
ಎಐ ರಚಿತ ಚಿತ್ರ.
ಅನರ್ಹರಿಗೆ ಕೆಪಿಎಸ್‌ಸಿ ಸದಸ್ಯತ್ವ ನೀಡುವುದು ಸಂವಿಧಾನಕ್ಕೆ ಎಸಗುವ ಅಪಚಾರ: ಹೈಕೋರ್ಟ್ ಕಿಡಿ
ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನಡೆಸುತ್ತಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕೆಪಿಎಸ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಕಾನೂನು ಉಲ್ಲಂಘನೆಗಳ ಬಗ್ಗೆ ಕೆಂಡಾಮಂಡಲವಾಗಿರುವ ಕರ್ನಾಟಕ ಹೈಕೋರ್ಟ್, ಕೆಪಿಎಸ್‌ಸಿ ಅನರ್ಹರನ್ನು ನೇಮಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಬಗ್ಗೆ ಸತ್ಯಶೋಧನಾ ಸಮಿತಿ ರಚನೆ ಮಾಡುವ ಕಾರ್ಯವಿಧಾನದ ಬಗ್ಗೆ 15 ದಿನಗಳ ಒಳಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನಡೆಸುತ್ತಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ, ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಿಸುವಾಗ ಶೋಧನಾ ಸಮಿತಿ ರಚಿಸಿ, ಅಲ್ಲಿ ಶಿಫಾರಸು ಮಾಡುವ ಅರ್ಹರನ್ನು ಪರಿಗಣಿಸಬೇಕೇ ಹೊರತು, ವೆಂಕ, ಸೀನ, ನಾಣಿಯರನ್ನೆಲ್ಲಾ (ಅರ್ಹತೆ ಹೊಂದಿಲ್ಲದವರು) ನೇಮಿಸುವುದು ಸಂವಿಧಾನ ವಿರೋಧಿ ಎಂದು ಅಭಿಪ್ರಾಯಪಟ್ಟಿತು.
ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಸ್ಥಾನದಲ್ಲಿದ್ದವರನ್ನು ಸೇವೆಯಿಂದ ವಜಾಗೊಳಿಸುವ ಶಿಫಾರಸು ಮಾಡಲಾಗಿದೆ. ಆದರೆ ಆಡಳಿತಾತ್ಮಕ ನ್ಯಾಯಾಧಿಕರಣವು ಅದಕ್ಕೆ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ, ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಎರಡು ಅರ್ಜಿಗಳನ್ನು ಸಲ್ಲಿಸಿದ್ದರು ಅದರ ವಿಚಾರಣೆ ವೇಳೆ ಕೋರ್ಟ್ ನೇಮಕ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಹೈಕೋರ್ಟ್‌ನ ಉಲ್ಲೇಖಗಳೇನು?
"ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಸರ್ಕಾರ ಈಗ ಎಚ್ಚೆತ್ತುಕೊಂಡ, ಸಮರ್ಪಕ ಕಾರ್ಯವಿಧಾನದ ಮೂಲಕ ಶೋಧನಾ ಸಮಿತಿ ರಚಿಸಿ, ಅರ್ಹರನ್ನು ಸದಸ್ಯರಾಗಿ ನೇಮಿಸುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ 2000ರಡಿ ಕುಲಪತಿಗಳ ನೇಮಕಕ್ಕೆ ರಚಿಸಲಾಗುವ ಶೋಧನಾ ಸಮಿತಿಯ ಮಾದರಿಯಲ್ಲಿ ಈ ಸಮಿತಿಯನ್ನು ರಚಿಸುವುದು ಶ್ಲಾಘನೀಯ. ಆದರೆ ಅರ್ಹತೆಯಿಲ್ಲದವರನ್ನು ಸದಸ್ಯರಾಗಿ ನೇಮಿಸಿದರೆ ಹೇಗೆ ಎಂದು ಕೋರ್ಟ್ ಉಲ್ಲೇಖಿಸಿತು.
ಲತಾ ವಿರುದ್ಧದ ಕ್ರಮ
ಕೆಪಿಎಸ್‌ಸಿ ಮಾಜಿ ಕಾರ್ಯದರ್ಶಿ ಲತಾ ಕುಮಾರಿ ವಿರುದ್ಧ ಮುಖ್ಯಮಂತ್ರಿಯವರ ಪೂರ್ವಾನುಮತಿಯೊಂದಿಗೆ ಮಾರ್ಚ್ 25ರಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಇದಕ್ಕೆ ಲತಾ ಮಾರ್ಚ್ 28ರಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ತಿಳಿಸಿದರು. ಈ ವೇಳೆ ನ್ಯಾಯಪೀಠವು "ಸಕಾರಾತ್ಮಕ ಕ್ರಮ ಕೈಗೊಂಡು ಈ ಸಂಬಂಧದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ಹೇಳಿತು. .
