
ಸಾಂದರ್ಭಿಕ ಚಿತ್ರ
Heart Attack|ಹಾಸನದಲ್ಲಿ ಹೃದಯಾಘಾತದಿಂದ ಯುವಕ ಸಾವು. ಮುನ್ನೆಚ್ಚರಿಕೆಗೆ ಸೂಚನೆ
ಸಂಜಯ್ ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದರು. ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಸ್ನೇಹಿತರು ಅವರನ್ನು ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಮಂಗಳವಾರ 27 ವರ್ಷದ ಯುವಕ ಸಂಜಯ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯೊಂದಿಗೆ, ಕಳೆದ 40 ದಿನಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿದೆ. ಆದರೆ, ಇವರಲ್ಲಿ ಎಲ್ಲರೂ ಯುವಕರಲ್ಲ. ಕೆಲವು ಹಿರಿಯ ನಾಗರಿಕರೂ ಸೇರಿದ್ದಾರೆ.
ಸಂಜಯ್ ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದರು. ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಸ್ನೇಹಿತರು ಅವರನ್ನು ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿದಾಗ ಅವರ ರಕ್ತದೊತ್ತಡ 220ಕ್ಕೂ ಅಧಿಕವಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ ತಕ್ಷಣವೇ ಸಂಜಯ್ ಮೃತಪಟ್ಟಿದ್ದರು.
ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಂಜಯ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಸಂಜಯ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.
ಮುನ್ನೆಚ್ಚರಿಕೆಗೆ ಸೂಚನೆ
ಹಾಸನ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿರುವುದು ದಾಖಲಾಗಿದೆ. ಬೇಲೂರಿನಲ್ಲಿ 50 ವರ್ಷದ ಗೃಹಿಣಿ ಲೇಪಾಕ್ಷಿ, ಹೊಳೆನರಸೀಪುರದ 58 ವರ್ಷದ ಪ್ರಾಧ್ಯಾಪಕ ಮುತ್ತಯ್ಯ, ನುಗ್ಗೇಹಳ್ಳಿ ನಾಡ ಕಚೇರಿಯ 57 ವರ್ಷದ ಡಿ-ಗ್ರೂಪ್ ನೌಕರ ಕುಮಾರ್ ಹಾಗೂ ಹಾಸನ ನಗರದ 63 ವರ್ಷದ ಆಟೋರಿಕ್ಷಾ ಚಾಲಕ ಸೂರ್ಯನಾರಾಯಣರಾವ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರೂ ಹಿರಿಯರೇ ಆಗಿದ್ದಾರೆ.
ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಅಸಹಜ ಸಾವು ಪ್ರಕರಣಗಳಲ್ಲಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಲು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲೆಯ ಆರೋಗ್ಯಾಧಿಕಾರಿಗಳು ಮತ್ತು ಹಿಮ್ಸ್ ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತುರ್ತು ಚಿಕಿತ್ಸೆಯ ತರಬೇತಿ ನೀಡುವುದು, ಹಾಗೂ ಶಾಲಾ ಮಕ್ಕಳು, ಸ್ಕೌಟ್ಸ್, ಗೈಡ್ಸ್ ಸ್ವಯಂಸೇವಕರ ಮೂಲಕ ಹೃದಯಾಘಾತದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.