ಆರು ದಿನ ಕೆಸರು ಮಣ್ಣಿನಲ್ಲಿ ಹುದುಗಿರುವ ಲಾರಿ; ಒಳಗೆ  ಸಿಲುಕಿರುವ ಚಾಲಕ ಮತ್ತೆ  ಬರುವನೆಂದು ಕಾದಿದೆ ಕುಟುಂಬ
x

ಆರು ದಿನ ಕೆಸರು ಮಣ್ಣಿನಲ್ಲಿ ಹುದುಗಿರುವ ಲಾರಿ; ಒಳಗೆ ಸಿಲುಕಿರುವ ಚಾಲಕ ಮತ್ತೆ ಬರುವನೆಂದು ಕಾದಿದೆ ಕುಟುಂಬ

ಅಂಕೋಲ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿತದ ಬಳಿಕ ಮಣ್ಣಿನೊಳಗೇ ಸಿಲುಕಿಕೊಂಡಿರುವ ಕೇರಳದ ಬೆಂಜ್‌ ಲಾರಿ ಹಾಗೂ ಅದರ ಒಳಗೆ ಇರುವ ಚಾಲಕ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಒಂದು ವೇಳೆ ಆತ ಬದುಕುಳಿದರೆ ಅದೊಂದು ಪವಾಡ ಸದೃಶ ಘಟನೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ‌ ಶಿರೂರಿನಲ್ಲಿ ಗುಡ್ಡಕುಸಿದು ಆರು ದಿನಗಳು ಕಳೆದರೂ ಚಾಲಕ‌ ಅರ್ಜುನ್ ಸಹಿತ ನಾಪತ್ತೆಯಾದ ಮೂವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಮಣ್ಣಿನೊಳಗೇ ಸಿಲುಕಿಕೊಂಡಿರುವ ಕೇರಳದ ಬೆಂಜ್‌ ಲಾರಿ ಇನ್ನೂ ಕೆಸರಿನಲ್ಲೇ ಸಿಲುಕಿಕೊಂಡಿರುವುದರಿಂದ ಆತ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಒಂದು ವೇಳೆ ಆತ ಬದುಕುಳಿದರೆ ಅದೊಂದು ಪವಾಡ ಸದೃಶ ಘಟನೆಯಾಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ನಡುವೆ ಮಗ ಬದುಕಿ ಬರುತ್ತಾನೆ ಎಂಬ ಆಸೆಹೊತ್ತು ಆತನ ಕುಟುಂಬದವರು ಅಂಕೋಲಾದ ಘಟನಾ ಸ್ಥಳಕ್ಕೆ ಬಂದು ಕಾದು ಕುಳಿತಿದ್ದಾರೆ. ಲಾರಿ ಚಾಲಕ ಅರ್ಜುನ್ ಮೂಲತಃ ಕೇರಳದ ಕೋಯಿಕ್ಕೊಡು ಮೂಲದವನು. ಕೇರಳ ಮೂಲದ ಮುನಾಫ್ ಒಡೆತನದ KA-15-A7427 ಬಿಳಿ ಬಣ್ನದ ಭಾರತ್ ಬೆಂಜ್ ಲಾರಿ ಚಾಲಕನಾಗಿ ಕೆಲಸಮಾಡುತ್ತಿದ್ದ. ಶಿರೂರಿನಲ್ಲಿ ಗುಡ್ಡ ಕುಸಿದು ನಾಪತ್ತೆಯಾಗಿರುವಯೊಳಗಿದ್ದ ಮಗನ ಹುಡುಕಾಟದಲ್ಲಿ ನಡುವೆ ಆತನ ಕುಟುಂಬ ಕೇರಳದಿಂದ ಘಟನಾ ಸ್ಥಳಕ್ಕೆ ಆಗಮಿಸಿ ಕಾದು ಕುಳಿತಿದೆ.

