
ಬಿಜೆಪಿಯಲ್ಲಿ ಬಂಡುಕೋರರೇ ವಿಜಯೇಂದ್ರ ಬಣಕ್ಕಿಂತ ಸಕ್ರಿಯ? ಕಾಂಗ್ರೆಸ್ ವಿರುದ್ಧ ಹೋರಾಟದಲ್ಲಿ ಯಶಸ್ವಿ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಾಸಕರು, ಸಂಸದರು ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದರೆ, ಬಂಡಾಯ ಬಿಜೆಪಿಗರು ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವಲ್ಲಿ ಸಫಲರಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಸಮರ ಸಾರಲು ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಮಿತ್ರ ಪಕ್ಷಗಳಿಗೆ ಸರ್ಕಾರದ ಹಗರಣಗಳು, ವಿವಾದಗಳೇ ಪ್ರಬಲ ಅಸ್ತ್ರ! ಆದರೂ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ವಿಫಲವಾಗಿದೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಲೇ ಇರುತ್ತವೆ.
ಇದರ ನಡುವೆ, ಬಿಜೆಪಿಯ ಬಂಡಾಯ ನಾಯಕರು ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುವಲ್ಲಿ ಸಫಲತೆ ಕಂಡಿದ್ದಾರೆ. ಅಲ್ಲದೇ ಕೇಂದ್ರಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಶಹಬ್ಬಾಸ್ ಎಂದು ಬೆನ್ನು ತಟ್ಟಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಕುರಿತು ನಿಖರವಾದ ವರದಿ ತಯಾರಿಸಿ ಬಂಡಾಯ ಬಿಜೆಪಿ ತಂಡವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ರಾಜ್ಯದಲ್ಲಿ ಅಕ್ರಮವಾಗಿ ಪಾಕಿಸ್ತಾನಿಯರು, ಬಾಂಗ್ಲಾದೇಶಿಗರು ನೆಲೆಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ವಾರ್ ರೂಂ ತೆಗೆದು ಮಾಹಿತಿ ಕ್ರೋಢೀಕರಿಸಿತು. ಅಲ್ಲದೇ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿನ ಭ್ರಷ್ಟಾಚಾರದ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಹೈಕೋರ್ಟ್‌ನಿಂದ ಆದೇಶ ಬರುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಾಸಕರು, ಸಂಸದರು ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿ ರಾಜ್ಯದ ಜನರ ಗಮಸೆಳೆಯುವ ಪ್ರಯತ್ನ ನಡೆಸಿದರೆ, ಪಕ್ಷದ ಬಂಡಾಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತು ರಮೇಶ್ ಜಾರಕಿಹೊಳಿ ಸರ್ಕಾರದ ವೈಫಲ್ಯಗಳ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಕೇಂದ್ರಕ್ಕೆ ಮಾಹಿತಿ ನೀಡುವಲ್ಲಿ ಯಶಸ್ಸಿಯಾಗಿದ್ದಾರೆ.
ಇದರ ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸುವಲ್ಲಿ ಕಾನೂನು ಹೋರಾಟದಲ್ಲಿ ಜಯಗಳಿಸಿದರು. ಕೇವಲ ಬೀದಿಗಿಳಿದು ಹೋರಾಟ ನಡೆಸಿದರೆ ಸಾಲದು, ಬಂಡಾಯ ಬಿಜೆಪಿ ನಾಯಕರಂತೆ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವುದು ಅಗತ್ಯ ಎಂದು ಕೇಂದ್ರ ಬಿಜೆಪಿ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ರಾಜ್ಯದಲ್ಲಿನ ವಕ್ಫ್ ಆಸ್ತಿ ಕಬಳಿಕೆ ಕುರಿತು ವರದಿ
ಕಳೆದ ವರ್ಷ ವಿಜಯಪುರ ಜಿಲ್ಲೆಯಲ್ಲಿ ಆರಂಭವಾದ ವಕ್ಫ್ ಆಸ್ತಿ ಕಬಳಿಕೆ ವಿರುದ್ಧದ ಹೋರಾಟದ ಕಿಚ್ಚು ರಾಜ್ಯಾದ್ಯಂತ ಹಬ್ಬಿತು. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ಹೋರಾಟದ ಬಳಿಕ ನಡೆದ ಬೆಳವಣಿಗೆ ರಾಜಕೀಯ ಹೋರಾಟದ ಸ್ವರೂಪ ಪಡೆದುಕೊಂಡಿತು.
