
ವಿಧಾನಸಭೆ ಅಧಿವೇಶನ
ವಿಧಾನಸಭೆ ಅಧಿವೇಶನ : 71 ಗಂಟೆಗಳ ಕಲಾಪ, 37 ವಿಧೇಯಕಗಳಿಗೆ ಅಂಗೀಕಾರ
6ನೇ ಅಧಿವೇಶನದ ಅವಧಿಯಲ್ಲಿ 18 ಬಿಜೆಪಿ ಸದಸ್ಯರನ್ನು 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಿದ್ದ ನಿರ್ಣಯವನ್ನು ಮೇ.25 ರಿಂದ ಜಾರಿಗೆ ಬರುವಂತೆ ಹಿಂಪಡೆದಿರುವ ಕುರಿತಾದ ಸ್ಥಿರೀಕರಣ ಪ್ರಸ್ತಾವಕ್ಕೆ ಸದನವು ಅನುಮೋದನೆ ನೀಡಿದೆ.
ರಾಜ್ಯದ 16ನೇ ವಿಧಾನಸಭೆಯ 7ನೇ ಅಧಿವೇಶನವು ಆಗಸ್ಟ್ 11 ರಿಂದ ಆಗಸ್ಟ್ 22 ರವರೆಗೆ ಒಟ್ಟು ಒಂಬತ್ತು ದಿನಗಳ ಕಾಲ ನಡೆದು, ಸುಮಾರು 71 ಗಂಟೆ 2 ನಿಮಿಷಗಳ ಕಾಲ ಸುದೀರ್ಘ ಕಲಾಪ ನಡೆಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ವಿಧಾನಸಭೆ ಸಭಾಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅಧಿವೇಶನದಲ್ಲಿ ಅಗಲಿದ ಹಲವು ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಗಿತ್ತು. 2025-26ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ಸದನದಲ್ಲಿ ಮಂಡಿಸಿ, ಅಂಗೀಕಾರ ಪಡೆಯಲಾಯಿತು.
ಬಿಜೆಪಿ ಶಾಸಕರ ಅಮಾನತು ರದ್ದು
ಕಳೆದ 6ನೇ ಅಧಿವೇಶನದ ಅವಧಿಯಲ್ಲಿ, ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ 18 ಬಿಜೆಪಿ ಸದಸ್ಯರನ್ನು 6 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು. ಈ ಅಮಾನತು ನಿರ್ಣಯವನ್ನು ಮೇ 25 ರಿಂದಲೇ ಜಾರಿಗೆ ಬರುವಂತೆ ಹಿಂಪಡೆಯುವ ಪ್ರಸ್ತಾವಕ್ಕೆ ಈ ಅಧಿವೇಶನದಲ್ಲಿ ಸದನವು ಅನುಮೋದನೆ ನೀಡಿದ್ದು, ಪ್ರಮುಖ ರಾಜಕೀಯ ಬೆಳವಣಿಗೆಯಾಗಿದೆ.
37 ವಿಧೇಯಕಗಳಿಗೆ ಅಂಗೀಕಾರ
ಶಾಸನ ರಚನೆಯ ದೃಷ್ಟಿಯಿಂದ ಈ ಅಧಿವೇಶನವು ಅತ್ಯಂತ ಫಲಪ್ರದವಾಗಿದ್ದು, ಧನವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 39 ವಿಧೇಯಕಗಳನ್ನು ಮಂಡಿಸಲಾಗಿತ್ತು. ಈ ಪೈಕಿ 37 ಮಹತ್ವದ ವಿಧೇಯಕಗಳನ್ನು ಸದನದಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕರಿಸಲಾಗಿದೆ.
ಇನ್ನುಳಿದಂತೆ, 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಮತ್ತು 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಾನಸಭೆಯ ಪರಿಶೀಲನಾ ಸಮಿತಿಗೆ ಒಪ್ಪಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡು, ವಿಧಾನಪರಿಷತ್ತಿನಲ್ಲಿ ತಿರಸ್ಕೃತವಾಗಿದ್ದ 2025ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಈ ಅಧಿವೇಶನದಲ್ಲಿ ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಯಿತು. ಇದರೊಂದಿಗೆ, 2024ನೇ ಸಾಲಿನ ಮೂರು ಸಹಕಾರಿ ಮತ್ತು ನೋಂದಣಿ ತಿದ್ದುಪಡಿ ವಿಧೇಯಕಗಳನ್ನು ಸರ್ಕಾರ ಹಿಂಪಡೆದಿದೆ.
ದಾಖಲೆ ಪ್ರಮಾಣದ ಪ್ರಶ್ನೋತ್ತರ ಮತ್ತು ಚರ್ಚೆಗಳು
ಈ ಅಧಿವೇಶನದಲ್ಲಿ ಒಟ್ಟು 2,306 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, 2,199 ಪ್ರಶ್ನೆಗಳು ಅಂಗೀಕೃತಗೊಂಡಿದ್ದವು. ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 128 ಪ್ರಶ್ನೆಗಳಿಗೆ ಮತ್ತು ಲಿಖಿತ ಮೂಲಕ ಉತ್ತರಿಸಬೇಕಿದ್ದ 2,064 ಪ್ರಶ್ನೆಗಳ ಪೈಕಿ 1,662 ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರಗಳನ್ನು ಸ್ವೀಕರಿಸಲಾಗಿದೆ.
ನಿಯಮ 69ರ ಅಡಿಯಲ್ಲಿ ಏಳು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಯಮ 351ರ ಅಡಿಯಲ್ಲಿ 180 ಸೂಚನೆಗಳ ಪೈಕಿ 90ಕ್ಕೆ ಉತ್ತರ ಸ್ವೀಕರಿಸಲಾಗಿದೆ. ಗಮನ ಸೆಳೆಯುವ 383 ಸೂಚನೆಗಳ ಪೈಕಿ 178ಕ್ಕೆ ಉತ್ತರ ದೊರೆತಿದ್ದು, 166 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಶೂನ್ಯ ವೇಳೆಯಲ್ಲಿ 13 ಸೂಚನೆಗಳು ಚರ್ಚೆಗೆ ಬಂದಿದ್ದು, ಒಂದು ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿ, ಹಕ್ಕುಬಾಧ್ಯತೆಗಳ ಸಮಿತಿಯ ಪರಿಶೀಲನೆಗೆ ವಹಿಸಲಾಗಿದೆ.
ಮಂಡನೆಯಾದ ವರದಿಗಳು
ಸದನದಲ್ಲಿ 21 ಅಧಿಸೂಚನೆಗಳು, 4 ಅಧ್ಯಾದೇಶಗಳು, 142 ವಾರ್ಷಿಕ ವರದಿಗಳು, 169 ಲೆಕ್ಕ ಪರಿಶೋಧನಾ ವರದಿಗಳು ಸೇರಿದಂತೆ ನೂರಾರು ಕಾಗದ ಪತ್ರಗಳನ್ನು ಮಂಡಿಸಲಾಗಿದೆ.
ಕೊನೆಯದಾಗಿ, ಶಾಂತಿ ಮತ್ತು ಯುದ್ಧ ನಿಲುಗಡೆ ಘೋಷಣೆಯ ತತ್ವಗಳಿಗೆ ಸಂಪೂರ್ಣ ಬೆಂಬಲ ಘೋಷಿಸುವ ಹಾಗೂ ಮಾನವ ಅಂಗಾಂಗ ಕಸಿ (ತಿದ್ದುಪಡಿ) ಕೇಂದ್ರ ಸರ್ಕಾರದ ಅಧಿನಿಯಮವನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ನಿರ್ಣಯಗಳನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು.