‌ಸಂಡೂರು ಗಣಿ ಗುತ್ತಿಗೆ ಪ್ರಕರಣ | ಎಚ್ ಡಿ ಕೆ ವಿರುದ್ಧ ಪ್ರಾಸಿಕ್ಯೂಷನ್‌ ಕೋರಿಕೆಗೆ ವರ್ಷವಾದರೂ ಪ್ರತಿಕ್ರಿಯಿಸದ ರಾಜ್ಯಪಾಲರು!
x
ಹೆಚ್‌ ಡಿ ಕುಮಾರಸ್ವಾಮಿ

‌ಸಂಡೂರು ಗಣಿ ಗುತ್ತಿಗೆ ಪ್ರಕರಣ | ಎಚ್ ಡಿ ಕೆ ವಿರುದ್ಧ ಪ್ರಾಸಿಕ್ಯೂಷನ್‌ ಕೋರಿಕೆಗೆ ವರ್ಷವಾದರೂ ಪ್ರತಿಕ್ರಿಯಿಸದ ರಾಜ್ಯಪಾಲರು!

ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ


Click the Play button to hear this message in audio format

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 550 ಎಕರೆ ಗಣಿ ಭೂಮಿಯನ್ನು ಕಾನೂನುಬಾಹಿರವಾಗಿ ವಿನೋದ್‌ ಗೋಯಲ್‌ ಎಂಬವರಿಗೆ ಮಂಜೂರು ಮಾಡಲು ಸಹಕರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೃಹತ್‌ ಉದ್ದಿಮೆ ಮತ್ತು ಉಕ್ಕು ಸಚಿವ ಎಚ್‌ ಡಿ ಕುಮಾರಸ್ವಾಮಿ ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಮಂಜೂರಾತಿ ಕೋರಿ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗಳು 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿರುವುದು ಈಗ ಬಹಿರಂಗವಾಗಿದೆ.

2006ರಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಎಂಸಿಆರ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ, ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂಬುದು ಆರೋಪವಾಗಿದೆ. ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಮಾಲೀಕ ವಿನೋದ್‌ ಗೋಯಲ್‌ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಕೆ ಜಯಚಂದ್ರ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಬಿ ಟಿ ಜವರೇಗೌಡ ಸಹಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಿನೋದ್‌ ಗೋಯಲ್‌ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್‌ ಡಿ ಕುಮಾರಸ್ವಾಮಿ ಅವರನ್ನು ಎರಡನೇ ಆರೋಪಿಯೆಂದೂ, ಕೆ ಜಯಚಂದ್ರ ಹಾಗೂ ಜವರೇಗೌಡ ಅವರನ್ನು ಕ್ರಮವಾಗಿ ಮೂರು ಮತ್ತು ನಾಲ್ಕನೇ ಆರೋಪಿಗಳನ್ನಾಗಿ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 420, 465, 468, 409 ಜೊತೆಗೆ 120ಬಿ ಮತ್ತು ಐಪಿಸಿ ಸೆಕ್ಷನ್‌ 511, ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಮತ್ತು ಎಂಎಂಆರ್‌ಡಿ ಕಾಯಿದೆಯ ಸೆಕ್ಷನ್‌ಗಳಾದ 21(2) ಮತ್ತು 23 ಅಡಿ ದಾಖಲಾಗಿರುವ ಪ್ರಕರಣದಲ್ಲಿ ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲು ಪ್ರಾಸಿಕ್ಯೂಷನ್ ಮಂಜೂರಾತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು 2023ರ ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿದ್ದಾರೆ.‌

ಆದರೆ, ಕಳೆದ ಒಂದು ವರ್ಷದಿಂದ ರಾಜ್ಯಪಾಲರು ಈ ಮನವಿಗೆ ಯಾವುದೇ ಸ್ಪಂದನೆ ನೀಡದೇ ಅದನ್ನು ಮೂಲೆಗುಂಪು ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಪ್ರಾಸಿಕ್ಯೂಷನ್‌ ಕೋರಿಕೆಗೆ ಮಾತ್ರ ಅರ್ಜಿ ಸಲ್ಲಿಸಿದ 24 ತಾಸಿನಲ್ಲೇ ಸಿಎಂ ಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಎಚ್‌ ಡಿ ಕುಮಾರಸ್ವಾಮಿ ಪ್ರಕರಣದಲ್ಲಿ ಅವರ ನಿಲುವು ತೀವ್ರ ಚರ್ಚೆಗೆ ಒಳಗಾಗಿದೆ.

