Arvind Bellada writes to CM, proposes setting up aerospace park in North Karnataka
x

ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಅರವಿಂದ ಬೆಲ್ಲದ 

Aerospace Project : ಭೂಸ್ವಾಧೀನ ರದ್ದು ಹೊಗಳಿದ ಬೆಲ್ಲದ; ಉ.ಕರ್ನಾಟಕದಲ್ಲಿ ಏರೋಸ್ಪೇಸ್‌ ಪಾರ್ಕ್‌ ಸ್ಥಾಪನೆಗೆ ಮನವಿ

ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡ ಭೂಸ್ವಾಧೀನ ರದ್ದು ನಿರ್ಧಾರ ತನ್ನ ನಾಗರಿಕರ ಕಾಳಜಿಗಳಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಮುಖಂಡ ಅರವಿಂದ ಬೆಲ್ಲದ ತಿಳಿಸಿದ್ದಾರೆ.


ರೈತರ ಹೋರಾಟದ ಬಳಿಕ ಬೆಂಗಳೂರು ಪಕ್ಕದ ದೇವನಹಳ್ಳಿ ಬಳಿ ಏರೋಸ್ಪೇಸ್‌ ಪಾರ್ಕ್‌ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿ ಭೂಸ್ವಾಧೀನಕ್ಕೆ ಅಧಿಸೂಚನೆ ರದ್ದು ಪಡಿಸಿದ ಬಳಿಕ ಯೋಜನೆಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಸಂಬಂಧ ಬೇಡಿಕೆ ಬಂದಿದೆ.

ಕರ್ನಾಟಕ ಗಡಿ ಭಾಗದ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 80 ಕಿಲೋಮೀಟರ್ ದೂರದ ಪೆನುಗೊಂಡ ಮತ್ತು ಮಡಕಶಿರ ಪ್ರದೇಶದಲ್ಲಿ ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣಕ್ಕೆ ಹೂಡಿಕೆದಾರರನ್ನು ಆಂದ್ರ ಐಟಿ ಸಚಿವ ನಾ.ರಾ. ಲೋಕೇಶ್‌ ಆಹ್ವಾನಿಸಿದ್ದರು. ಉಚಿತ ಭೂಮಿ ನೀಡುವ ಭರವಸೆಯನ್ನೂ ನೀಡಿದ್ದರು.

ಆದರೆ, ಉದ್ದೇಶಿತ ಯೋಜನೆಗಳು ಕರ್ನಾಟಕದಲ್ಲೇ ಇರುವಂತೆ ಮಾಡಲು ಸರ್ಕಾರ ಯತ್ನಿಸುತ್ತಿದೆ. ಇದೀಗ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸಿಎಂಗೆ ಪತ್ರ ಬರೆದಿದ್ದು, ಏರೋಸ್ಪೇಸ್‌ ಕಂಪನಿಗಳು ರಾಜ್ಯ ತೊರೆಯಬಾರದು. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.



ಚನ್ನರಾಯಪಟ್ಟಣ ಸ್ಥಳೀಯ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತೆಗೆದುಕೊಂಡ ಭೂಸ್ವಾಧೀನ ರದ್ದು ನಿರ್ಧಾರ ಸರ್ಕಾರವು ತನ್ನ ನಾಗರಿಕರ ಕಾಳಜಿಗಳಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು. ಅದೇ ಸಮಯದಲ್ಲಿ, ಅಂತಹ ಮಹತ್ವದ ಕೈಗಾರಿಕೆ ಸ್ಥಾಪನೆಯಿಂದಾಗಿ ದೀರ್ಘಕಾಲೀನ ಆರ್ಥಿಕ ಮತ್ತು ಮೌಲ್ಯವನ್ನು ಪರಿಗಣಿಸುವುದು ಸಹ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ಸರ್ಕಾರವು ಏರೋಸ್ಪೇಸ್ ಯೋಜನೆಯನ್ನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಅಥವಾ ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ಸ್ಥಳಾಂತರಿಸಲು ಪರಿಗಣಿಸಬೇಕು ಎಂದಿದ್ದಾರೆ.

ರಾಜ್ಯವು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ವಲಯದಲ್ಲಿ ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಿದೆ. ಈ ಕ್ಷೇತ್ರದಲ್ಲಿ ದೇಶದ ಒಟ್ಟು ಉತ್ಪಾದನೆಯ ಶೇ. 65 ರಷ್ಟು ಕೊಡುಗೆ ನೀಡುತ್ತಿದ್ದು ಜಾಗತಿಕ ಮನ್ನಣೆಗಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡಬಾರದು, ಬದಲಿಗೆ ಅಂತಹ ಅಭಿವೃದ್ಧಿಗೆ ಹೆಚ್ಚು ಅನುಕೂಲಕರ ಪ್ರದೇಶಕ್ಕೆ ಸ್ಥಳಾಂತರಿಸಬೇಕು.

ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಪ್ರದೇಶವು ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ನೆಲೆಯಾಗಿದೆ. ಭೂಮಿಯ ಲಭ್ಯತೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಂಬಲ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಬಹು ಮುಖ್ಯವಾಗಿ, ಈ ಭಾಗವು ಬಹಳ ಹಿಂದಿನಿಂದಲೂ ಕೈಗಾರಿಕರಣಗೊಂಡಿಲ್ಲ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಏರೋಸ್ಪೇಸ್ ಯೋಜನೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವುದರಿಂದ ಇನ್ನೂ ಹೆಚ್ಚಿನ ಕೈಗಾರಿಕೆಗಳು ಹೂಡಿಕೆ ಮಾಡುತ್ತವೆ. ಈ ಪ್ರದೇಶಕ್ಕೆ ಹೆಚ್ಚು ಅಗತ್ಯವಿರುವ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗವನ್ನು ತರುತ್ತದೆ ಎಂದು ತಿಳಿಸಿದ್ದಾರೆ.

Read More
Next Story