
ತಾಲೂಕು ಆಸ್ಪತ್ರೆಗಳಲ್ಲಿ ಇನ್ನು 24x7 'ತ್ರಿವಳಿ ತಜ್ಞರ' ಸೇವೆ, ಸಚಿವ ಗುಂಡೂರಾವ್ ಭರವಸೆಯೇನು?
ತಾಲೂಕು ಆಸ್ಪತ್ರೆಗಳಿಗೆ ಪ್ರಾಥಮಿಕ ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್‌ಗಳನ್ನು ಬಳಸಿಕೊಳ್ಳಲಾಗುವುದು. ಆಸ್ಪತ್ರೆ ದೂರವಿದ್ದ ಕಡೆ ತಜ್ಞ ವೈದ್ಯರನ್ನ ಉಳಿಸಿಕೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜ್ಯದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ, ರಾಜ್ಯದ 148 ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಸ್ತ್ರೀರೋಗ, ಅರವಳಿಕೆ ಮತ್ತು ಮಕ್ಕಳ ತಜ್ಞರು ಲಭ್ಯವಿರಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
"ಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ವೈದ್ಯರು ಲಭ್ಯವಿಲ್ಲದೆ, ಬೇರೆ ಆಸ್ಪತ್ರೆಗೆ ಸಾಗಿಸುವಾಗ ಅವಘಡಗಳು ಸಂಭವಿಸುತ್ತಿವೆ ಎಂಬ ಆರೋಪಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ತಾಯಿ-ಶಿಶು ಮರಣ ಪ್ರಮಾಣವನ್ನು ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಲಕ್ಷಕ್ಕೆ 40ಕ್ಕೆ ಇಳಿಸುವ ಗುರಿಯೊಂದಿಗೆ ಈ 'ತ್ರಿವಳಿ ತಜ್ಞರ' ನೇಮಕಾತಿಗೆ ನಿರ್ಧರಿಸಲಾಗಿದೆ," ಎಂದು ಸಚಿವರು ತಿಳಿಸಿದರು.
ಸರ್ಕಾರದ ಹೊಸ ಯೋಜನೆ ಏನು?
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಮಹತ್ವದ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ 148 ತಾಲೂಕು ಆಸ್ಪತ್ರೆಗಳಲ್ಲಿ ಸ್ತ್ರೀರೋಗ, ಅರವಳಿಕೆ ಮತ್ತು ಮಕ್ಕಳ ವಿಭಾಗಗಳಿಗೆ ತಲಾ ಇಬ್ಬರು ತಜ್ಞ ವೈದ್ಯರನ್ನು ನೇಮಿಸಲಾಗುವುದು. ಈ ಮೂವರು ತಜ್ಞರ ಜೊತೆಗೆ, ಸ್ಕ್ಯಾನಿಂಗ್‌ನಂತಹ ತುರ್ತು ಸೇವೆಗಳಿಗಾಗಿ ಒಬ್ಬ ರೇಡಿಯಾಲಜಿಸ್ಟ್ ಕೂಡ ಕಡ್ಡಾಯವಾಗಿ ಲಭ್ಯವಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನರ್ಸ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ತಾಲೂಕು ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು. ಅಗತ್ಯವಿದ್ದರೆ, ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆಯೂ ನೇಮಕ ಮಾಡಿಕೊಳ್ಳಲಾಗುವುದು. ಈ ಎಲ್ಲಾ ಪ್ರಸ್ತಾವನೆಗಳಿಗೂ ಸಂಪುಟ ಸಭೆಯು ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ತಾಯಿ ಮರಣ ಪ್ರಮಾಣದಲ್ಲಿ ಕರ್ನಾಟಕದ ಸ್ಥಿತಿ
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಂತೆ, 2030ರ ವೇಳೆಗೆ ತಾಯಂದಿರ ಮರಣ ಪ್ರಮಾಣವನ್ನು ಪ್ರತಿ ಲಕ್ಷಕ್ಕೆ 70ಕ್ಕಿಂತ ಕಡಿಮೆ ಮಾಡಬೇಕಿದೆ. ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕವು ಈಗಾಗಲೇ ಈ ಗುರಿಯನ್ನು (ಪ್ರತಿ ಲಕ್ಷಕ್ಕೆ 68) ತಲುಪಿದೆ. ಆದರೂ, ನೆರೆಯ ರಾಜ್ಯಗಳಾದ ಕೇರಳ (30) ಮತ್ತು ತಮಿಳುನಾಡು (35)ಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಇನ್ನೂ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಈ ಹೊಸ ಕ್ರಮವು, ಈ ಅಂತರವನ್ನು ಕಡಿಮೆ ಮಾಡಿ, ತಾಯಂದಿರು ಮತ್ತು ಶಿಶುಗಳಿಗೆ ಸುರಕ್ಷಿತ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.