ಪ್ರಕರಣದ ಹಿನ್ನೆಲೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ ಪ್ರದೇಶದಲ್ಲಿ ಮೆಸರ್ಸ್‌ ಚೌಗಲೆ ಮತ್ತು ಕಂಪನಿಯು ಗಣಿಗಾರಿಕೆಗೆ ಮಂಜೂರಾತಿ ಪಡೆದು ಆನಂತರ ಸರ್ಕಾರಕ್ಕೆ 550 ಎಕರೆ ಪ್ರದೇಶಕ್ಕೆ ಗಣಿ ಗುತ್ತಿಗೆ ಮಂಜೂರಾತಿಗಾಗಿ 2006ರ ಏಪ್ರಿಲ್‌ ತಿಂಗಳಲ್ಲಿ ಒಟ್ಟು 29 ಅರ್ಜಿದಾರರು ತಮ್ಮ ಸಂಸ್ಥೆ, ಕಂಪನಿ ಹೆಸರಿನಲ್ಲಿ ಬೇರೆ ಬೇರೆ ವಿಸ್ತೀರ್ಣಗಳಿಗೆ ಅರ್ಜಿ ಸಲ್ಲಿಸಿದ್ದವು.

ಸದರಿ ಅರ್ಜಿಗಳಲ್ಲಿ ಮಹಾರಾಷ್ಟ್ರದ ಮೂಲದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಸೋಮನಾಥ ವಿ. ಸಾಕ್ರೆ ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಹೆಸರಿನಡಿ ಗಣಿ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸಾಕ್ರೆ ಮತ್ತು ರಾಜಕುಮಾರ್‌ ಅಗರವಾಲ್‌ ಎಂಬುವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಸಂಸ್ಥೆ ಆರಂಭಿಸಿದ್ದು, ಗಣಿ ಗುತ್ತಿಗೆ ಬಯಸಿ ಅರ್ಜಿ ಎರಡು ಡಿ ಡಿ/ ಚೆಕ್‌ಗಳನ್ನು 2006 ಏಪ್ರಿಲ್‌ 12ರಂದು ಬರೆದ ಪತ್ರ, ನಕಾಶೆಯೊಂದಿಗೆ 2006ರ ಏಪ್ರಿಲ್‌ 17ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಹೆಸರಿನಡಿ ಎಸ್‌ ವಿ ಸಾಕ್ರೆ ಸಲ್ಲಿಸಿದ್ದ ಅರ್ಜಿಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಸಂಸ್ಥೆಯ ರೂಪುರೇಷೆಗಳು ಹಾಗೂ ಪಾಲುದಾರರ ಬಗ್ಗೆ ಇರುವ ಅಸ್ಪಷ್ಪತೆಯ ಲಾಭ ಪಡೆಯುವ ಉದ್ದೇಶದಿಂದ ವಿನೋದ್‌ ಗೋಯಲ್‌ ಎಂಬ ವ್ಯಕ್ತಿಯು ಸರ್ಕಾರಿ ಅಧಿಕಾರಿಗಳಾದ ಜಯಚಂದ್ರ ಮತ್ತು ಜವರೇಗೌಡ ಜೊತೆ ಶಾಮೀಲಾಗಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಆ ದಾಖಲೆಗಳನ್ನು ಆಧರಿಸಿ, ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಹೆಸರಿಗೆ ಗಣಿ ಗುತ್ತಿಗೆ ನೀಡುವಂತೆ ಮತ್ತು ಎಸ್‌ ವಿ ಸಾಕ್ರೆ ಹೆಸರಿನ ಬದಲು ವಿನೋದ್‌ ಗೋಯೆಲ್‌ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಮಾಲೀಕರು ಎಂದು ಮಾಡಿ, ಆ ಮೂಲಕ ಗಣಿ ಗುತ್ತಿಗೆ ಪಡೆಯಲು ಯತ್ನಿಸಿದ್ದಾರೆ ಎಂಬುದು ಆರೋಪವಾಗಿದೆ.

ಇದಕ್ಕೂ ಮುನ್ನ, ವಿನೋದ್‌ ಗೋಯಲ್‌ ಅವರು ಗಣಿ ಗುತ್ತಿಗೆ ಬಯಸಿ ಈ ಹಿಂದೆ ಯಾವುದೇ ಅರ್ಜಿ ಸಲ್ಲಿಸದಿದ್ದರೂ ಸಹ ಅಂದಿನ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರೊಂದಿಗೆ ಒಳಸಂಚು ರೂಪಿಸಿದ್ದರ ಪರಿಣಾಮವಾಗಿ ಸಂಡೂರಿನ 550 ಎಕರೆ ಭೂಮಿಗೆ ಸಂಬಂಧಿಸಿದಂತೆ 2007ರ ಅಕ್ಟೋಬರ್‌ 5ರಂದು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಡತ ಸಲ್ಲಿಸಲು ನಿರ್ದೇಶಿಸಿದ್ದರು.

