
ಕನೇರಿ ಮಠದ ವೇದಿಕೆಯಿಂದ ಯಡಿಯೂರಪ್ಪ ವಿರೋಧಿ ಬಣದ ಶಕ್ತಿ ಪ್ರದರ್ಶನ?
ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಾಬಲ್ಯವನ್ನು ವಿರೋಧಿಸುವ ಗುಂಪು, ಸ್ವಾಮೀಜಿಗೆ ಬೆಂಬಲ ಸೂಚಿಸುವ ವೇದಿಕೆಯನ್ನು ಪ್ರಬಲವಾಗಿ ಬಳಸಿಕೊಂಡಿದೆ ಎನ್ನಲಾಗಿದೆ.
ಕೇವಲ ಧಾರ್ಮಿಕ ಹೇಳಿಕೆಗಳಿಂದ ಆರಂಭವಾದ ಕನೇರಿ ಮಠದ ವಿವಾದ ಇದೀಗ ಕರ್ನಾಟಕ ಬಿಜೆಪಿಯ ಆಂತರಿಕ ರಾಜಕೀಯದ ಹೊಸ ಅಖಾಡವಾಗಿ ಮಾರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರೋಧಿ ಬಣದ ನಾಯಕರು ಕನೇರಿ ಮಠದ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು, ರಾಜ್ಯ ಬಿಜೆಪಿಯ ಅಧಿಕಾರ ಸಮೀಕರಣಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ನೇರವಾಗಿಯೇ ದಾಳಿ ನಡೆಸುವ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಸಿ. ಟಿ. ರವಿ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಇತ್ತೀಚೆಗೆ ಬೆಳಗಾವಿಯ ಕನೇರಿ ಮಠದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು, ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅವರ ಭಾಗವಹಿಸುವಿಕೆಯು 'ಹಿಂದೂ ಅಸ್ಮಿತೆ'ಯ ಪ್ರತಿಪಾದನೆಯಾಗಿದ್ದರೂ, ರಾಜ್ಯ ಬಿಜೆಪಿಯೊಳಗಿನ ಆಂತರಿಕ ಅಧಿಕಾರ ರಾಜಕಾರಣದ ಚದುರಂಗದಾಟದ ಒಂದು ಭಾಗವಾಗಿದೆ ಎಂಬ ವಿಶ್ಲೇಷಣೆಗಳು ದಟ್ಟವಾಗಿವೆ.
ಸೈದ್ಧಾಂತಿಕ ಸಂಘರ್ಷ ಮತ್ತು ರಾಜಕೀಯ ಲಾಭ
ಬಸವಣ್ಣನವರ ತತ್ವಗಳ ಆಧಾರದ ಮೇಲೆ 'ಲಿಂಗಾಯತ'ವನ್ನು ಹಿಂದೂ ಧರ್ಮದಿಂದ ಪ್ರತ್ಯೇಕವಾದ, ಸ್ವತಂತ್ರ ಧರ್ಮವೆಂದು ಮಾನ್ಯತೆ ನೀಡಬೇಕೆಂದು ಹೋರಾಡುತ್ತಿರುವ ಪ್ರಗತಿಪರರ ಗುಂಪಿದೆ. ಮತ್ತೊಂದೆಡೆ, 'ವೀರಶೈವ-ಲಿಂಗಾಯತ'ರನ್ನು ಹಿಂದೂ ಧರ್ಮದ ಅವಿಭಾಜ್ಯ ಅಂಗವೆಂದು ಪರಿಗಣಿಸುವ, ಪ್ರತ್ಯೇಕತೆಯ ಕೂಗನ್ನು ವಿರೋಧಿಸುವ ಪ್ರಬಲ ಗುಂಪಿದೆ. ಕನೇರಿ ಮಠವು ಈ ಎರಡನೇ ಸಿದ್ಧಾಂತದ ಪ್ರಮುಖ ಪ್ರತಿಪಾದಕ. ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಯ ನಾಯಕರು ಭಾಗವಹಿಸಿದ ಸಭೆಯು ಇದೇ ಗುಂಪಿಗೆ ಸೇರಿದ್ದು. ಈ ಮೂಲಕ ಅವರು ರಾಜ್ಯ ಬಿಜೆಪಿಯ ಲಿಂಗಾಯತ ಪ್ರಾಬಲ್ಯವನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯೊಳಗಿನ ಅಧಿಕಾರ ರಾಜಕಾರಣದ ಪ್ರತಿಫಲನ
ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆಂದು ಬಿಂಬಿತವಾಗಿರುವ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಾಬಲ್ಯವನ್ನು ವಿರೋಧಿಸುವ ಗುಂಪು, ಸ್ವಾಮೀಜಿಗೆ ಬೆಂಬಲ ಸೂಚಿಸುವ ವೇದಿಕೆಯನ್ನು ಪ್ರಬಲವಾಗಿ ಬಳಸಿಕೊಂಡಿದೆ ಎನ್ನಲಾಗಿದೆ. ಕನೇರಿ ಮಠದ ಸಭೆಯ ಮೂಲಕ ಯಡಿಯೂರಪ್ಪ ವಿರೋಧಿ ಬಣಕ್ಕೆ ತಮ್ಮ ಶಕ್ತಿ ಪ್ರದರ್ಶಿಸಲು ಮತ್ತು ಪರ್ಯಾಯ ನಾಯಕತ್ವವನ್ನು ರೂಪಿಸಲು ಒಂದು ವೇದಿಕೆಯಾಗಿ ಬಳಕೆಯಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ವಿವಾದದ ಮೂಲವೇನು?