ಬಸನಗೌಡ ಪಾಟೀಲ್ ಯತ್ನಾಳ್ ನಿಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಸ್ತಿ ಕಬಳಿಕೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿತು. ಬಳಿಕ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿನ ವಕ್ಫ್ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಸಲ್ಲಿಕೆ ಮಾಡಿತು. ಕಲಬುರಗಿ, ಬೀದರ್, ಬಿಜಾಪುರ, ಯಾದಗಿರಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸಂಗ್ರಹಿಸಿದ ಮಾಹಿತಿಯು ವರದಿಯಲ್ಲಿ ಅಡಕವಾಗಿತ್ತು.
ಕೃಷಿ ಭೂಮಿಯಲ್ಲಿ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ದಾಖಲಾದ ವಿಚಾರ ರಾಜ್ಯದಲ್ಲಿ ಬೆಂಕಿ ಜ್ವಾಲೆಯಂತೆ ಹಬ್ಬಿತು. ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೀದರ್, ಹಾವೇರಿ, ಧಾರವಾಡ, ರಾಯಚೂರು ಮತ್ತು ಹಾವೇರಿಯಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿಗಳಿವೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಭಾಗದಲ್ಲೇ ಅಧಿಕ ವಕ್ಫ್ ಆಸ್ತಿಗಳಿರುವುದು ಅಂಕಿಅಂಶಗಳು ಬಹಿರಂಗಗೊಳಿಸಿದವು.
ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್ ಆಸ್ತಿ ಮಾಡಲು ಸರ್ಕಾರ ಮುಂದಾಗಿದೆ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. 2,700 ಎಕರೆ ಜಾ ಗ ಖಬರ್ ಸ್ತಾನಗೆ ಕೊಡಲು ಸರ್ಕಾರ ತೀರ್ಮಾನಿಸಿದೆ ಎಂದು ಎಂದು ಬಂಡಾಯ ನಾಯಕ ಯತ್ನಾಳ್ ಮತ್ತಿತರರು ಆರೋಪಿಸಿದ್ದರು.
ರಾಜಕೀಯ ನಾಯಕರು ಸೇರಿ ಬಲಾಢ್ಯರು ವಕ್ಫ್ಆಸ್ತಿ ಮೇಲೆ ವಕ್ರದೃಷ್ಠಿ ಬೀರಿದ್ದು, 4 ವರ್ಷದಲ್ಲಿ ರಾಜ್ಯಾದ್ಯಂತ 1,127 ವಕ್ಫ್ ಆಸ್ತಿ ಒತ್ತುವರಿ ಕೇಸ್‌ಗಳು ವರದಿಯಾಗಿವೆ. ವರ್ಷದಿಂದ ವರ್ಷಕ್ಕೆ ಕಾನೂನುಬಾಹಿರವಾಗಿ ವಕ್ಫ್ ಆಸ್ತಿ ಕಬಳಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಕ್ಫ್ ಆಸ್ತಿ ಕಬಳಿಕೆ, ಅನುದಾನ ದುರ್ಬಳಕೆ ಕುರಿತು 2012ರಲ್ಲಿ ಸಲ್ಲಿಕೆಯಾದ ಅನ್ವರ್ ಮಾಣಿಪ್ಪಾಡಿ ವರದಿ ಧೂಳು ಹಿಡಿದಿದ್ದು, ವರದಿ ಆಧರಿಸಿ ಕ್ರಮಕೈಗೊಳ್ಳಲು ಆಡಳಿತ ನಡೆಸಿದ್ದ ಸರ್ಕಾರಗಳು ಹಾಗೂ ಈಗಿನ ಸರ್ಕಾರವೂ ಹಿಂದೇಟು ಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಕ್ರಮ ಬಾಂಗ್ಲಾ, ಪಾಕಿಸ್ತಾನಿಯರ ಪತ್ತೆಗೆ ವಾರ್ ರೂಂ
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇಂದ್ರ ಸರ್ಕಾರವು ಹಲವು ಒಪ್ಪಂದಗಳಿಗೆ ನಿಷೇಧ ಹೇರಿತು. ಇದರ ಜತೆಗೆ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ತೆರಳುವಂತೆ ಖಡಕ್ ಎಚ್ಚರಿಕೆ ನೀಡಿತು. ಈ ವೇಳೆ ಬಹಳಷ್ಟು ಮಂದಿ ಪಾಕಿಸ್ತಾನದತ್ತ ತೆರಳಲಿದ್ದಾರೆ. ಕೇಂದ್ರದ ಸೂಚನೆ ನಡುವೆಯೇ ಹಲವರು ಭಾರತ ತೊರೆಯಲು ಹಿಂದೇಟು ಹಾಕಿದರು. ಕೇಂದ್ರ ಸರ್ಕಾರವು ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ಹೋಗುವಂತೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಬಂಡಾಯ ಬಿಜೆಪಿ ಮುಖಂಡರು ಸಕ್ರಿಯರಾದರು.