ಇದರಲ್ಲಿ ಗಣಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಸರ್ಕಾರದ ಕಾರ್ಯದರ್ಶಿಗಳು ಖನಿಜ ರಿಯಾಯಿತಿ ನಿಯಮಾವಳಿ 1960ರ ನಿಯಮ 59(2)ರ ಸಡಿಲಿಕೆಗೆ ಸ್ಪಷ್ಟ ಕಾರಣ ಇರುವುದಿಲ್ಲ. ಸ್ಪಷ್ಟ ಕಾರಣ ಇಲ್ಲದ ಹೊರತು ಸಡಿಲಿಕೆಗೆ ಪ್ರಸ್ತಾವ ಕಳುಹಿಸದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ ಎಂದು ನಮೂದಿಸಿ, ಕಡತವನ್ನು ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದರು.

ಆದರೆ, ಕುಮಾರಸ್ವಾಮಿ ಅವರು ಸರ್ಕಾರದ ಕಾರ್ಯದರ್ಶಿ ಅನುಮೋದನೆಗೆ ವ್ಯತಿರಿಕ್ತವಾಗಿ ಯಾವುದೇ ಕಾರಣ ನೀಡದೇ ಖನಿಜ ರಿಯಾಯಿತಿ ನಿಯಾವಳಿ 1960ಕ್ಕೆ ವಿರುದ್ಧವಾಗಿ 2007ರ ಅಕ್ಟೋಬರ್‌ 6ರಂದು ಕಡತದ ಟಿಪ್ಪಣಿಯಲ್ಲಿ “ನಾನು ದಾಖಲೆಗಳನ್ನು ಪರಿಶೀಲಿಸಿದ್ದೇನೆ. 550 ಎಕರೆ ಭೂಮಿಗೆ ಸಂಬಂಧಿಸಿದ ಗಣಿ ಗುತ್ತಿಗೆಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಮಂಜೂರು ಮಾಡಲಾಗಿದೆ" ಎಂದು ಬರೆದಿದ್ದರು. ಸದರಿ ಕಡತವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಕಳುಹಿಸಲಾಗಿತ್ತು.

ವಿನೋದ್‌ ಗೋಯಲ್‌ಗೆ ಗಣಿ ಗುತ್ತಿಗೆ ಮಂಜೂರು ಮಾಡುವ ಅಕ್ರಮ ಉದ್ದೇಶದಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾದ ಮೂರನೇ ಆರೋಪಿ ಜಯಚಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಜವರೇಗೌಡ ಹಾಗೂ ವಿನೋದ್‌ ಗೋಯಲ್‌ರೊಂದಿಗೆ ಅಕ್ರಮ ಒಳಸಂಚಿನಲ್ಲಿ ಶಾಮೀಲಾಗಿ ಕಡತದ ಟಿಪ್ಪಣಿಯಲ್ಲಿ ಟೈಪ್‌ ಮಾಡಿದ ಆದೇಶಕ್ಕೆ ಕುಮಾರಸ್ವಾಮಿ ಸಹಿ ಮಾಡಿದ್ದರು. ಗಣಿ ಗುತ್ತಿಗೆಯನ್ನು ಮೆಸರ್ಸ್‌ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಮಂಜೂರು ಮಾಡಿದೆ ಎಂದು ಬರೆದಿರುವುದಕ್ಕೆ ಜಯಚಂದ್ರ ಸೂಚನೆಗೆ ಮೇರೆಗೆ ವಿಷಯ ನಿರ್ವಾಹಕರಾದ ದತ್ತಾ ಪಟಗಾರ ಅವರು ವಿನೋದ್‌ ಗೋಯಲ್‌ ಪ್ರೊಪರೈಟರ್‌ ಎಂದು ಸೇರಿಸಿದ್ದರು ಎಂದು ತಿಳಿದು ಬಂದಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರ 2014ರ ಜನವರಿ 24ರಂದು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ, ಎಲ್ಲಾ ಗಣಿಗಾರಿಕೆ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಿತ್ತು. ಈ ಪ್ರಕರಣವನ್ನೂ ಎಸ್‌ಐಟಿ ತನಿಖೆ ನಡೆಸಿ, ಆರೋಪ ಪಟ್ಟಿ ಸಿದ್ಧಪಡಿಸಿದ್ದು, ಪ್ರಾಸಿಕ್ಯೂಷನ್ ಮಂಜೂರಾತಿಗೆ ಕೋರಿದೆ.

Read More
Next Story