
ಆರೋಪಿಯ ಕಾಲಿಗೆ ಗುಂಡೇಟು
ಕಲಬುರಗಿ SBI ಎಟಿಎಂ ದರೋಡೆ: ಆರೋಪಿಗಳ ಕಾಲಿಗೆ ಗುಂಡೇಟು
ದರೋಡೆ ಪ್ರಕರಣದ ಆರೋಪಿಗಳಾದ ಹರಿಯಾಣ ಮೂಲದ ತಸ್ಲಿಮ್ (28) ಮತ್ತು ಷರೀಫ್ (22) ಗುಂಡೇಟು ತಿಂದವರು. ಜಿಮ್ಸ್ ಆವರಣದ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ಬಿಐ ಎಟಿಎಂ ಧ್ವಂಸಗೊಳಿಸಿ ದರೋಡೆ ಮಾಡಿದ ಪ್ರಕರಣದ ಆರೋಪಿಗಳ ಕಾಲಿಗೆ ಕಲಬುರಗಿ ಸಬರ್ಬನ್ ಠಾಣೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಹರಿಯಾಣ ಮೂಲದ ದರೋಡೆ ಪ್ರಕರಣದ ಆರೋಪಿಗಳಾದ ತಸ್ಲಿಮ್ (28) ಮತ್ತು ಷರೀಫ್ (22) ಗಾಯಗೊಂಡವರು. ಜಿಮ್ಸ್ ಆವರಣದ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳು ಏಪ್ರಿಲ್ 9ರಂದು ಕಲಬುರಗಿಯ ರಿಂಗ್ ರಸ್ತೆಯ ಎಸ್ಬಿಐ ಎಟಿಎಂಗೆ ತೆರಳಿ ಧ್ವಂಸಗೊಳಿಸಿ 18 ಲಕ್ಷ ರೂ. ದರೋಡೆ ಮಾಡಿದ್ದರು. ಈ ಆರೋಪಿಗಳನ್ನು ಕಲಬುರಗಿಯ ಬೇಲೂರ ಕ್ರಾಸ್ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಕಾನ್‌ಸ್ಟೆಬಲ್‌ಗಳಾದ ಮಂಜು, ಫಿರೋಜ್ ಮತ್ತು ರಾಜಕುಮಾರ್ ಅವರ ಮೇಲೆ ದಾಳಿ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶರಣಾಗುವಂತೆ ಸೂಚಿಸಿದರೂ ಕೇಳದೆ ಆರೋಪಿಗಳು ದಾಳಿ ನಡೆಸಿದ್ದಾರೆ. ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಸಬರ್ಬನ್ ಠಾಣೆಯ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್‌ಐ ಬಸವರಾಜ ಅವರು ತಸ್ಲಿಮ್ ಮತ್ತು ಷರೀಫ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡ ಕಾನ್‌ಸ್ಟೆಬಲ್‌ಗಳು ಹಾಗೂ ಗುಂಡೇಟು ತಿಂದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.