
574 ಮೆಟ್ಟಿಲು ಏರಿದ ಕಲಾವಿದೆ ಆರ್. ಹರ್ಷಿತಾ
ಭರತನಾಟ್ಯವಾಡುತ್ತಲೇ 8:54 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟ ಏರಿ ಹರಕೆ ತೀರಿಸಿದ ಬಾಲಕಿ
ಹೊಸಪೇಟೆಯ ಕಲಾವಿದೆ ಆರ್. ಹರ್ಷಿತಾ ಹನುಮದ್ ವ್ರತಾಚರಣೆ ಸಂದರ್ಭದಲ್ಲಿ 574 ಮೆಟ್ಟಿಲುಗಳ ಮೇಲೆ ನೃತ್ಯ ಮಾಡುತ್ತಾ ಬೆಟ್ಟ ಹತ್ತುವ ಮೂಲಕ ತಾವು ಹೊತ್ತಿದ್ದ ಹರಕೆಯನ್ನು ಪೂರೈಸಿದ್ದಾರೆ.
ಅಂಜನಾದ್ರಿ ಬೆಟ್ಟವನ್ನು ಕೇವಲ 8 ನಿಮಿಷ 54 ಸೆಕೆಂಡುಗಳ ಅತಿ ಕಡಿಮೆ ಅವಧಿಯಲ್ಲಿ ಭರತನಾಟ್ಯದ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಲೇ ಏರಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲಾವಿದೆ ಆರ್. ಹರ್ಷಿತಾ ಗಮನ ಸೆಳೆದಿದ್ದಾರೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ 574 ಮೆಟ್ಟಿಲುಗಳ ಮೇಲೆ ನೃತ್ಯ ಮಾಡುತ್ತಾ ಬೆಟ್ಟ ಹತ್ತುವ ಮೂಲಕ ತಾವು ಹೊತ್ತಿದ್ದ ಹರಕೆಯನ್ನು ಪೂರೈಸಿದ್ದಾರೆ.
ಹೆಜ್ಜೆ ಹೆಜ್ಜೆಗೂ ಕಲಾ ಸಮರ್ಪಣೆ
ತಮ್ಮ ಪ್ರತಿ ಹೆಜ್ಜೆಯನ್ನೂ ನೃತ್ಯದ ಮುದ್ರೆಯನ್ನಾಗಿ ಪರಿವರ್ತಿಸಿದ ಹರ್ಷಿತಾ, ಮೆಟ್ಟಿಲುಗಳನ್ನೇ ತಮ್ಮ ಕಲಾಸಮರ್ಪಣೆಯ ವೇದಿಕೆಯನ್ನಾಗಿ ಬಳಸಿಕೊಂಡರು. ಆಕೆಯ ಪ್ರತಿಯೊಂದು ಮುದ್ರೆಯಲ್ಲೂ ಆಂಜನೇಯನಿಗೆ ತಮ್ಮ ಕಲೆಯನ್ನು ಅರ್ಪಿಸುವ ಭಕ್ತಿ ಭಾವ ತುಂಬಿತ್ತು. ಪ್ರಭು ಶ್ರೀರಾಮ ಮತ್ತು ಆಂಜನೇಯನ ಪಾದಗಳಿಗೆ ತಮ್ಮ ನೃತ್ಯ ಕಲೆಯನ್ನು ಸಮರ್ಪಿಸಿದ ಈ ಕ್ಷಣವು ಭಕ್ತಿ ಮತ್ತು ದೈವಿಕ ಅನುಗ್ರಹದಿಂದ ಕೂಡಿತ್ತು. ಆಕೆಯ ಮುಖದಲ್ಲಿ ಮೂಡಿದ ದೈವಿಕ ಶಾಂತತೆ ಮತ್ತು ಸಮರ್ಪಣಾ ಮನೋಭಾವವು ಸ್ಥಳದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳನ್ನು ಬೆರಗುಗೊಳಿಸಿತು.
ಕೇಸರಿಮಯ ಕಿಷ್ಕಿಂಧಾ ಪ್ರದೇಶ
ದೇಗುಲದ ಆವರಣದಲ್ಲಿ ನೃತ್ಯವನ್ನು ಪೂರ್ಣಗೊಳಿಸಿ, ದೇವರ ದರ್ಶನ ಪಡೆದ ನಂತರ, ದೇವಸ್ಥಾನದ ಆಡಳಿತ ಮಂಡಳಿಯು ಆರ್. ಹರ್ಷಿತಾ ಅವರನ್ನು ಸನ್ಮಾನಿಸಿ ಗೌರವಿಸಿತು.
ಹನುಮಮಾಲಾ ವಿಸರ್ಜನೆ ನಿಮಿತ್ತ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿದು ಬಂದಿದ್ದರಿಂದ ಇಡೀ ಬೆಟ್ಟವೇ ಕೇಸರಿಮಯವಾಗಿ ಕಂಗೊಳಿಸಿತು. ಅದರಲ್ಲೂ ಬೆಳ್ಳಂಬೆಳಗ್ಗೆ ಸೂರ್ಯನ ಹೊಂಬಣ್ಣದ ಕಿರಣಗಳು ಅಂಜನಾದ್ರಿಯ ಮೇಲೆ ಬಿದ್ದಾಗ, ಈ ಕೇಸರಿಮಯ ಸೊಬಗು ಮತ್ತಷ್ಟು ರಂಗು ಪಡೆದಿತ್ತು.
ಮಂಗಳವಾರ ಮಧ್ಯರಾತ್ರಿಯಿಂದಲೇ ಆಂಜನೇಯನ ದರ್ಶನ ಪಡೆಯಲು ಬೆಟ್ಟ ಏರುತ್ತಿದ್ದ ಹನುಮ ಮಾಲಾಧಾರಿಗಳು, ಮೆಟ್ಟಿಲು ಹತ್ತುವಾಗ ಜೈರಾಮ, ಜೈ ಆಂಜನೇಯ ಎಂಬ ಜಯಘೋಷವನ್ನು ಮೊಳಗಿಸಿದರು. ಈ ಘೋಷಣೆಗಳು ಕಿಷ್ಕಿಂಧಾ ಪ್ರದೇಶದಲ್ಲಿ ಮಾರ್ದನಿಸುತ್ತಿದ್ದವು. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹನುಮಮಾಲಾಧಾರಿಗಳು ಗೊತ್ತುಪಡಿಸಿದ ಜಾಗಗಳಲ್ಲಿ ಮಾಲೆ ವಿಸರ್ಜನೆ ಮಾಡಿ, ತುಂಗಭದ್ರಾ ಅಥವಾ ಸ್ನಾನ ಘಟ್ಟಗಳಲ್ಲಿ ಮಿಂದೆದ್ದು, ಪೂಜೆ ಸಲ್ಲಿಸಿ, ಶ್ರದ್ಧಾ ಭಕ್ತಿಯಿಂದ ಅಂಜನಾದ್ರಿ ಬೆಟ್ಟ ಏರುತ್ತಿದ್ದರು.