ಅರ್ಜುನ್‌ ತನ್ನ ಪುಟ್ಟ ಸಂಸಾರದೊಂದಿಗೆ

ಅರ್ಜುನ ಆ ಕುಟುಂಬಕ್ಕೆ ಆಸರೆಯಾಗಿದ್ದು ಇದುವರೆಗೂ ಪತ್ತೆಯಾಗದೆ ಇರುವುದರಿಂದ ಕುಟುಂಬದ ಸದಸ್ಯರು ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ಶುಕ್ರವಾರ ಬೆಳಗಿನವರೆಗೂ ಚಾಲಕ ಅರ್ಜುನನ ಮೊಬೈಲ್ ಫೋನ್ ರಿಂಗಣಿಸುತ್ತಲೇ ಇತ್ತು. ಶಿರೂರು ವ್ಯಾಪ್ತಿಯಲ್ಲಿ ಲೊಕೇಶನ್‌ ತೋರಿಸುತ್ತಿತ್ತು. ಆದರೆ ಸಾಕಷ್ಟು ಕಾರ್ಯಾಚರಣೆ ನಡೆಸಿದರೂ ಲಾರಿ ಪತ್ತೆಯಾಗಿಲ್ಲ.

ಅರ್ಜುನ ಈ ಭೂಕುಸಿತದಲ್ಲಿ ಸಿಲುಕಿಹಾಕಿಕೊಂಡ ಸುದ್ದಿ ಕೇಳಿದ ತಕ್ಷಣ ಕುಟುಂಬ ಸದಸ್ಯರು ಲಕ್ಷ್ಮಣ ನಾಯ್ಕ್ (ಭೂಕುಸಿತದಲ್ಲಿ ಕುಟುಂಬ ಸಮೇತ ಸಿಲುಕಿ ಮೃತರಾದವರು) ಅಂಗಡಿಯ ಎದುರಿನ ಮನೆಗೆ ಕೊನೆಯ ಕರೆ ಮಾಡಿದರು. ಆದರೆ ಇಲ್ಲಿ ನಡೆದ ದುರ್ಘಟನೆಯಿಂದ ಉಂಟಾದ ಗೊಂದಲದ ವಾತಾವರಣದಲ್ಲಿ ಫೋನ್ ಗೆ ಯಾರು ಸ್ಪಂದಿಸಲಿಲ್ಲ. ಆದ ಕಾರಣ ಆತಂಕಗೊಂಡ ಕುಟುಂಬಸ್ಥರು ಕೇರಳದಿಂದ ಅಂಕೋಲಾಕ್ಕೆ ಬಂದಿದ್ದಾರೆ.

ಈ‌ ಶುಕ್ರವಾರ ಬೆಳಗ್ಗಿನ ವರೆಗೂ ಅರ್ಜುನನ ಮೊಬೈಲ್‌ ರಿಂಗ್‌ ಆಗಿದ್ದಾಗಿ ಮಾಹಿತಿ ದೊರೆತ ಕಾರಣ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಭರದಿಂದ ಕಾರ್ಯಾಚರಣೆ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಮೇಲೆ ಟನ್ ಗಟ್ಟಲೆ ಮಣ್ಣು ಹಾಗೂ ಬಂಡೆ ಕಲ್ಲು ಬಿದ್ದಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ತಮ್ಮ ಕುಟುಂಬದ ಸದಸ್ಯ ಬದುಕಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಅರ್ಜುನ್‌ ಕುಟುಂಬ ಸದಸ್ಯರು ಮತ್ತು ಗೆಳೆಯರು ಕಾದು ಕುಳಿತಿದ್ದಾರೆ.

ಗುಡ್ಡ ಕುಸಿದು ಮಣ್ಣಿನಲ್ಲಿ ಹೂತು ಹೋದ ಲಾರಿ

ಬೆಂಜ್ ಲಾರಿಯೊಂದು ಕೆಸರಿನಲ್ಲಿ ಸಿಲುಕಿಕೊಂಡಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ. ಬೆಂಝ್ ಲಾರಿ ಹಾಗೂ ಚಾಲಕ ಸಿಲುಕಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ಲೋಹ ಶೋಧಕ ಯಂತ್ರದ ಸಹಾಯದಿಂದ ಲಾರಿಯಿರುವ ಜಾಗ ಪತ್ತೆ ಮಾಡಿ ಲಾರಿಯನ್ನು ಹೊರ ತೆಗೆಯಲು ಪ್ರಯತ್ನ ಮಾಡಲಾಗುತ್ತಿದೆ. ಲಾರಿ ಶಿರೂರಿನಲ್ಲಿದೆ ಎಂದು ಜಿಪಿಎಸ್ ನಲ್ಲಿ ಗೊತ್ತಾಗಿದೆ. ದಾಂಡೇಲಿಯಿಂದ ಕೇರಳಕ್ಕೆ ಸಾಗುವಾನಿ ಸಾಗಿಸುತ್ತಿದ್ದ ಲಾರಿಯನ್ನು ಶಿರೂರು ಬಳಿ ಚಾಲಕ ನಿಲ್ಲಿಸಿ ಹೋಟೆಲ್‌ಗೆ ಟೀ ಕುಡಿಯಲು ಹೋಗಿದ್ದ ಎನ್ನಲಾಗಿದೆ. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಲಾರಿ ಸಂಪೂರ್ಣ ಮಣ್ಣಿನಲ್ಲಿ ಹೂತು ಹೋಗಿದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಇದ್ದರೂ ಪ್ರಯೋಜನವಿಲ್ಲ

