ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಸಾಮಾಜಿಕ ಮಾಧ್ಯಮದಲ್ಲಿ ಜೋರಾಯ್ತು #ArrestRevanna ಅಭಿಯಾನ
x

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಸಾಮಾಜಿಕ ಮಾಧ್ಯಮದಲ್ಲಿ ಜೋರಾಯ್ತು #ArrestRevanna ಅಭಿಯಾನ


ಪ್ರಜ್ವಲ್‌ ಪೆನ್‌ಡ್ರೈವ್‌ ಪಕರಣದಲ್ಲಿ ದಿನದಿಂದ ದಿನಕ್ಕೆ ಆಘಾತಕಾರಿ ಮಾಹಿತಿಗಳು ಹೊರಬರುತ್ತಿದ್ದು, ಶುಕ್ರವಾರ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ ಸೇರಿದಂತೆ ಈವರೆಗೆ ಒಟ್ಟು ನಾಲ್ಕು ಎಫ್‌ಐಆರ್‌ ದಾಖಲಾಗಿವೆ. ಶುಕ್ರವಾರ ಕೆ ಆರ್‌ ನಗರದಲ್ಲಿ ಎಚ್‌ ಡಿ ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಮತ್ತೊಂದು ಕಡೆ ಎಸ್‌ಐಟಿಯ ಮುಂದೆ ಮಹಿಳೆಯೊಬ್ಬರು ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಈ ನಡುವೆ, ಶುಕ್ರವಾರ ಪ್ರಜ್ವಲ್‌ ಮತ್ತು ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ #ArrestRevanna ಮತ್ತು #ArrestPrajwal ಅಭಿಯಾನಗಳು ಬಿರುಸಾಗಿವೆ.

ದೇಶಾದ್ಯಂತ ಸದ್ದು ಮಾಡಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಮತ್ತು ಅಪಹರಣದಂತಹ ಗಂಭೀರ ಆರೋಪದ ಮೇಲೆ ಸರಣಿ ಪ್ರಕರಣಗಳು ದಾಖಲಾಗುತ್ತಿದ್ದರೂ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಅಭಿಯಾನದ ಪೋಸ್ಟ್‌ ವೈರಲ್‌ ಆಗಿದ್ದು, ಕನ್ನಡದ ಬಹುತೇಕ ಲೇಖಕರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಮತ್ತು ಮಹಿಳಾ ಪರ ಹೋರಾಟಗಾರರು ಈ ಪೋಸ್ಟನ್ನು ಶೇರ್‌ ಮಾಡಿ, ಆರೋಪಿಗಳಾದ ಹೆಚ್‌ ಡಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ʻʻಅಧಿಕಾರದ ದುರುಪಯೋಗ ಮಾಡಿಕೊಂಡು ಒಬ್ಬಾತ ಕ್ರೂರವಾದ ಅಪರಾಧ ಎಸಗಿದನೆಂಬ ಆರೋಪವಿದೆ. ಆತ ದೇಶ ಬಿಟ್ಟು ಹೊರಗೆ ಹೋಗಿದ್ದಾನೆ. ಆತನ ತಂದೆ (ಅಧಿಕಾರಸ್ಥ, ಪ್ರಭಾವಿ)ಯ ಮೇಲೂ ಎಫ್‌ಐಆರ್ ಆಗಿದೆ. ಆತ ಇಲ್ಲೇ ಹೋಮ, ಹವನ ಮಾಡಿಕೊಂಡು ಓಡಾಡಿಕೊಂಡಿದ್ದಾನೆ. ಹೀಗಿರುವಾಗ, ಬಲಿಪಶುಗಳಲ್ಲಿ ಒಬ್ಬರೆಂದು ಹೇಳಲಾದವರು ಅಪಹರಣಕ್ಕೆ ಒಳಗಾಗಿದ್ದಾರೆಂದು ಆಕೆಯ ಮಗ ದೂರು ಕೊಟ್ಟು ಎಫ್‌ಐಆರ್ ಆಗುತ್ತದೆ. ಇಷ್ಟಾದ ಮೇಲೆ ಒಂದು ಗಂಟೆಯೂ ತಡ ಮಾಡದೇ ಆತನನ್ನು (ರೇವಣ್ಣನನ್ನು) ಬಂಧಿಸಬೇಕಾ, ಬೇಡವಾ? ಅಪರಾಧ ನಡೆದಿದೆಯೋ ಇಲ್ಲವೋ ಕೋರ್ಟು ತೀರ್ಮಾನಿಸುತ್ತದೆ. ಆದರೆ ಸರ್ಕಾರವೊಂದು ಎಸ್‌ಐಟಿ ರಚಿಸಬೇಕಾಗಿ ಬಂದ ದೊಡ್ಡ ಪ್ರಕರಣದಲ್ಲಿ ಬಲಿಪಶುವೊಬ್ಬರು ಕಾಣೆಯಾಗುವುದು ಬಹಳ ಬಹಳ ಗಂಭೀರ ವಿದ್ಯಮಾನವಲ್ಲವಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಈ ಬಂಧನ ಇನ್ನೂ ಆಗದೇ ಇರುವುದಕ್ಕೆ ಕಾರಣವೇನು? ದೇಶವನ್ನಾಳುತ್ತಿರುವ ಬಿಜೆಪಿ ಇನ್ನೂ ಜೆಡಿಎಸ್‌ನಿಂದ ಮೈತ್ರಿ ಕಳಚಿಕೊಂಡಿಲ್ಲದಿರುವುದರಿಂದ ಅಧಿಕಾರಿಗಳು ಹೆದರಿದ್ದಾರೆಯೇ? ಅಧಿಕೃತವಾಗಿ ದೇವೇಗೌಡರ ಕುಟುಂಬ ಪ್ರಜ್ವಲ್‌ನನ್ನು ಪಕ್ಷದಿಂದ ಅಮಾನತು ಮಾಡಿದಿಯೇ ಹೊರತು, ಅದೇ ಪ್ರಕರಣದಲ್ಲಿ A2 ಆಗಿರುವ ರೇವಣ್ಣನನ್ನು ಅಲ್ಲ. ಕುಮಾರಸ್ವಾಮಿ ಸಂಬಂಧವಿಲ್ಲದಂತೆ ಮಾತಾಡಿದ್ದು ಪ್ರಜ್ವಲ್‌ ಬಗ್ಗೆ ಮಾತ್ರ. ಜೊತೆಗೆ ಇದೆಲ್ಲಾ ಷಡ್ಯಂತ್ರ ಎಂದು ಬಲವಾಗಿ ವಾದಿಸುತ್ತಾ ಇರೋದು ಇದಕ್ಕೆ ಕಾರಣವೇ? ಅಥವಾ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಾನೂನು ಜಾರಿ ಮಾಡಲು ಹಿಂಜರಿಯುತ್ತಿದೆಯೇ? ಉಳಿದಂತೆ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳಿಗೆ ಸೂಚಿಸದಷ್ಟು ಅದು ದುರ್ಬಲವಾಗಿದೆಯೇ?ʼʼ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿ, #ArrestRevanna, #ArrestPrajwalRevanna ಹ್ಯಾಶ್‌ಟ್ಯಾಗ್‌ ಅಭಿಯಾನ ಆರಂಭಿಸಿದ್ದಾರೆ.

ಇದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣರನ್ನು ಬಂಧಿಸಬೇಕು ಎನ್ನುವ ಕೂಗು ಹೆಚ್ಚಾಗಿದೆ. ಅನೇಕರು ರಾಜ್ಯ ಸರ್ಕಾರದ ನಡೆ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ.

Read More
Next Story