ASHA Workers Protest | ʼಆಶಾʼ ಕಾರ್ಯಕರ್ತೆಯರ ಧರಣಿ ನಾಲ್ಕನೇ ದಿನಕ್ಕೆ; ಅಧಿಕಾರಿಗಳ ಸಂಧಾನ ವಿಫಲ
x
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ASHA Worker's Protest | ʼಆಶಾʼ ಕಾರ್ಯಕರ್ತೆಯರ ಧರಣಿ ನಾಲ್ಕನೇ ದಿನಕ್ಕೆ; ಅಧಿಕಾರಿಗಳ ಸಂಧಾನ ವಿಫಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಬರುವವರೆಗೂ ಧರಣಿ ಕೈಬಿಡುವುದಿಲ್ಲ. ಇಲ್ಲಿಯೇ ಸಂಕ್ರಾಂತಿ ಹಬ್ಬ ಆಚರಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಗೌರವಧನ ಹೆಚ್ಚಳ ಸೇರಿದಂತೆ ತಮ್ಮ 11 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತರೊಂದಿಗೆ ಶುಕ್ರವಾರ ರಾಜ್ಯ ಸರ್ಕಾರದ ಪ್ರತಿನಿಧಿಗಳು ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಬರುವವರೆಗೂ ಧರಣಿ ಕೈಬಿಡುವುದಿಲ್ಲ. ಇಲ್ಲಿಯೇ ಸಂಕ್ರಾಂತಿ ಹಬ್ಬ ಆಚರಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗೌರವಧನವನ್ನು 15 ಸಾವಿರ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಕಳೆದ ಮಂಗಳವಾರದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದು, ಅವರ ಅಹೋರಾತ್ರಿ ಧರಣಿ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಶುಕ್ರವಾರ ಧರಣಿ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಆದರೆ ಬೇಡಿಕೆಗಳ ಈಡೇರಿಕೆ ಸಂಬಂಧ ಎರಡೂ ಕಡೆ ಸಹಮತ ಮೂಡಲಿಲ್ಲ. ಹಾಗಾಗಿ ಸರ್ಕಾರದ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು.

ಆಶಾ ಕಾರ್ಯಕರ್ತೆಯರ ಅಗತ್ಯವೇ ಇಲ್ಲ!

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಬುಧವಾರ ಮತ್ತು ಗುರುವಾರ ಸರ್ಕಾರದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ವ್ಯಕ್ತವಾದ ನಿಲುವಿಗಿಂತ ಭಿನ್ನವಾದ ನಿಲುವನ್ನು ಅಧಿಕಾರಿಗಳು ಪ್ರದರ್ಶಿಸಿದ್ದಾರೆ. ಇಲಾಖೆಗೆ ಆಶಾ ಕಾರ್ಯಕರ್ತೆಯರ ಅವಶ್ಯಕತೆಯೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಾತುಕತೆ ವಿಫಲವಾಯಿತು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂಧಾನ ಮಾತುಕತೆ ಬಂದಿದ್ದವರು ʼನಿಮ್ಮೊಂದಿಗೆ ಅಧಿಕಾರಿಗಳು ಸಭೆ ನಡೆಸಿದಾಗ ಯಾವ ಸಮಸ್ಯೆಯನ್ನೂ ಹೇಳಿಕೊಳ್ಳುವುದಿಲ್ಲ. ಈಗ ಸುಮ್ಮನೆ ಪ್ರತಿಭಟನೆ ಮಾಡುತ್ತೀದ್ದೀರಾ ಎಂದು ಹೇಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಶಾ ಕಾರ್ಯಕರ್ತೆಯರು, ನೀವು ಸಭೆಗಳಲ್ಲಿ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ. ಇನ್ನು ಸಮಸ್ಯೆ ಹೇಳಿಕೊಳ್ಳುವುದೆಲ್ಲಿ ಎಂದು ಪ್ರಶ್ನಿಸಿದರು. ಪ್ರತಿಭಟನಾ ಸ್ಥಳಕ್ಕೆ ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳೂ ಬರಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬರಲಿ. ಎಲ್ಲ ಸಮಸ್ಯೆಯನ್ನು ಅವರ ಎದುರೇ ತೆರೆದಿಡುತ್ತೇವೆ ಎಂದು ಹೇಳಿದ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದರು.

ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಒಬ್ಬರಿಂದಲೇ ಸಾಧ್ಯ. ಅವರು ಸ್ಥಳಕ್ಕೆ ಬರುವವರೆಗೂ ಧರಣಿ ಕೈಬಿಡದಿರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರು ಹೇಳಿದ್ದಾರೆ.

Read More
Next Story