ಹೊಗಳುತ್ತಾ ಕುಳಿತ ವಿಜಯೇಂದ್ರ ತಂಡ?
ಬಿ.ವೈ.ವಿಜಯೇಂದ್ರ ನೇತೃತ್ವದ ಬಣವು ಕೇಂದ್ರ ಸರ್ಕಾರದ ತೀರ್ಮಾನವನ್ನು ಹೊಗಳುತ್ತಾ ಕುಳಿತರೆ, ಸದ್ದಿಲ್ಲದೇ, ಬಂಡಾಯ ಬಿಜೆಪಿ ನಾಯಕರು ರಾಜ್ಯದಲ್ಲಿನ ಅಕ್ರಮ ಪಾಕಿಸ್ತಾನ ಮತ್ತು ಬಾಂಗ್ಲಾರ ಹುಡುಕಾಟ ಆರಂಭಿಸಿತು. ಇದಕ್ಕಾಗಿ ವಾರ್ ರೂಂ ಆರಂಭಿಸಿತು. ವಿಜಯೇಂದ್ರ ಬಣಕ್ಕಿಂತ ಬಂಡಾಯ ಬಣವೇ ರಾಜ್ಯ ಸರ್ಕಾರ ವಿರುದ್ಧ ಪ್ರಬಲ ಸ್ಪರ್ಧಿ ಎನ್ನಿಸುವಂತೆ ಹೋರಾಟ ನಡೆಸಿತು.
ಮಾಜಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಆರಂಭಿಸಿದ ವಾರ್ ರೂಂಗೆ ಕರೆಗಳ ಮಹಾಪೂರವೇ ಹರಿದು ಬಂದಿತು. ವಿಶೇಷ ಎಂದರೆ ಅತಿ ಹೆಚ್ಚು ಕರೆ ಬಂದಿರೋದೆ ಲಿಂಬಾವಳಿ ಪ್ರತಿನಿಧಿಸುತ್ತಿದ್ದ ಮಹಾದೇವಪುರ ವಿಧಾನಾಸಭಾ ಕ್ಷೇತ್ರದಿಂದ. ಅಲ್ಲಿ ಸಾವಿರಕ್ಕೂ ಹೆಚ್ಚು ದೂರುಗಳನ್ನು ಸಂಗ್ರಹಿಸಲಾಗಿದೆ. ಮಹಾದೇವಪುರ ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಎರಡನೇ ಸ್ಥಾನದಲ್ಲಿದೆ. ಮೂರನೇ ಅತಿ ಹೆಚ್ಚು ದೂರುಗಳು ಬಂದಿರುವುದು ಕೊಡಗು ಜಿಲ್ಲೆಯಿಂದಾಗಿದೆ. ನಂತರದಲ್ಲಿ ತುಮಕೂರು, ಮಂಡ್ಯ, ಬಾಗಲಕೋಟೆ, ಮಂಗಳೂರು ಹೀಗೆ ರಾಜ್ಯದ ಹಲವು ಜಿಲ್ಲೆಗಳಿಂದ ದೂರುಗಳನ್ನು ಸ್ವೀಕರಿಸಲಾಗಿದೆ.
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು, ಬೆಂಗಳೂರು, ಮಂಡ್ಯದಂತಹ ಜಿಲ್ಲೆಗಳಲ್ಲಿ ಮನೆ ನಿರ್ಮಾಣದ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರಿನಲ್ಲಿ ಕಾರ್ಮಿಕ ಕೆಲಸ ಮಾತ್ರವಲ್ಲದೇ, ಚಿಂದಿ ಆಯುವ ಕೆಲಸ ಮಾಡುತ್ತಾ ಇರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂಬುದು ಗೊತ್ತಾಗಿದೆ. ಆದರೆ, ಎಷ್ಟು ಸಂಖ್ಯೆ ಎಂಬುದರ ಬಗ್ಗೆ ಬಂಡಾಯ ಬಿಜೆಪಿಗರು ಮಾಹಿತಿ ಕಲೆ ಹಾಕುತ್ತಿದೆ. ನಿಖರವಾಗಿ ಮಾಹಿತಿ ಪಡೆದುಕೊಂಡ ಬಳಿಕ ಕೇಂದ್ರ ಮತ್ತು ರಾಜ್ಯದ ಗೃಹ ಇಲಾಖೆಗೆ ಮಾಹಿತಿ ನೀಡಲಿದೆ ಎಂದು ಮೂಲಗಳು ತಿಳಿಸಿದೆ.
