ಅರ್ಕಾವತಿ ರೀಡೂ ಪ್ರಕರಣ | ವರದಿ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ರಾಜ್ಯಪಾಲರು
x
ಥಾವರ್‌ ಚಂದ್ರ ಗೆಹ್ಲೋಟ್‌

ಅರ್ಕಾವತಿ ರೀಡೂ ಪ್ರಕರಣ | ವರದಿ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ರಾಜ್ಯಪಾಲರು

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 'ರೀಡೂ' ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪತ್ರ ಬರೆದಿದ್ದಾರೆ.


Click the Play button to hear this message in audio format

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 'ರೀಡೂ' ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪತ್ರ ಬರೆದಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಆಯೋಗದ ವರದಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಸೆ.11ರಂದು ಸಲ್ಲಿಸಿದೆ.

ಏನಿದು ಡಿನೋಟಿಫೈ ಪ್ರಕರಣ?

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 540 ಎಕರೆಯನ್ನು ತಮ್ಮ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರು 'ರೀಡೂ' ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ಅವರು ವಿಧಾನಸಭೆ ಅಧಿವೇಶನದಲ್ಲಿಯೇ ಆರೋಪ ಮಾಡಿದ್ದರು.

ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿದ್ದ ಈ ಪ್ರಕರಣದ ವಿಚಾರಣೆಗೆ 2014ರ ಆಗಸ್ಟ್‌ನಲ್ಲಿ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ಆಯೋಗವನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇಮಿಸಿತ್ತು. ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 2004ರಿಂದ 2014ರವರೆಗೆ 983 ಎಕರೆ ವಿಸ್ತೀರ್ಣವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಿತ್ತು.

2017ರ ಆಗಸ್ಟ್‌ನಲ್ಲಿ ಆಯೋಗವು 1,861 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಠಿಯಾ ಅವರಿಗೆ ಸಲ್ಲಿಸಿತ್ತು. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂದಿನ ಸರ್ಕಾರ ಮಂಡಿಸಿತ್ತು.

'ಕೆಂಪಣ್ಣ ಆಯೋಗವು ತಮ್ಮನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ' ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿ ಮೇಲಿನ ತೀರ್ಪು ಅನ್ನು ಹೈಕೋರ್ಟ್ ನೀಡಲು ಬಾಕಿ ಇರುವ ಮಧ್ಯೆಯೇ, ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಕೆಂಪಣ್ಣ ವಿಚಾರಣಾ ಆಯೋಗದ ವರದಿಯನ್ನು ರಾಜ್ಯಪಾಲರು ಕೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

Read More
Next Story