ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ | ನ್ಯಾಯ ಸಿಗೋವರೆಗೂ ಚಿತಾಭಸ್ಮ ವಿಸರ್ಜಿಸಲ್ಲ; ಅತುಲ್ ತಂದೆ ಶಪಥ
ಅತುಲ್ ಸುಭಾಷ್ ಆತ್ಮಹತ್ಯೆಗೆ ಕಾರಣರಾದವರಿಗೆ ಶಿಕ್ಷೆ ಆಗುವವರೆಗೂ ಮಗನ ಚಿತಾಭಸ್ಮವನ್ನು ನೀರಿಗೆ ವಿಸರ್ಜಿಸುವುದಿಲ್ಲ ಎಂದು ಅತುಲ್ ತಂದೆ ಪವನ್‌ಕುಮಾರ್ ಹೇಳಿದ್ದಾರೆ.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕರ್ನಾಟಕ ಪೊಲೀಸರಿಗೆ ಅತುಲ್ ತಂದೆ ಮತ್ತು ಸೋದರ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ತಮ್ಮ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗುವವರೆಗೆ ಚಿತಾಭಸ್ಮ ವಿಸರ್ಜನೆ ಮಾಡುವುದಿಲ್ಲ ಎಂಬ ಶಪಥವನ್ನೂ ಅವರು ಕೈಗೊಂಡಿದ್ದಾರೆ.
ಹರಿಯಾಣ ಹಾಗೂ ಉತ್ತರಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಕಾರ್ಯಾಚರಣೆ ನಡೆಸಿ, ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಹಾಗೂ ಭಾಮೈದ ಅನುರಾಗ್ ಸಿಂಘಾನಿಯಾರನ್ನು ಖೆಡ್ಡಕ್ಕೆ ಬೀಳಿಸಿದ್ದರು. ಸದ್ಯ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಧ್ಯೆ, ಪುರುಷರ ಮೇಲಿನ ದೌರ್ಜನ್ಯ, ಹಕ್ಕುಗಳ ಹರಣ ಹಾಗೂ ಮಹಿಳಾ ಪರ ಕಾನೂನುಗಳ ಪರಿಷ್ಕರಣೆ ಕುರಿತಂತೆ ಚರ್ಚೆಗಳು ಆರಂಭವಾಗಿವೆ. ಗೃಹ ಸಚಿವ ಡಾ.ಪರಮೇಶ್ವರ್ ಕೂಡ ರಾಜ್ಯದಲ್ಲಿ ಮಹಿಳಾ ಪರ ಕಾನೂನುಗಳ ಮಾರ್ಪಾಡು ಮಾಡುವ ಸುಳಿವು ನೀಡಿದ್ದಾರೆ.
ನ್ಯಾಯ ಸಿಗೋವರೆಗೆ ಚಿತಾಭಸ್ಮ ವಿಸರ್ಜಿಸಲ್ಲ
ಅತುಲ್ ಸುಭಾಷ್ ಆತ್ಮಹತ್ಯೆಗೆ ಕಾರಣರಾದವರಿಗೆ ಶಿಕ್ಷೆ ಆಗುವವರೆಗೂ ಮಗನ ಚಿತಾಭಸ್ಮವನ್ನು ನೀರಿಗೆ ವಿಸರ್ಜಿಸುವುದಿಲ್ಲ ಎಂದು ಅತುಲ್ ತಂದೆ ಪವನ್‌ಕುಮಾರ್ ಹೇಳಿದ್ದಾರೆ.
