Fun in prison; Government orders appointment of IPS officer as Superintendent of Parappana Prison
x

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ನೇಮಕವಾಗಿರುವ ಐಪಿಎಸ್‌ ಅಧಿಕಾರಿ ಅಂಶು ಕುಮಾರ್‌

ಜೈಲಿನಲ್ಲಿ ಮೋಜು-ಮಸ್ತಿ; ಪರಪ್ಪನ ಕಾರಾಗೃಹ ಅಧೀಕ್ಷಕರ ಹುದ್ದೆಗೆ ಐಪಿಎಸ್‌ ಅಧಿಕಾರಿ ನೇಮಿಸಿ ಸರ್ಕಾರ ಆದೇಶ

ಕಾರಾಗೃಹದಲ್ಲಿ ಹಲವು ಅಕ್ರಮಗಳು ಬಯಲಾದ ಪ್ರಕರಣದ ಕುರಿತು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ತನಿಖೆ ನಡೆಸುತ್ತಿದೆ. ಇದರ ನಡುವೆಯೇ, ಗೃಹ ಇಲಾಖೆಯು ಜೈಲು ಸುಧಾರಣೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.


Click the Play button to hear this message in audio format

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಐಷಾರಾಮಿ ಜೀವನದ ವಿಡಿಯೊಗಳು ವೈರಲ್ ಆದ ನಂತರ ರಾಷ್ಟ್ರಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರ ಇದೀಗ ಜೈಲು ಸೂಪರಿಂಟೆಂಡೆಂಟ್‌ ಹುದ್ದೆಗೆ ಐಪಿಎಸ್‌ ಅಧಿಕಾರಿ ನೇಮಕ ಮಾಡಿ ಆದೇಶಿಸಿದೆ.

ಮಾಂಸ, ಮದ್ಯ ಸೇವನೆ, ಮೊಬೈಲ್‌ ಬಳಕೆ ಮತ್ತು ಟಿ.ವಿ ವೀಕ್ಷಣೆಯಂತಹ ಅಕ್ರಮಗಳಿಗೆ ಶಾಶ್ವತವಾಗಿ ಬ್ರೇಕ್‌ ಹಾಕಲು ನಿರ್ಧರಿಸಿರುವ ಸರ್ಕಾರ ಇತಿಹಾಸದಲ್ಲೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕ ಹುದ್ದೆಗೆ ಐಪಿಎಸ್ ಅಧಿಕಾರಿ ಅಂಶು ಕುಮಾರ್‌ ಅವರನ್ನು ನೇಮಕ ಮಾಡಿದೆ. ಈ ಸಂಬಂಧ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಕಾರಾಗೃಹದಲ್ಲಿ ಹಲವು ಅಕ್ರಮಗಳು ಬಯಲಾದ ಪ್ರಕರಣದ ಕುರಿತು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದೆ. ಇದರ ನಡುವೆಯೇ, ಗೃಹ ಇಲಾಖೆಯು ಜೈಲು ಸುಧಾರಣೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಹೊಸ ನಿಯಮಾವಳಿ ಪ್ರಕಾರ, ಇನ್ನು ಮುಂದೆ ಜೈಲು ಸಿಬ್ಬಂದಿಯು ದಿನಕ್ಕೆ ಮೂರು ಬಾರಿ ಕಡ್ಡಾಯವಾಗಿ ರೌಂಡ್ಸ್‌ ಕೈಗೊಳ್ಳಬೇಕು. ಬ್ಯಾರಕ್‌ಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವುಗಳ ದೃಶ್ಯ ಮತ್ತು ಮಾಹಿತಿಯನ್ನು ಪ್ರಧಾನ ಕಚೇರಿಗೆ ನೇರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.

ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಕಡ್ಡಾಯ

ಮೊಬೈಲ್‌ಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಜಾಮರ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಲಾಗಿದ್ದು, ಬ್ಯಾರಕ್ ಸುತ್ತಮುತ್ತ ಸಿಗ್ನಲ್ ಮುಕ್ತ ವಲಯಕ್ಕೆ ಕ್ರಮ ವಹಿಸಲಾಗಿದೆ. ಅಲ್ಲದೆ, ಜೈಲಿನೊಳಗಿನ ಸಿಬ್ಬಂದಿಗೆ ಬಾಡಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. ವಿಚಾರಣಾಧೀನ ಮತ್ತು ಸಜಾಬಂಧಿ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇರಿಸಲು ಸೂಚಿಸಲಾಗಿದೆ. ಪುನಃ ಯಾವುದೇ ಅಕ್ರಮಗಳು ಕಂಡುಬಂದರೆ ಅದಕ್ಕೆ ಹಿರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಜೈಲು ಅಧಿಕ್ಷಕರ ಅಮಾನತು ಮಾಡಿದ್ದ ಸರ್ಕಾರ

ಕಾರಾಗೃಹದಲ್ಲಿ ಹಲವು ಅಕ್ರಮಗಳು ಬಯಲಾಗಿ ರಾಷ್ಟ್ರಮಟ್ಟದಲ್ಲಿ ಸರ್ಕಾರ ಮುಜುಗರ ಅನುಭವಿಸಿದ ಹಿನ್ನೆಲೆ ಜೈಲು ಅಧೀಕ್ಷಕ ಮಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದಾದ ನಂತರ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತೊಮ್ಮೆ ಅಕ್ರಮಗಳಾಗದಂತೆ ಮನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಪರಪ್ಪನ ಅಗ್ರಹಾರ ಹಾಗೂ ರಾಜ್ಯದ ಇತರೆ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು 'ದ ಫೆಡರಲ್ ಕರ್ನಾಟಕ' ವಿಸ್ತೃತ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

Read More
Next Story