ಅತ್ಯಾಧುನಿಕ ತಂತ್ತಜ್ಞಾನ ಹಾಗೂ ಯಂತ್ರೋಪಕರಣಗಳು ಲಭ್ಯವಿರುವ ಈ ಕಾಲದಲ್ಲಿ ಕೇರಳ‌ ಮೂಲದ ಚಾಲಕ ಅರ್ಜುನ್ ಅವರನ್ನು ಪತ್ತೆ ಮಾಡಲು ವಿಳಂಬ ನೀತಿ ಅನುಸರಿಸಿದ ರಾಜ್ಯಸರ್ಕಾರದ ಕಾರ್ಯವೈಖರಿ ವಿರುದ್ದ‌ ಕೇರಳ ಸಹಿತ ಕರ್ನಾಟಕದಲ್ಲೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅನಾಹುತ ನಡೆದ ನಂತರ ವಿಳಂಬವಾಗಿ ಪರಿಹಾರ ಕಾರ್ಯಚರಣೆ ಆರಂಭಿಸಿದ ರಾಜ್ಯಸರ್ಕಾರ ನಾಲ್ಕು ದಿನಗಳ ನಂತರ (July 19) ಜಿಪಿಎಸ್, ಲೋಹ ಶೋಧಕ ಹಾಗೂ ರಾಡಾರ್ ತಂತಜ್ಞಾನದ ಮೂಲಕ ಮಣ್ಣಿನಲ್ಲಿ ಹುದುಗಿರುವ ಕೇರಳ ಮೂಲದ ಅರ್ಜುನ್‌ ಇರುವ ಬೆಂಜ್ ಲಾರಿ ಪತ್ತೆ ಮಾಡುವ ಕಾರ್ಯಮಾಡಿದೆ ಆದರೆ ಮಣ್ಣನು ತೆರವು ಮಾಡಿ ಅರ್ಜುನನ್ನು ರಕ್ಷಿಸುವ ಕಾರ್ಯ ಇನ್ನಷ್ಟು ವಿಳಂಬವಾಗುತ್ತಿರುವುದು ಅರ್ಜುನ್ ಜೀವಂತ ಇರುವ ಕುರಿತು ಆತಂಕ ಹೆಚ್ಚಾಗುವಂತೆಮಾಡಿದೆ. ಸತತ ಕಾರ್ಯಾಚರಣೆ ಬಳಿಕ ಈ ವರೆಗೂ ಶೇ.75ರಷ್ಟು ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಭಾರೀ ಮಳೆಯ ಮಧ್ಯೆಯೂ ಕಾರ್ಯಾಚರಣೆ ಚುರುಕುಗೊಂಡಿದೆ

ಇನ್ನೊಂದು ದೂರು ದಾಖಲು

ಈ ನಡುವೆ ಗೋಕರ್ಣ ಬಳಿಯ ಗಂಗೆಕೋಳದ ಯುವಕ ಲೋಕೇಶ್ ನಾಪತ್ತೆಯಾಗಿದ್ದು ಪತ್ತೇಮಾಡಿಕೊಡುವಂತೆ ತಾಯಿ ಮಾದೇವಿ ಅಂಕೋಲಾ‌ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಐದು ದಿನಗಳಿಂದ ಮಗ ಮನೆಗೆ ಬಂದಿಲ್ಲ ಗುಡ್ಡ ಕುಸಿದ ದಿನ ಲೋಕೇಶ್ ಲಕ್ಷ್ಮಣ ನಾಯ್ಕ್ ಅವರ ಹೊಟೇಲ್ ನಲ್ಲಿ ಇದ್ದರಂತೆ ಎಂದು ತಾಯಿ ಮಾದೇವಿ ದೂರಿನಲ್ಲಿ ತಿಳಿಸಿದ್ದಾರೆ.