ಬಿಹಾರದ ಸಮಷ್ಟೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಭಾಷ್ ಡಿ.9 ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಹಾಗೂ ವಿಡಿಯೋ ಮಾಡಿಟ್ಟಿದ್ದಾರೆ. ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬ ಸದಸ್ಯರ ವಿರುದ್ಧ ಕಿರುಕುಳದ ಆರೋಪಿಸಿ ಸಾವಿಗೆ ಶರಣಾಗಿದ್ದಾರೆ. ಈಗ ಆರೋಪಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇವೆ. ಆದರೆ, ನನ್ನ ಮಗನಿಗೆ ಕಿರುಕುಳ ನೀಡಿದವರಿಗೆ ಶಿಕ್ಷೆ ಆಗಲೇಬೇಕು. ನ್ಯಾಯ ಸಿಗುವವರೆಗೂ ಚಿತಾಭಸ್ಮವನ್ನು ವಿಸರ್ಜಿಸುವುದಿಲ್ಲ ಎಂದು ಹೇಳಿದ್ದಾರೆ.
ʼʼನನ್ನ ಮಗನನ್ನು ಹಣಕ್ಕಾಗಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದ ಸದಸ್ಯರು ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ. ನಮಗೆ ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಪಟ್ಟ ಎಲ್ಲರಿಗೂ ವಿನಂತಿಸುತ್ತೇನೆʼ ಎಂದಿದ್ದಾರೆ.
ಡಿ.14 ರಂದು ಬೆಳಿಗ್ಗೆ ಕರ್ನಾಟಕ ಪೊಲೀಸರ ಎರಡು ತಂಡಗಳು ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾರನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದರೆ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಬಂಧಿಸಿದ್ದರು.
ಮೊಮ್ಮಗನನ್ನು ಕೊಡಿಸಲು ಮನವಿ
ನನ್ನ ಮಗ, ಆತನ ಪತ್ನಿ ಹಾಗೂ ಅತ್ತೆಯ ಕುಟುಂಬ ಸದಸ್ಯರು ನೀಡಿದ ಚಿತ್ರಹಿಂಸೆಯಿಂದ ನರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರಹಿಂಸೆಯ ಬಗ್ಗೆ ಅತುಲ್ ಯಾರಿಗೂ ಹೇಳಿರಲಿಲ್ಲ. ಮಗನಂತೂ ಈಗ ನಮ್ಮಿಂದ ದೂರಾಗಿದ್ದಾನೆ. ಕನಿಷ್ಠ ಮೊಮ್ಮಗನನ್ನಾದರೂ ನಮ್ಮ ಕುಟುಂಬದ ಸುಪರ್ದಿಗೆ ನೀಡಬೇಕು ಎಂದು ಪವನ್ ಕುಮಾರ್ ಬೇಡಿಕೊಂಡಿದ್ದಾರೆ.
ನನ್ನ ಮೊಮ್ಮಗ ಬದುಕಿದ್ದಾನೋ, ಇಲ್ಲವೋ ಗೊತ್ತಿಲ್ಲ. ಅವನು ಈಗ ಹೇಗಿದ್ದಾನೆ ಎಂಬುದೇ ತಿಳಿದಿಲ್ಲ. ಮೊಮ್ಮಗ ಹುಟ್ಟಿ ನಾಲ್ಕೂವರೇ ವರ್ಷವಾಗಿದೆ. 2021 ರ ನಂತರ ಆತನ ಮುಖವನ್ನೇ ನೋಡಿಲ್ಲ. ಹೇಗಾದರೂ ಮಾಡಿ ನಮಗೆ ಮೊಮ್ಮಗನನ್ನು ಕೊಡಿಸಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಹಾರ ಸಿಎಂ ನಿತೀಶ್ ಕುಮಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಇತರ ನಾಯಕರಿಗೆ ಮನವಿ ಮಾಡಿದ್ದಾರೆ.