ವಾಲ್ಮೀಕಿ ಹಗರಣ ಸಿಬಿಐ ತನಿಖೆಗೆ: ಬಂಡಾಯಗಾರರ ಪಾತ್ರ
ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ. ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ಆತನ ಆಪ್ತರು ಭಾಗಿಯಾಗಿದ್ದರು. ಯೂನಿಯನ್ ಬ್ಯಾಂಕ್‌ನ ಸಿಬ್ಬಂದಿ ಸಹ ಅಕ್ರಮದಲ್ಲಿ ತೊಡಗಿದ್ದರು. ಸಿಬಿಐ ಬ್ಯಾಂಕ್‌ನ ಭ್ರಷ್ಟಾಚಾರ ಕುರಿತು ಮಾತ್ರ ತನಿಖೆ ಕೈಗೊಂಡಿದೆ. ಆದರೆ, ರಾಜಕೀಯ ನಾಯಕರ ಬಗ್ಗೆ ತನಿಖೆ ನಡೆಸುವ ಅವಕಾಶ ಇರಲಿಲ್ಲ. ಎಸ್‌ಐಟಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಬಿಜೆಪಿ ಬಂಡಾಯ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಸಿಬಿಐಗೆ ಕೇವಲ ಬ್ಯಾಂಕ್ ಅಕ್ರಮ ಮಾತ್ರವಲ್ಲದೇ, ಇಡೀ ಪ್ರಕರಣದ ತನಿಖೆಯನ್ನು ವಹಿಸಬೇಕು ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕಾಂಗ್ರೆಸ್ ಸರ್ಕಾರದ ರಾಜಕೀಯ ವ್ಯಕ್ತಿಗಳು ಸೇರಿದಂತೆ ಇತರೆ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಎಸ್‌ಐಟಿ ತನಿಖೆಯಿಂದ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಸ್‌ಐಟಿ ಸರ್ಕಾರದ ಅಧೀನದಲ್ಲಿರುವುದರಿಂದ ಪಾರದರ್ಶಕತೆ ತನಿಖೆ ನಡೆಸಲಾಗುವುದಿಲ್ಲ. ಹೀಗಾಗಿ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಡೀ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಶಾಸಕರು ಬೀದಿಗಿಳಿದು ಹೋರಾಟ ನಡೆಸಿದರಾದರೂ ಕಾನೂನು ಹೋರಾಟ ನಡೆಸುವ ಪ್ರಯತ್ನ ಮಾಡಲಿಲ್ಲ. ಆದರೆ, ಬಿಜೆಪಿ ಬಂಡಾಯ ನಾಯಕರು ಕಾನೂನು ಹೋರಾಟ ಮಾಡಿ ಜಯಗಳಿಸಿದ್ದಾರೆ. ಸರ್ಕಾರಕ್ಕೆ ಮಾತ್ರವಲ್ಲದೇ ಸ್ವತಃ ಬಿಜೆಪಿಗರಿಗೆ ಮುಜುಗರವನ್ನುಂಟು ಮಾಡಿದ್ದಾರೆ.
ನಿಗಮದಲ್ಲಿನ 187 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು. 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಇದೆಲ್ಲವೂ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆಯಾಗಿತ್ತು. ಹೀಗೆ ವರ್ಗಾವಣೆಯಾದಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದನು. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್ ಬ್ಯಾಂಕಿಂಗ್, ಆರ್ಟಿಜಿಎಸ್, ಫೋನ್ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನು ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರೆನ್ನಲಾಗಿದೆ. ಅಕ್ರಮ ಬಯಲಿಗೆ ಬರುತ್ತಿದ್ದಂತೆ ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಪ್ರಕರಣ ಬಯಲಿಗೆ ಬಂದಿತ್ತು.