ಗುಡ್ಡಕುಸಿತದ ಘಟನೆಯಲ್ಲಿ ನಾಪತ್ತೆಯಾದ ಹೊಟೇಲ್ ಮಾಲಿಕ ಲಕ್ಷ್ಮಣ ನಾಯ್ಕ್ ಅವರ ಭಾವ ಜಗನ್ನಾಥ್ ಇನ್ನೂ ಪತ್ತೆಯಾಗದಿರುವುದು ಕುಟುಂಬದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಅಪ್ಪನನ್ನು ಪತ್ತೆಮಾಡಿಕೊಡುವಂತೆ ಜಗನ್ನಾಥ್ ನಾಯ್ಕ್ ಅವರ ಮೂವರು ಹೆಣ್ಣುಮಕ್ಕಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಲಕ್ಷ್ಮಣ ನಾಯ್ಕ್ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಭಾವ ಜಗನ್ನಾಥ್ ನಾಯ್ಕ್ ದುರ್ಘಟನೆ ನಡೆದ ದಿನ ಹೊಟೇಲ್ ಕೆಲಸಕ್ಕೆ ಹೋಗಿದ್ದರು. ದುರಂತದಲ್ಲಿ ಅವರು ನಾಪತ್ತೆಯಾಗಿದ್ದು ಶೀಘ್ರ ಪತ್ತೆ ಮಾಡಿಕೊಡುವಂತೆ ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗುಡ್ಡ ಕುಸಿದ ಸ್ಥಳಕ್ಕೆ ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದರರು. ಮಣ್ಣಿನಡಿ ಸಿಲುಕಿದ ಭಾರತ್ ಬೆಂಜ್ ಲಾರಿಯಲ್ಲಿರುವ ಚಾಲಕ ಅರ್ಜುನ್ ಬದುಕಿಬರುತ್ತಾರೆ ಎಂದು‌ ಶಾಸಕ ಎ.ಕೆ.ಎಂ. ಅಶ್ರಫ್ ಮಾಧ್ಯಮ ಪ್ರತಿನಿಧಿಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೆರಡು ದಿನ ಅಂಕೋಲದಲ್ಲಿಯೇ ವಾಸ್ತವ್ಯಮಾಡುತ್ತೇನೆ. ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ತಿರ ಮನವಿ ಮಾಡಿದ್ದೇನೆ ಎಂದು ಎ.ಕೆ.ಎಮ್. ಅಶ್ರಫ್ ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ವೇಣುಗೋಪಾಲ್ ಅವರು ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಿ ರಕ್ಷಣಾ ಕಾರ್ಯಕ್ಕೆ ರಕ್ಷಣಾ ಪಡೆಯ ನೆರವು ಕೇಳಿದ್ದಾರೆ ಎಂದು ಅಶ್ರಫ್ ಹೇಳಿದರು.

ಮಾಂಕಾಳ್ ವೈದ್ಯ ಸ್ಪಷ್ಟನೆ

ರಕ್ಷಣಾ ಕಾರ್ಯಚರಣೆಯ ಸ್ಥಳದಲ್ಲಿ ಬಿಡುಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಚರಣೆಗೆ ಅಡಚಣೆಯಾಗುತ್ತಿದೆ. ಕುಸಿದ ಗುಡ್ಡದ ಮಣ್ಣು ಸಂಪೂರ್ಣವಾಗಿ ತೆರವುಗೊಳಿಸಲು 15 ದಿನಗಳಾದರೂ ಬೇಕಾಗಬಹುದು. ಈಗಾಗಲೆ ಹೆದ್ದಾರಿಯ ಮೇಲಿನ ಮಣ್ಣು ತೆರವುಗೊಳಿಸಲಾಗಿದೆ. ಗುಡ್ಡ ಕುಸಿಯುವ ಅಪಾಯವಿರುವುದರಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಚಾಲಕ ಅರ್ಜುನ್ ಸಹಿತ ನಾಪತ್ತೆಯಾದವರ ಪತ್ತೆಗೆ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಸದಸ್ಯರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದರು.

Read More
Next Story