ಶೇ.20ರಷ್ಟು ಬಿಪಿಎಲ್  ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ; ಮುನಿಯಪ್ಪ
x
ಕೆ.ಎಚ್‌ ಮುನಿಯಪ್ಪ

ಶೇ.20ರಷ್ಟು ಬಿಪಿಎಲ್ ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ; ಮುನಿಯಪ್ಪ

ಸರ್ಕಾರಿ ನೌಕರರು ಅಥವಾ ತೆರಿಗೆದಾರರಾಗಿರುವ ವ್ಯಕ್ತಿಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅವರು ನಿಯಮಾವಳಿಗಳ ಪ್ರಕಾರ ಬಿಪಿಎಲ್‌ ಕಾರ್ಡ್‌ಗಳಿಗೆ ಅನರ್ಹರಾಗಿರುತ್ತಾರೆ. ಅದಕ್ಕಾಗಿ ಈ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಮುನಿಯಪ್ಪ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಶೇ.20ರಷ್ಟು ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹ ಫಲಾನುಭವಿಗಳು ಹೊಂದಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸರ್ಕಾರ ಅರ್ಹ ಫಲಾನುಭವಿಗಳ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಸೋಮವಾರ ಬೆಳಗಾವಿ ಪರಿಷತ್ತಿನಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸರಳೀಕರಿಸುವ ಗುರಿ ಹೊಂದಿದೆ.ಆರ್ಥಿಕ ಸ್ಥಿತಿವಂತರು ಹೊಂದಿರುವ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಅರ್ಹರಿಗೆ ತೊಂದರೆಯಾಗದಂತೆ ಮೂರು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

“ಸರ್ಕಾರಿ ನೌಕರರು ಅಥವಾ ತೆರಿಗೆದಾರರಾಗಿರುವ ವ್ಯಕ್ತಿಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅವರು ನಿಯಮಾವಳಿಗಳ ಪ್ರಕಾರ ಬಿಪಿಎಲ್‌ ಕಾರ್ಡ್‌ಗಳಿಗೆ ಅನರ್ಹರಾಗಿರುತ್ತಾರೆ. ಅದಕ್ಕಾಗಿ ಈ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಇದನ್ನು ಸಂಪೂರ್ಣವಾಗಿ ಸುವ್ಯವಸ್ಥಿತಗೊಳಿಸಲು ಸರ್ಕಾರಕ್ಕೆ ಸರಿಸುಮಾರು ಮೂರು ತಿಂಗಳ ಅಗತ್ಯವಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳ ಸಹಕಾರವನ್ನು ಈ ಸಂದರ್ಭದಲ್ಲಿ ಅವರು ಕೋರಿದರು.

ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳು ಅಂತ್ಯೋದಯ ಹಾಗೂ ಆದ್ಯತಾ ವಲಯದ ಪಡಿತರ ಕಾರ್ಡ್‌ಗಳನ್ನು ಹೊಂದಿದ್ದಾರೆ. ಮೇ 23ರವರೆಗೆ 3.35 ಲಕ್ಷ ಅನರ್ಹ ಪಡಿತರ ಕಾರ್ಡ್‌ಗಳನ್ನು ಪತ್ತೆ ಹಚ್ಚಿ 13.51 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಶೇ 20ರಷ್ಟು ಅನರ್ಹ ಬಿಪಿಎಲ್ ಕಾರ್ಡ್ ಇರುವ ಮಾಹಿತಿ ಇದೆ. ಇಂತಹ ಎಲ್ಲ ಕಾರ್ಡ್‌ಗಳನ್ನೂ ಎಪಿಎಲ್‌ ಗೆ ಪರಿವರ್ತಿಸುತ್ತೇವೆ' ಎಂದರು.

ಬಿಪಿಎಲ್ ಕಾರ್ಡ್ ನೀಡಲು ಹೊಸದಾಗಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದವು. 1.69 ಲಕ್ಷ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 59,528 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 1.20 ಲಕ್ಷ ರೂ ಹೆಚ್ಚು ಆದಾಯ ಹಾಗೂ ನಿಯಮದಂತೆ ಇತರೆ ಸೌಲಭ್ಯ ಹೊಂದಿರುವ ಎಲ್ಲರ ಬಿಪಿಎಲ್ ರದ್ದು ಮಾಡಿ, ಎಪಿಎಲ್ ಕಾರ್ಡ್ ನೀಡಲಾಗುವುದು ಎಂದು ಹೇಳಿದರು. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಬಿಪಿಎಲ್ ಕುಟುಂಬಗಳ ಸಂಖ್ಯೆ ಅಲ್ಲಿನ ಜನಸಂಖ್ಯೆಯ ಶೇ 50 ಮೀರಿಲ್ಲ. ರಾಜ್ಯದಲ್ಲಿ ಮಾತ್ರ ಈ ಪ್ರಮಾಣ ಶೇ 65ರಿಂದ 70ರಷ್ಟು ಇದೆ. ಗ್ರಾಮ ಹಾಗೂ ಗ್ರಾಮವಾರು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಎಪಿಎಲ್ ಕಾರ್ಡುದಾರರಿಗೆ ಸಬ್ಸಿಡಿ ಪಡಿತರ ವಿತರಣೆ ಸ್ಥಗಿತಗೊಳಿಸಿರುವ ಕುರಿತು ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, 25 ಲಕ್ಷಕ್ಕೂ ಅಧಿಕ ಎಪಿಎಲ್ ಕಾರ್ಡುದಾರರ ಪೈಕಿ ಕೇವಲ 1 ಲಕ್ಷ ಮಂದಿ ಮಾತ್ರ ಸಬ್ಸಿಡಿ ದರದಲ್ಲಿ ಪಡಿತರ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಇದುವರೆಗೆ 3.5 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರನ್ನು ತೆಗೆದು ಎಪಿಎಲ್ ವರ್ಗಕ್ಕೆ ಮರು ವರ್ಗೀಕರಿಸಿದೆ ಎಂದು ಮುನಿಯಪ್ಪ ಬಹಿರಂಗಪಡಿಸಿದರು.

ನಿಜವಾದ ಫಲಾನುಭವಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

ಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನುಬದ್ಧ ಬಿಪಿಎಲ್ ಕುಟುಂಬಗಳಿಗೆ ತೊಂದರೆಯಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು. ಪ್ರಸ್ತುತ 25 ಲಕ್ಷ ಎಪಿಎಲ್ ಕಾರ್ಡುದಾರರಲ್ಲಿ ಕೇವಲ ಒಂದು ಲಕ್ಷ ಮಂದಿ ಮಾತ್ರ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದರೂ ಸರಕಾರ ಎಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ನಾವು ಪಕ್ಷ ರಾಜಕೀಯ ಬಿಟ್ಟು ವಿತರಣಾ ವ್ಯವಸ್ಥೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಉಭಯಪಕ್ಷಗಳ ಪ್ರಯತ್ನಕ್ಕೆ ಬದ್ಧರಾಗಬೇಕು ಎಂದು ಅವರು ತಿಳಸಿದರು.

Read More
Next Story