BJP Infighting | ಯತ್ನಾಳ್‌ಗೆ ಮತ್ತೊಂದು ಶೋಕಾಸ್ ನೋಟಿಸ್; ಗಡುವಿನೊಳಗೆ ಉತ್ತರಿಸದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ
ಕೇಂದ್ರ ಸಚಿವ ವಿ.ಸೋಮಣ್ಣ ಅವರ ದೆಹಲಿ ಮನೆಯ ಗೃಹ ಪ್ರವೇಶಕ್ಕಾಗಿ ದೆಹಲಿಗೆ ತೆರಳಿದ ಹೊತ್ತಿನಲ್ಲೇ ಬಿಜೆಪಿ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿಮಾಡಿದೆ.
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಿರಂತರ ಟೀಕೆ ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿಯ ಕೇಂದ್ರ ಶಿಸ್ತು ಪಾಲನಾ ಸಮಿತಿ ಮತ್ತೊಂದು ಶೋಕಾಸ್ ನೋಟಿಸ್ ನೀಡಿದೆ.
ಸೋಮವಾರ ಕೇಂದ್ರ ಸಚಿವ ವಿ.ಸೋಮಣ್ಣ ಅವರ ದೆಹಲಿ ಮನೆಯ ಗೃಹ ಪ್ರವೇಶದ ಸಲುವಾಗಿ ತೆರಳಿದ್ದ ಯತ್ನಾಳ್‌ಗೆ ಶೋಕಾಸ್ ನೀಡಿರುವುದು ಭಿನ್ನರಲ್ಲಿ ಆತಂಕ ಸೃಷ್ಟಿಸಿದೆ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿರುವಾಗಲೇ ಶೋಕಾಸ್ ನೋಟಿಸ್ ನೀಡಿರುವುದು ಕುತೂಹಲ ಮೂಡಿಸಿದೆ.
ಸೋಮಣ್ಣ ಅವರ ಮನೆಯ ಗೃಹ ಪ್ರವೇಶ ನೆಪದಲ್ಲಿ ದೆಹಲಿಗೆ ತೆರಳಿದ್ದ ಯತ್ನಾಳ್ ಬಣದ ನಾಯಕರು ಕರ್ನಾಟಕ ಭವನದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ. ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತಟಸ್ಥ ಬಣ ಕೂಡ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, ತಟಸ್ಥ ಬಣದ ನಾಯಕರು ಕೂಡ ನಮ್ಮ ಜೊತೆಗಿದ್ದಾರೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.
72 ಗಂಟೆಗಳಲ್ಲಿ ಉತ್ತರಿಸಲು ಗಡುವು
ಬಿಜೆಪಿ ಶಿಸ್ತು ಪಾಲನಾ ಸಮಿತಿ ಎರಡನೇ ಬಾರಿಗೆ ಯತ್ನಾಳ್ ಅವರಿಗೆ ಶೋಕಾಷ್ ನೋಟಿಸ್ ನೀಡಿದ್ದು, 72 ಗಂಟೆಗಳೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ.
ಒಂದೊಮ್ಮೆ ನಿಗದಿತ ಗಡುವಿನಲ್ಲಿ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್ ಅವರು, ಶೋಕಾಸ್ ನೋಟಿಸ್ ನನ್ನ ಕೈಗೆ ತಲುಪಿಲ್ಲ ಎಂದು ಹೇಳಿದ್ದಾರೆ.
ವರಿಷ್ಠರ ಸೂಚನೆ ಏನು?
ಬಿಜೆಪಿಯ ಆಂತರಿಕ ಸಂವಿಧಾನದ ನಿಯಮಗಳಲ್ಲಿ ಪ್ರತಿಪಾದಿಸಲಾದ ಶಿಸ್ತು ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದೀರಿ. ನಿಮ್ಮ ನಿರಂತರ ಟೀಕೆ ಮತ್ತು ಶಿಸ್ತು ಉಲ್ಲಂಘನೆಯನ್ನು ಪಕ್ಷ ಗಮನಿಸಿದೆ. ಈ ಹಿಂದಿನ ಶೋಕಾಸ್ ನೋಟಿಸ್ ಸೂಚನೆಗೆ ನೀಡಿದ್ದ ಪ್ರತಿಕ್ರಿಯೆಯ ಹೊರತಾಗಿಯೂ ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದೀರಿ, ಹೀಗಿರುವಾಗ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂದು ಪ್ರಶ್ನಿಸಿ ನೋಟಿಸ್ ನೀಡಿದೆ.
ನೋಟಿಸ್ ಸ್ವೀಕರಿಸಿದ 72 ಗಂಟೆಗಳೊಳಗೆ ನಿಮ್ಮ ವಿವರಣೆಯು ಕೆಳಗೆ ಸಹಿ ಮಾಡಿದವರನ್ನು ತಲುಪಬೇಕು. ನಿಗದಿಪಡಿಸಿದ ಸಮಯದೊಳಗೆ ನಿಮ್ಮ ವಿವರಣೆ ನೀಡದೇ ಹೋದರೆ, ಕೇಂದ್ರ ಶಿಸ್ತು ಸಮಿತಿಯು ಕೊನೆಯ ಹಂತದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದರು. ಅದರಲ್ಲೂ ಯತ್ನಾಳ್ ಅವರು ಬಹಿರಂಗವಾಗಿ ಟೀಕೆ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ಕಳೆದ ಡಿಸೆಂಬರ್ ತಿಂಗಳಲ್ಲಿ ಶೋಕಾಸ್ ನೋಟಿಸ್ ನೀಡಿತ್ತು. ಆದರೆ, ಯತ್ನಾಳ್ ಅವರು ನೋಟಿಸ್ ಗೆ ಉತ್ತರ ನೀಡದೇ ಖುದ್ದು ಶಿಸ್ತು ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಿದ್ದರು.
ಚಿಕ್ಕಬಳ್ಳಾಪುರ ಅಧ್ಯಕ್ಷರ ನೇಮಕಕ್ಕೆ ತಡೆ
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಬಿ. ಸಂದೀಪ್ ನೇಮಕಕ್ಕೆ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ತಡೆ ನೀಡಿ ಆದೇಶ ಹೊರಡಿಸಿದ್ದಾರೆ.
ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಎಂದು ಸಂಸದ ಡಾ. ಕೆ. ಸುಧಾಕರ್ ಅವರು ಹೈ ಕಮಾಂಡ್ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೇಮಕಾತಿ ತಡೆ ಹಿಡಿಯಲಾಗಿದೆ.