ಸುಳ್ಳು ಪ್ರಕರಣ ಹಿಂಪಡೆಯಲು ಮನವಿ
ಅತುಲ್ ಸಹೋದರ ಬಿಕಾಸ್ ಕುಮಾರ್ ಮಾತನಾಡಿ, ತಮ್ಮ ಕುಟುಂಬದ ವಿರುದ್ಧ ನಿಖಿತಾ ಸಿಂಘಾನಿಯ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಅತುಲ್ ಆತ್ಮಹತ್ಯೆಯ ಹಿಂದಿರುವ ಇತರರನ್ನೂ ಬಂಧಿಸಬೇಕು. ನಮ್ಮ ವಿರುದ್ಧದ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವವರೆಗೂ ಹಾಗೂ ನಮಗೆ ನ್ಯಾಯ ಸಿಗುವವರೆಗೂ ನನ್ನ ಸಹೋದರನ ಚಿತಾಭಸ್ಮವನ್ನು ನೀರಿನಲ್ಲಿ ವಿಸರ್ಜಿಸುವುದಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ನನ್ನ ಸಹೋದರನ ಮಗುವಿನ ಬಗ್ಗೆ ನನಗೆ ಅಷ್ಟೇ ಕಾಳಜಿ ಇದೆ. ಅವನ ಸುರಕ್ಷತೆಯು ನಮಗೆ ಗಂಭೀರ ಕಾಳಜಿಯ ವಿಷಯವಾಗಿದೆ. ಇತ್ತೀಚಿನ ಫೋಟೋಗಳಲ್ಲಿ ನಾವು ಅವನನ್ನು ನೋಡಿಲ್ಲ. ಮಾಧ್ಯಮಗಳ ಮೂಲಕ ಅವನು ಎಲ್ಲಿದ್ದಾರೆ ಎಂದು ತಿಳಿಯಬೇಕಿದೆ. ನಾವು ಅವನನ್ನು ಆದಷ್ಟು ಬೇಗ ಸುಪರ್ದಿಗೆ ಪಡೆಯಲು ಕಾಯುತ್ತಿದ್ದೇವೆ ಎಂದು ಬಿಕಾಸ್ ಕುಮಾರ್ ಹೇಳಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?
ಅತುಲ್ ಆತ್ಮಹತ್ಯೆ ಪ್ರಕರಣ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ, ಪೊಲೀಸರು ಅತುಲ್ ಪತ್ನಿ, ಅತ್ತೆ ಮತ್ತು ಭಾಮೈದನನ್ನು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಸುಶೀಲ್ ಸಿಂಘಾನಿಯಾ ಪತ್ತೆಗೆ ಶೋಧ ನಡೆಸಿದ್ದಾರೆ. ಇನ್ನಷ್ಟು ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.
‘ಸುಭಾಷ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮಹಿಳೆಯರ ರಕ್ಷಣೆಗೆ ಇರುವ ಕಾನೂನಿನ ದುರ್ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಪುರುಷರ ಮೇಲಿನ ದೌರ್ಜನ್ಯ, ಪುರುಷರ ಹಕ್ಕುಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ವಿಚಾರವೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ. ಇನ್ನು ಯಾವ ರೀತಿಯಲ್ಲಿ ಕಾನೂನು ಪರಿಷ್ಕರಿಸಬೇಕೆಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಅಗತ್ಯವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲೂ ಕೆಲವು ಬದಲಾವಣೆ ಆಗಬೇಕಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆತ್ಮಹತ್ಯೆ ತಡೆಗೆ ಸಹಾಯವಾಣಿ ಸಂಖ್ಯೆ
(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಗಳಿಗೆ ಕರೆ ಮಾಡಿ: ನೇಹಾ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ - 044-24640050; ಆತ್ಮಹತ್ಯೆ ತಡೆಗಟ್ಟುವಿಕೆ, ಮಾನಸಿಕ ಬೆಂಬಲ ಮತ್ತು ಆಘಾತದಿಂದ ಹೊರಬರಲು ಸಹಾಯಕ್ಕಾಗಿ ಆಸರಾ ಸಹಾಯವಾಣಿ - +91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ - 59000000 0019, ದಿಶಾ 0471- 2552056, ಮೈತ್ರಿ 0484 2540530, ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ 044-24640050.)