29 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಫೆಯ ವಿರುದ್ಧ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.

