ಮುಂಗಾರು ಅಧಿವೇಶನ | ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
ನೀರಾವರಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಹಾಗೂ ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ತಲುಪಿಸಲು ತಂದಿರುವ ನೀರಾವರಿ ತಿದ್ದುಪಡಿ ಮಸೂದೆ- 2024ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ನೀರಾವರಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು ʻʻ1964 ರಲ್ಲಿ ಈ ವಿಚಾರದ ಬಗ್ಗೆ ಕಾಯ್ದೆ ಮಾಡಲಾಗಿತ್ತು. ನಂತರ ಯಾವುದೇ ತಿದ್ದುಪಡಿಗಳು ಆಗಿರಲಿಲ್ಲ. ಕಾಲುವೆಗಳಿಗೆ ಯಾರೂ ಸಹ ಪಂಪ್ ಸೆಟ್ ಗಳನ್ನು ಹಾಕಬಾರದು ಹಾಗೂ ಅಕ್ಕಪಕ್ಕದ ರೈತರು ನೀರು ತೆಗೆಯಲು ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ನೀರಾವರಿ ವಿಚಾರದಲ್ಲಿ ನಡೆಯುವ ಅಕ್ರಮಗಳ ತೀರ್ಮಾನಕ್ಕೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಗೆ ಹಕ್ಕು ನೀಡಲಾಗಿದೆ. ಪ್ರತಿಪಕ್ಷಗಳ ಶಾಸಕರ ಅಭಿಪ್ರಾಯಗಳನ್ನೂ ಸ್ವೀಕರಿಸಲಾಗಿದೆ. ರೈತರಿಗೆ ನೀರು ಕೊಡುವ ನಾಲೆಗಳ ರಕ್ಷಣೆಗೆ ಈ ಕಾನೂನು ತರಲಾಗಿದೆʼʼ ಎಂದು ವಿವರಿಸಿದರು.
ವಿಧೇಯಕ ಮಂಡನೆಯಾದ ಬಳಿಕ ಸ್ಪೀಕರ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿ ಅನುಮೋದನೆ ನೀಡಿದರು. ಕಳೆದ ಮಂಗಳವಾರ (ಜುಲೈ 16) ಶಾಸಕ ಜಗದೀಶ್ ಶಿವ ಗುಡಗಂಟಿ ಅವರು ತುಂಗಳ- ಸಾವಳಗಿ ಏತ ನೀರಾವರಿ ಯೋಜನೆಯ ಕೊನೆಯ ಭಾಗಗಳ ರೈತರಿಗೆ ನೀರು ತಲುಪುತ್ತಿಲ್ಲ ಎನ್ನುವ ವಿಚಾರವಾಗಿ ಗಮನ ಸೆಳೆದಾಗ ಉತ್ತರಿಸಿದ್ದ ಡಿಸಿಎಂ ಅವರು, ನಾಲೆಗಳಿಂದ ಅನೇಕ ಕಡೆ ಶೇ 90 ರಷ್ಟು ನೀರನ್ನು ಪಂಪ್ ಮಾಡಲಾಗುತ್ತಿದೆ. ಸದನ ಒಪ್ಪುವುದಾದರೆ ವಾರದೊಳಗೆ ಬಿಲ್ ತಯಾರು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಮಂಡ್ಯ, ಹಾಸನ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಟೇಲ್ ಎಂಡ್ ಭಾಗಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಸಹ ಶೇ 50 ರಷ್ಟು ನೀರು ಸಹ ಹೋಗುತ್ತಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದು ಎಂದು ಡಿಸಿಎಂ ತಿಳಿಸಿದ್ದರು.