
Lokayuktha Act | ಆಸ್ತಿ ವಿವರ ಘೋಷಣೆ: ಶಾಸಕರ ನಿರ್ಲಕ್ಷ್ಯಕ್ಕೆ ಕಾರಣವೇನು?
ಪ್ರತಿ ವರ್ಷ ಜೂನ್ 30ರ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಶಾಸಕರಿಗೆ ಸರ್ಕಾರ, ಲೋಕಾಯುಕ್ತ ಹಾಗೂ ರಾಜ್ಯಪಾಲರು ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರ ಆಸ್ತಿ ವಿವರ ಘೋಷಣೆ ಕಡ್ಡಾಯಗೊಳಿಸಿರುವ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಆ ಶಾಸನವನ್ನು ರೂಪಿಸಿದ ಶಾಸಕರೇ ಕಿಮ್ಮತ್ತು ನೀಡುತ್ತಿಲ್ಲ.
ಪ್ರತಿ ವರ್ಷ ಜೂನ್ 30 ರೊಳಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರ ಘೋಷಿಸಬೇಕೆಂದು ಲೋಕಾಯುಕ್ತ ಕಾಯ್ದೆ ಹೇಳುತ್ತದೆ. ಆದರೆ, ಪ್ರತಿ ವರ್ಷವೂ ಶೇ.70 ರಷ್ಟು ಶಾಸಕರು ಆಸ್ತಿ ವಿವರ ಘೋಷಿಸದೇ ಲೋಪ ಎಸಗುತ್ತಿದ್ದು, ಕಾಯ್ದೆಯ ಮಿತಿಯೇ ಶಾಸಕರ ಅಸಡ್ಡೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ, ಆಸ್ತಿ ವಿವರ ಘೋಷಿಸದವರ ವಿರುದ್ಧ ಕಾಯ್ದೆಯಡಿ ಶಿಕ್ಷೆಗೆ ಅವಕಾಶ ಇಲ್ಲದಿರುವುದರಿಂದ ಶಾಸಕರ ಆಸ್ತಿ ವಿವರ ಸಲ್ಲಿಸುವುದನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪ್ರತಿ ವರ್ಷ ಜೂನ್ 30 ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಶಾಸಕರಿಗೆ ಸರ್ಕಾರ, ಲೋಕಾಯುಕ್ತ ಹಾಗೂ ರಾಜ್ಯಪಾಲರು ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸೇವೆಯಲ್ಲಿರುವ ಜನಪ್ರತಿನಿಧಿಗಳು ಪಾರದರ್ಶಕತೆ ಮೆರೆಯಲು ತಮ್ಮ ಆಸ್ತಿ ವಿವರವನ್ನು ಕಡ್ಡಾಯವಾಗಿ ಘೋಷಿಸಿಕೊಳ್ಳಬೇಕು. ಆಸ್ತಿ ವಿವರ ನೀಡದ ಜನಪ್ರತಿನಿಧಿಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಕಾನೂನು ತಜ್ಞರು, ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಲೋಕಾಯುಕ್ತ ಕಾಯ್ದೆ ಹೇಳುವುದೇನು?
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 22(1), ಕಲಂ 7ರ ಉಪಕಲಂ (1)ರಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ಸೇವಕರು ಜೂನ್ 30 ರ ಒಳಗಾಗಿ ಪ್ರತಿ ವರ್ಷವೂ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದೆ.
ನಿರ್ದಿಷ್ಟ ಸಮಯದಲ್ಲಿ ಆಸ್ತಿ ವಿವರ ಸಲ್ಲಿಸದ ಸಾರ್ವಜನಿಕ ಸೇವಕರ ಬಗ್ಗೆ ಲೋಕಾಯುಕ್ತರು ಸಕ್ಷಮ ಪ್ರಾಧಿಕಾರಕ್ಕೆ(ರಾಜ್ಯಪಾಲರು) ವರದಿ ಸಲ್ಲಿಸಬೇಕು. ವರದಿಯ ಪ್ರತಿಯನ್ನು ಸಂಬಂಧಪಟ್ಟ ಸಾರ್ವಜನಿಕ ಸೇವಕರಿಗೂ ಕಳುಹಿಸಬೇಕು. ಈ ವರದಿ ನೀಡಿದ ಎರಡು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸದೇ ಹೋದಲ್ಲಿ ರಾಜ್ಯದಲ್ಲಿ ಹೆಚ್ಚು ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರು ಪ್ರಕಟಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಐಪಿಸಿ(ಬಿಎನ್ಎಸ್) ಸೆಕ್ಷನ್ ಬಳಕೆಗೆ ಅವಕಾಶ
ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಕಾಯ್ದೆಯಡಿ ಶಿಕ್ಷಿಸಲು ಯಾವುದೇ ಅವಕಾಶ ಇಲ್ಲದಿದ್ದರೂ ಐಪಿಸಿ ಅಥವಾ ಬಿಎನ್ಎಸ್ ಕಾಯ್ದೆಯಲ್ಲಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಈ ಹಿಂದಿನ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಆಸ್ತಿ ವಿವರ ಸಲ್ಲಿಸದ ಶಾಸಕರು, ಪರಿಷತ್ ಸದಸ್ಯರ ವಿರುದ್ಧ ಐಪಿಸಿಯ ಶಿಕ್ಷಾರ್ಹ ಸೆಕ್ಷನ್ ಅಡಿ ಅಧಿಕಾರ ಪ್ರಯೋಗಿಸಿದ್ದರು. ಇದರಿಂದ ಭಯಭೀತರಾದ ಶಾಸಕರು ಕಾಲಮಿತಿಯಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದರು. ಆದರೆ ಸಂತೋಷ್ ಹೆಗಡೆ ಅವರ ನಂತರ ಲೋಕಾಯುಕ್ತ ಸಂಸ್ಥೆಯ ಚುಕ್ಕಾಣಿ ಹಿಡಿದವರು ಯಾರೂ ಕೂಡ ಶಿಕ್ಷಾರ್ಹ ಸೆಕ್ಷನ್ ಬಳಕೆಗೆ ಮುಂದಾಗದೇ ಇರುವ ಕಾರಣ ಮತ್ತದೇ ನಿರ್ಲಕ್ಷ್ಯ ಮುಂದುವರಿದಿದೆ.