ಅಕ್ಟೋಬರ್ 9ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ, ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಕರ್ನಾಟಕದ ಕೆಲವು ಲಿಂಗಾಯತ ಮಠಾಧೀಶರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.'ಬಸವ ಸಂಸ್ಕೃತಿ ಅಭಿಯಾನ' ನಡೆಸುತ್ತಿದ್ದ ಲಿಂಗಾಯತ ಮಠಾಧೀಶರ ಒಕ್ಕೂಟವನ್ನು "ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರು" ಎಂದು ಜರಿದಿದ್ದರು.
"ಗುಡಿಯಲ್ಲಿ ದೇವರಿಲ್ಲ, ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ" ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಆ ಮಠಾಧೀಶರ ವಿರುದ್ಧ ಅತ್ಯಂತ ಅಸಭ್ಯ ಮತ್ತು ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಅನುಯಾಯಿಗಳಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಸಹ ಆರೋಪಿಸಲಾಗಿದೆ.
ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಹಲವು ಬಸವಪರ ಸಂಘಟನೆಗಳು ಸ್ವಾಮೀಜಿಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದವು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮತ್ತು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದವು. ರಾಜ್ಯ ಸರ್ಕಾರದ ಈ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದು, ಇದು ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಆರೋಪಿಸಿದ್ದರು.
ಸ್ವಾಮೀಜಿಗಳ ಪ್ರಚೋದನಕಾರಿ ಭಾಷಣದಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣ ನೀಡಿ, ವಿಜಯಪುರ ಜಿಲ್ಲಾಡಳಿತವು ಅವರಿಗೆ ಎರಡು ತಿಂಗಳ ಕಾಲ (ಡಿಸೆಂಬರ್ 14, 2025 ರವರೆಗೆ) ಜಿಲ್ಲಾ ಪ್ರವೇಶವನ್ನು ನಿಷೇಧಿಸಿತು. ಜಿಲ್ಲಾಡಳಿತದ ಆದೇಶವನ್ನು ಪ್ರಶ್ನಿಸಿ ಸ್ವಾಮೀಜಿಗಳು ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, "ತೀರಾ ಸಾಮಾನ್ಯ ಜನರು ಕೂಡ ಇಂತಹ ಭಾಷೆ ಬಳಸುವುದಿಲ್ಲ" ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಡಳಿತದ ಆದೇಶವನ್ನು ಎತ್ತಿಹಿಡಿಯಿತು.
ನಂತರ, ಸ್ವಾಮೀಜಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಆದರೆ, ಸುಪ್ರೀಂ ಕೋರ್ಟ್ ಕೂಡಾ ಅರ್ಜಿಯನ್ನು ವಜಾಗೊಳಿಸಿತು. "ಸ್ವಾಮೀಜಿಯಾಗಿ ನೀವು ಗಂಭೀರವಾಗಿರಬೇಕು. ಅವಹೇಳನಕಾರಿ ಮಾತು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ. ನೀವು ಮಾತನಾಡುವುದನ್ನು ನಿಲ್ಲಿಸಿ, ಮೌನವಾಗಿ ಧ್ಯಾನ ಮಾಡಿ" ಎಂದು ನ್ಯಾಯಪೀಠವು ಸಲಹೆ ನೀಡಿದೆ.

