ಅಡಿಕೆ ಆತಂಕ | ಕ್ಯಾನ್ಸರ್‌ಕಾರಕ ಎಂಬ ವದಂತಿಗಳಿಗೆ ತೆರೆ ಎಳೆಯುತ್ತೇವೆ: ಶಿವರಾಜ್ ಸಿಂಗ್ ಭರವಸೆ
ಅಡಿಕೆ ಬೆಳೆಗಾರರು ಚಿಂತೆ ಮಾಡಬೇಕಿಲ್ಲ, ನಿಮ್ಮೊಂದಿಗೆ ನಾವು ಇದ್ದೇವೆ. ಅಡಿಕೆಯ ಕುರಿತ ವದಂತಿಗಳನ್ನು ದೂರಮಾಡುತ್ತೇವೆ, ಅಂಟಿದ ಕಳಂಕವನ್ನು ನಿವಾರಿಸುತ್ತೇವೆ ಎಂದು ಭರವಸೆ ನೀಡಿದರು.
ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಗಳಿವೆ. ಆದರೆ, ಆ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಈಗಾಗಲೇ 17 ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹಾಗಾಗಿ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಹಿತ ಕಾಯಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಶನಿವಾರ ನಡೆದ ರಾಜ್ಯ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅಡಿಕೆಯ ಬಗ್ಗೆ ಇರುವ ಅನಗತ್ಯ ಗೊಂದಲ ಮತ್ತು ವದಂತಿಗಳನ್ನು ದೂರಮಾಡಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಅಭಯ ನೀಡಿದರು.
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಇತ್ತೀಚಿನ ಕೆಲವು ವರದಿಗಳ ಹಿನ್ನೆಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯದ ಬೆಳೆಗಾರರ ವಲಯದಲ್ಲಿ ಆತಂಕ ಮೂಡಿತ್ತು. ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಅಡಿಕೆ ಆರೋಗ್ಯ ಪರಿಣಾಮಗಳು ಮತ್ತು ಪ್ರಯೋಜನಗಳ ಕುರಿತ ಉನ್ನತ ಸಂಶೋಧನಾ ಸಂಸ್ಥೆಗಳಿಂದ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ನಡೆಯಬೇಕು ಎಂಬ ಕೂಗು ಎದ್ದಿತ್ತು.
ಆ ಹಿನ್ನೆಲೆಯಲ್ಲಿಯೇ ಅಡಿಕೆ ಬೆಳೆಗಾರರ ಹಕ್ಕೊತ್ತಾಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಾಗರದಲ್ಲಿ ರಾಜ್ಯ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಆಯೋಜಿಸಿ ಕೇಂದ್ರ ಕೃಷಿ ಸಚಿವ ಚೌಹಾಣ್ ಅವರನ್ನು ಆಹ್ವಾನಿಸಲಾಗಿತ್ತು.
ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ಅಡಿಕೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಅಡಿಕೆ ಬೆಳೆಗಾರರು ಮತ್ತು ಅಡಿಕೆಯ ಮಾನ ಕಾಯಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಸಂಶೋಧನೆ, ವೈಜ್ಞಾನಿಕ ಬೆಲೆ, ಆಮದು ತಡೆಯಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಅಡಿಕೆಗೆ ಬಾಧಿಸುವ ರೋಗಗಳ ಕುರಿತ ಸಂಶೋಧನೆಗಾಗಿಯೇ ಈ ಬಾರಿಯ ಬಜೆಟ್ನಲ್ಲಿ 67 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗುವುದು ಎಂದೂ ಘೋಷಿಸಿದರು.
ಕಳೆದ ವರ್ಷ ಅಧಿಕ ಮಳೆಯಿಂದಾಗಿ ಈ ಭಾಗದಲ್ಲಿ ಅಡಿಕೆ ಬೆಳೆ ವ್ಯಾಪಕ ಹಾನಿಯಾಗಿರುವುದು ಕೇಂದ್ರ ಸರ್ಕಾರದ ಗಮನದಲ್ಲಿದೆ. ಆ ಹಿನ್ನೆಲೆಯಲ್ಲಿಯೇ ರೋಗ ಕುರಿತ ಸಂಶೋಧನೆಗಾಗಿ ವಿಶೇಷ ಅನುದಾನ ಮೀಸಲಿಡಲಾಗುವುದು ಎಂದ ಅವರು, ಅಡಿಕೆ ಬೆಳೆಗಾರರು ಚಿಂತೆ ಮಾಡಬೇಕಿಲ್ಲ, ನಿಮ್ಮೊಂದಿಗೆ ನಾವು ಇದ್ದೇವೆ. ಅಡಿಕೆಯ ಕುರಿತ ವದಂತಿಗಳನ್ನು ದೂರಮಾಡುತ್ತೇವೆ, ಅಂಟಿದ ಕಳಂಕವನ್ನು ನಿವಾರಿಸುತ್ತೇವೆ ಎಂದು ಭರವಸೆ ನೀಡಿದರು.