"ಲೋಕಾಯುಕ್ತ ಕಾಯ್ದೆಯಲ್ಲಿ ಸಾರ್ವಜನಿಕ ಸೇವಕರು ಆಸ್ತಿ ವಿವರ ನೀಡಬೇಕೆಂಬ ನಿಯಮವಿದೆ. ಅದರಂತೆ ಪ್ರತಿಯೊಬ್ಬರು ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕು. ಒಂದು ವೇಳೆ ಸಲ್ಲಿಸದಿದ್ದರೆ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪರ್ಯಾಯ ದಾರಿಗಳನ್ನು ಹುಡುಕಬೇಕು. ಈ ಹಿಂದೆ ನನ್ನ ಅವಧಿಯಲ್ಲಿ ಆಸ್ತಿ ವಿವರ ನೀಡದ ಶಾಸಕರಿಗೆ ಐಪಿಸಿ ಸೆಕ್ಷನ್ ಅಡಿಯಲ್ಲಿ ನೋಟಿಸ್ ನೀಡಿದ್ದೆ. ಆಗ ಎಲ್ಲರೂ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದರು. ಈಗಲೂ ಅದನ್ನು ಬಳಸಿದರೆ ಲೋಕಾಯುಕ್ತಕ್ಕೆ ಬಲ ತುಂಬಿದಂತಾಗುತ್ತದೆ" ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಿಎನ್ಎಸ್ ಕಾಯ್ದೆಯ ಸೆಕ್ಷನ್‌ಗಳಲ್ಲಿ ಏನಿದೆ?
ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ ಸೆಕ್ಷನ್ 211ರಡಿ(ಐಪಿಸಿ ಸೆಕ್ಷನ್ 176) ಸಾರ್ವಜನಿಕ ಸೇವಕರಿಗೆ ಅಗತ್ಯ ಸೂಚನೆ ಅಥವಾ ಮಾಹಿತಿ ಒದಗಿಸಲು ವಿಫಲವಾದರೆ ಶಿಕ್ಷಾರ್ಹ ಅಪರಾಧವಾಗಲಿದೆ.
ಆಸ್ತಿ ವಿವರ ಸೇರಿದಂತೆ ಯಾವುದೇ ಮಾಹಿತಿ ಒದಗಿಸದೇ ಇದ್ದರೆ ಒಂದು ತಿಂಗಳು ಜೈಲು, 5 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಅದೇ ರೀತಿ ಬಿಎನ್ಎಸ್ ಸೆಕ್ಷನ್ 212ರಡಿ (ಐಪಿಸಿ ಸೆಕ್ಷನ್ 177) ಸುಳ್ಳು ಮಾಹಿತಿ ನೀಡಿದರೆ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ, ಹತ್ತು ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಪ್ರತಿ ವರ್ಷ ಅದೇ ರಾಗ, ಅದೇ ಹಾಡು
2020-21ನೇ ಸಾಲಿನಲ್ಲಿ 81 ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ನೀಡಿರಲಿಲ್ಲ. 2021-22 ರಲ್ಲಿ 163 ಮಂದಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿರಲಿಲ್ಲ. 2022-23ರಲ್ಲಿ 51 ಮಂದಿ ಶಾಸಕರು ಹಾಗೂ 21 ಮಂದಿ ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿರಲಿಲ್ಲ. 2023-24 ರಲ್ಲಿ 180ಮಂದಿ ಆಸ್ತಿ ವಿವರ ಸಲ್ಲಿಸದೇ ಲೋಕಾಯುಕ್ತ ಕಾಯ್ದೆಯ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.
ಗಡುವು ಕೊಟ್ಟ ಲೋಕಾಯುಕ್ತರು
ಪ್ರಸಕ್ತ ವರ್ಷ ಜೂನ್ 30ರೊಳಗೆ ಆಸ್ತಿ ವಿವರ ಘೋಷಿಸಿಕೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಲೋಕಾಯುಕ್ತ ನಿಬಂಧಕರಾದ ಚಂದ್ರಶೇಖರ ರೆಡ್ಡಿ ಮಾ.21 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಸೂಕ್ತ ಮಾಹಿತಿ ಒದಗಿಸಲು ತಾಕೀತು ಮಾಡುವಂತೆ ಕೋರಿದ್ದಾರೆ. ಪತ್ರದನ್ವಯ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಎಲ್ಲ ಶಾಸಕರಿಗೆ ಪತ್ರ ಬರೆದು ಕಾಲಮಿತಿಯಲ್ಲಿ ಆಸ್ತಿ ವಿವರ ನೀಡುವಂತೆ ಸೂಚಿಸಿದ್ದಾರೆ.
"ಕಾನೂನು ರೂಪಿಸುವ ಜನಪ್ರತಿನಿಧಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುವಂತೆ ಗೋಗೆರೆಯುವ ಪರಿಸ್ಥಿತಿ ಬರಬಾರದು. ಹಾಗಾಗಿ ಲೋಕಾಯುಕ್ತ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ಆಸ್ತಿ ವಿವರ ಸಲ್ಲಿಸದ ಸಾರ್ವಜನಿಕ ಸೇವಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಹೈಕೋರ್ಟ್ ವಕೀಲ ಉಮಾಪತಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.