Asha Workers Strike | ಆಶಾ ಕಾರ್ಯಕರ್ತೆಯರ ಮುಷ್ಕರ: ಕಾರಣವೇನು? ಬೇಡಿಕೆ ಯಾವುದು?
x
ಇಂದಿನಿಂದ ಆಶಾ ಕಾರ್ಯಕರ್ತರ ಪ್ರತಿಭಟನೆ

Asha Workers Strike | ಆಶಾ ಕಾರ್ಯಕರ್ತೆಯರ ಮುಷ್ಕರ: ಕಾರಣವೇನು? ಬೇಡಿಕೆ ಯಾವುದು?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತರು ಸೋಮವಾರ ರಾತ್ರಿಯೇ ಬೆಂಗಳೂರಿಗೆ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕೂರಲಿದ್ದಾರೆ


Click the Play button to hear this message in audio format

ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಮಂಗಳವಾರದಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿತ್ತು. ಪರಿಹಾರದ ಭರವಸೆ ಈಡೇರಿಲ್ಲ. ಈಗ ರಾಜ್ಯ ಸರ್ಕಾರದ ಕಡೆಯಿಂದ ನಮಗೆ ಯಾವ ಸ್ಪಂದನೆಯೂ ದೊರಕಿಲ್ಲ. ಆದ್ದರಿಂದ ಮುಷ್ಕರ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ. ಸೋಮಶೇಖ‌ರ್ ಯಾದಗಿರಿ ಹೇಳಿದ್ದು, ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಧರಣಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಆಶಾ ಕಾರ್ಯಕರ್ತ ಬೇಡಿಕೆಗಳೇನು?

* ನಗರ ಪ್ರದೇಶದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ವೆಚ್ಚಗಳಿಗೆ ಅನುಗುಣವಾಗಿ ಗೌರವಧನವನ್ನು ಮಾಸಿಕ ರೂ.20 ಸಾವಿರಕ್ಕೆ ಹೆಚ್ಚಿಸಬೇಕು.

* 8 ವರ್ಷಗಳಿಂದ ಆಶಾನಿಧಿ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳು ದಾಖಲಾಗದೇ, ಪ್ರೋತ್ಸಾಹಧನವೂ ಬಂದಿಲ್ಲ. ರಾಜ್ಯದಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು.

* ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್‌ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು.

* ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ರೂ.5 ಲಕ್ಷ ನೀಡಬೇಕು.

* ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಆರೋಗ್ಯ ಇಲಾಖೆ ಹೇಳುವುದೇನು?

* ರಾಜ್ಯ ಸರ್ಕಾರದ ವತಿಯಿಂದ ಮಾಸಿಕ ಗೌರವಧನ ರೂ.5000/- ಗಳನ್ನು ನೀಡಲಾಗುತ್ತಿದೆ.

* ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ ಮಾಸಿಕ ಪ್ರೋತ್ಸಾಹಧನ ರೂ.2000/-ಗಳನ್ನು ನೀಡಲಾಗುತ್ತಿದೆ.

* ಆಯುಷ್ಮಾನ್ ಆರೋಗ್ಯ ಮಂದಿರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತೆಯರಿಗೆ ಮಾಸಿಕ ರೂ.1000/-ಗಳ ಟೀಮ್ ಬೇಸ್ಟ್ ಇನ್ಸೆಂಟಿವ್ ಕೊಡಲಾಗುತ್ತಿದೆ.

* 34 ಆರೋಗ್ಯ ಚಟುವಟಿಕೆಗಳ ಕಾರ್ಯಕ್ರಮ ಅನುಷ್ಠಾನದ ಆಧಾರದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ (PMSBY) ಯಡಿಯಲ್ಲಿ ತಲಾ ಎರಡು ಲಕ್ಷಗಳ ರೂ. ವಿಮಾ ಸೌಲಭ್ಯ ಮುಖಾಂತರ ಸಾಮಾಜಿಕ ಸುರಕ್ಷೆ ಒದಗಿಸಲಾಗಿದೆ.

* ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆಯ ವೈದ್ಯಕೀಯ ವಿಮಾ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.

* ಆಶಾ ಕಾರ್ಯಕರ್ತೆಯರು ಇಲಾಖೆಯ ಇತರ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರೊಂದಿಗೆ ಆರೋಗ್ಯ ಸೇವೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಾಗಿ ಸಿಯುಜಿ ಸಿಮ್‌ಗಳ ಸೌಲಭ್ಯವನ್ನು ಕಲ್ಪಿಸುವ ಅವಕಾಶ ಇದೆ.

* ಆಶಾ ಕಾರ್ಯಕರ್ತೆಯರು ಆರೋಗ್ಯ ಚಟುವಟಿಕೆಗಳನ್ನು ಸ್ಮಾರ್ಟ್‌ ಫೋನ್ ಬಳಸಿ ದಾಖಲಿಸಲು ಮಾಸಿಕ ರೂ.280/- ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ವಾರ್ಷಿಕ ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.

* ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ತ್ರೈಮಾಸಿಕ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ.

* ರಾಜ್ಯ ಮಟ್ಟದಲ್ಲಿ ಆಶಾ ಸಂಘಟನೆಯ ಮುಖಂಡರ ಜೊತೆ ನಿರಂತರವಾಗಿ ಸಭೆಗಳನ್ನು ಸಹ ಸಂಧರ್ಭಕ್ಕೆ ಅನುಸಾರವಾಗಿ ನಡೆಸಿ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Read More
Next Story