
ಸಾಂದರ್ಭಿಕ ಚಿತ್ರ
ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ದಾಳಿ; 35 ಮಹಿಳೆಯರು ಸೇರಿ 115 ಮಂದಿ ವಶ
ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಬಂಧಿಸಿ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಮಾಧ್ಯಮ ಮತ್ತು ಇತರರು ವಿಡಿಯೋ ಚಿತ್ರೀಕರಣ ಮಾಡಲುಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ತಂಪಾದ ವಾತಾವರಣ ಹಾಗೂ ಉದ್ಯಾನಗಳಿಗೆ ಮಾತ್ರವಲ್ಲದೇ ಪ್ರತಿಭೆಗಳಿಗೂ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಂದಷ್ಟೇ ಅಲ್ಲದೇ ವಿದೇಶಗಳಿಂದಲೂ ಉದ್ಯೋಗ ಅರಸಿ ನಗರಕ್ಕೆ ಲಕ್ಷಾಂತರ ಜನರು ವಲಸೆ ಬರುತ್ತಾರೆ. ಆದರೆ, ನಗರದ ಸುತ್ತಮುತ್ತ ಪಾರ್ಟಿಗಳ ಹೆಸರಿನಲ್ಲಿ ಬೆಂಗಳೂರಿನ ಘನತೆಗೆ ಮಸಿ ಬಳಿಯಲಾಗುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ರೇವ್ ಪಾರ್ಟಿ ಮೇಲೆ ಬೆಂಗಳೂರಿನ ದಕ್ಷಿಣ (ರಾಮನಗರ) ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ದೇವಿಗೆರೆ ಕ್ರಾಸ್ ಸಮೀಪದ ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿಯ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡವು 35 ಯುವತಿಯರು ಸೇರಿ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲರನ್ನೂ ಬಂಧಿಸಿ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಮಾಧ್ಯಮ ಮತ್ತು ಇತರರು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ಮಾಡುವುದನ್ನು ತಡೆದಿದ್ದಾರೆ.
ಪಾರ್ಟಿಯ ವೇಳೆ ಯಾರೆಲ್ಲಾ ಭಾಗವಹಿಸಿದ್ದರು, ಎಷ್ಟು ಜನರು ಮದ್ಯಪಾನ ಮಾಡಿದ್ದರು, ಇದರ ಜೊತೆಗೆ ಮಾದಕದ್ರವ್ಯ ಸೇವನೆ ಮಾಡಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
2019ರಲ್ಲಿ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರನ್ನು ವಶಕ್ಕೆ ಪಡೆದಿದ್ದರು. ಗ್ರಾಮದ ವೆಂಕಟೇಶ್ ಎಂಬುವರ ಜಮೀನಿನಲ್ಲಿ ಅಬ್ಬರದ ರೇವ್ ಪಾರ್ಟಿಯಲ್ಲಿ ಸುಮಾರು 500 ಜನರು ಪಾಲ್ಗೊಂಡಿದ್ದರು. ಕೇರಳ, ತಮಿಳುನಾಡು ಹಾಗೂ ಬೆಂಗಳೂರಿನ ಯುವಕ ಮತ್ತು ಯುವತಿಯರು ಸೇರಿ ಪಾರ್ಟಿ ಮಾಡುತ್ತಿದ್ದರು. ತಡರಾತ್ರಿ ಡಿಜೆ ಸೌಂಡ್ ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದೇವನಹಳ್ಳಿಯಲ್ಲೂ ನಡೆದಿತ್ತು ಪಾರ್ಟಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಮೇಲೂ ಇತ್ತೀಚೆಗೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಓರ್ವ ಚೀನೀ ಮಹಿಳೆ ಸೇರಿದಂತೆ 31 ಮಂದಿಯನ್ನು ಬಂಧಿಸಲಾಗಿತ್ತು. ಪಾರ್ಟಿಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು.
ಮೇ 2024 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆಯೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ತೆಲುಗು ಸಿನಿರಂಗದ ನಟರು ಹಾಗೂ ನಟಿಯರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು ಎಂದು ವರದಿಯಾಗಿತ್ತು. ರಕ್ತದ ಮಾದರಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅನೇಕರು ಮಾದಕ ವಸ್ತುಗಳನ್ನು ಸೇವಿಸಿರುವುದು ದೃಢಪಟ್ಟಿತ್ತು.