"ಅದು ಅಗತ್ಯವಿಲ್ಲ" ಎಂದು ಅಡ್ವೊಕೇಟ್ ಜನರಲ್ ವಾದಿಸಿದಾಗ ಪೀಠವು, "ನ್ಯಾಯಾಲಯಗಳು ಪೆನ್‌ನಲ್ಲಿ ಆದೇಶ ಬರೆಯುವ ದಿನಗಳು ಮುಗಿದಿವೆ. ಈಗ ಆಸಿಡ್‌ನಲ್ಲಿ ಆದೇಶ ಬರೆಯಬೇಕಿದೆ. ಇದು ಏಕೈಕ ದಾರಿ ಉಳಿದಿದೆ. ಏಕೆಂದರೆ ನ್ಯಾಯಾಲಯಗಳಿಗೆ ಪೊಲೀಸ್ ಅಧಿಕಾರವಿಲ್ಲ. ಈಗ ಏನು ಮಾಡುವುದು" ಎಂದು ಪ್ರಶ್ನಿಸಿತು.
"ನ್ಯಾಯದಾನ ಖಾತರಿಪಡಿಸಲು ನ್ಯಾಯಮೂರ್ತಿಗಳಿಗೆ ತಮ್ಮದೇ ಆದ ಭಾಷೆ ಮತ್ತು ತಂತ್ರಗಳು ಗೊತ್ತು. ನಾವು ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾಗುವುದಿಲ್ಲ" ಎಂದೂ ನ್ಯಾಯಪೀಠ ಹೇಳಿತು.
ಜೈಲಿಗೆ ಕಳುಹಿಸುವ ಎಚ್ಚರಿಕೆ
ಮುಂದುವರಿದ ನ್ಯಾಯಪೀಠ, "ಮೂಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಬೇಕೆಂದು ಕೆಪಿಎಸ್‌ಸಿಗೆ ಮತ್ತೆ ಎಚ್ಚರಿಕೆ ನೀಡುತ್ತೇವೆ. ಇದರಲ್ಲಿ ಮುಂದೆ ವಿಫಲವಾದರೆ ಸಂಬಂಧಿತ ಅಧಿಕಾರಿಯನ್ನು ನ್ಯಾಯಾಲಯದಿಂದ ಜೈಲಿಗೆ ನೇರವಾಗಿ ಕಳುಹಿಸಲಾಗುವುದು. ದಾಖಲೆಗಳನ್ನು ಏಕೆ ಸಲ್ಲಿಸುತ್ತಿಲ್ಲ? ದಾಖಲೆಗಳನ್ನು ಮರೆಮಾಚುವ ಪ್ರಯತ್ನ ಆರಂಭವಾದರೆ ಅನುಮಾನ ಆಗುತ್ತದೆ " ಎಂದು ಕಠಿಣ ಎಚ್ಚರಿಕೆ ನೀಡಿತು.
ಸಿಬಿಐ ತನಿಖೆಗೆ ಎಜಿ ವಿರೋಧ
ಅರ್ಜಿದಾರರ ಪರ ಹಿರಿಯ ವಕೀಲರಾದ ಭಾಗವತ್ ಮತ್ತು ಲಕ್ಷ್ಮೀನಾರಾಯಣ ಅವರು, "ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಯಾವುದೇ ಆಕ್ಷೇಪವಿಲ್ಲ" ಎಂದು ವಾದಿಸಿದರೆ, ಎಜಿ ಶಶಿಕಿರಣ್ ಶೆಟ್ಟಿ, "ಪರೀಕ್ಷಾ ಅಕ್ರಮ ಸಂಬಂಧ 8 ಪ್ರಕರಣಗಳನ್ನು ಸಿಐಡಿ ಯಶಸ್ವಿಯಾಗಿ ತನಿಖೆ ನಡೆಸಿದ್ದು, ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಿಐಡಿಗೆ ಸಮರ್ಥ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪಿಎಸ್‌ಐ ನೇಮಕ ಹಗರಣ, ಪೊಲೀಸ್ ಪೇದೆ ನೇಮಕಾತಿ (65 ಪ್ರಕರಣ), ಎಸ್‌ಡಿಎ ಪರೀಕ್ಷೆಯಲ್ಲಿ ಅಕ್ರಮ (8 ಪ್ರಕರಣ), ಪ್ರೌಢಶಾಲಾ ಶಿಕ್ಷಕರ ಗ್ರೇಡ್-1 (3 ಪ್ರಕರಣ), ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ (5 ಪ್ರಕರಣ), ಉರ್ದು ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿ (1 ಪ್ರಕರಣ), ಬಿಟ್‌ಕಾಯಿನ್ ಪ್ರಕರಣ ಸೇರಿದಂತೆ ಸಿಐಡಿ ಯಶಸ್ವಿ" ಎಂದು ವಾದಿಸಿದರು.
ವಿಶೇಷ ತನಿಖಾ ದಳವನ್ನು ನ್ಯಾಯಾಲಯ ನೇಮಿಸಿದರೆ ಸರ್ಕಾರಕ್ಕೆ ಅಡ್ಡಿಯಿಲ್ಲವೇ ಎಂದು ಪ್ರಶ್ನಿಸಿದ ನ್ಯಾಯಪೀಠ, ಸಿಐಡಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಸೈಬರ್ ಅಪರಾಧ ವಿಭಾಗದ ಅನೂಪ್ ಶೆಟ್ಟಿ ಸೇರಿದಂತೆ ಹೆಸರುಗಳನ್ನು ಸಲ್ಲಿಸಿ ಎಂದು ಸೂಚಿಸಿತು.