ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವನಾಥ್ ಬಂಧನ
x

ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವನಾಥ್ ಬಂಧನ


ನೇಹಾ ಹತ್ಯೆ ಬಳಿಕ ಹುಬ್ಬಳ್ಳಿ ನಗರವನ್ನೇ ಬೆಚ್ಚಿಬೀಳಿಸಿದ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವನಾಥ್ ಸಾವಂತ್‌ನನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ಕಳೆದ ಬುಧವಾರ (ಮೇ 15) ಬೆಳಗಿನ ಜಾವ ವಿಶ್ವನಾಥ್ ಸಾವಂತ್ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ಹುಬ್ಬಳ್ಳಿ ಪೊಲೀಸರು ಆರೋಪಿ ವಿಶ್ವನಾಥ್ ಸಾವಂತ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದೀಗ ದಾವಣಗೆರೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೊಲೆ ಮಾಡುವುದಕ್ಕೆ ಮುನ್ನ ವಿಶ್ವನಾಥ್ ಸಾವಂತ್‌, ತನ್ನ ಮೊಬೈಲ್ ನಲ್ಲಿ ಮಾತನಾಡಿದ್ದ ಆತನ ಒಡನಾಟದಲ್ಲಿದ್ದ ಮೂವರನ್ನು ಕರೆದು ತೀವ್ರ ವಿಚಾರಣೆ ನಡೆಸಿದ್ದರು. ಅದರ ಸುಳಿವಿನ ಆಧಾರದಲ್ಲಿ ಇದೀಗ ವಿಶ್ವನಾಥ್ ನನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತೆ ರೇಣುಕಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ʻʻಅಂಜಲಿಯನ್ನು ಹತ್ಯೆಗೈದ ನಂತರ ಆರೋಪಿ ವಿಶ್ವನಾಥ್ ಬೆಂಗಳೂರು ಮೂಲಕವಾಗಿ ರೈಲಿನಲ್ಲಿ ಗೋವಾಕ್ಕೆ ಹೋದ ನಂತರ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದನು. ರೈಲಿನಲ್ಲಿ ಪ್ರಯಾಣಿಸುತ್ತಿರುವ ಕುರಿತು ಮಾಹಿತಿ ಸಿಕ್ಕ ಹುಬ್ಬಳ್ಳಿ ಪೊಲೀಸರು ದಾವಣಗೆರೆಯಲ್ಲಿ ಅವನನ್ನು ಬಂಧಿಸಲು ಯತ್ನಿಸುವ ವೇಳೆ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ರೈಲಿನಿಂದ ಬಿದ್ದ ರಭಸಕ್ಕೆ ಆತನಿಗೆ ಗಾಯಗಳಾಗಿವೆ. ಆತನ ಮುಖ ಮತ್ತು ತಲೆಗೆ ಗಂಭೀರ ಗಾಯವಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆʼʼ ಎಂದು ತಿಳಿಸಿದರು.‌

ಘಟನೆ ಹಿನ್ನೆಲೆ

ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ಬುಧವಾರ (ಮೇ 15) ಬೆಳಗಿನ ಜಾವ ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದನು.

ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಅಂಜಲಿ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ಆ ವಿಷಯದಲ್ಲೇ ಕಳೆದ ವಾರ ಆತ ಆಕೆಗೆ ಬೆದರಿಕೆ ಹಾಕಿದ್ದ. ತನ್ನ ಜೊತೆ ಬರದೇ ಇದ್ದರೆ ನೇಹಾ ಹತ್ಯೆಯ ರೀತಿಯೇ ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಅಂಜಲಿ ಮನೆಯವರು ತಮ್ಮ ವ್ಯಾಪ್ತಿಯ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅವರನ್ನು ನಿಮ್ಮ ಭ್ರಮೆ‌ ಅದು ಎಂದು ಸಾಗಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬುಧವಾರ ಬೆಳಗಿನ ಜಾವ ಆರೋಪಿ ವಿಶ್ವ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದ್ದಾನೆ. ಅಂಜಲಿಯೇ ಬಾಗಿಲು ತೆರೆದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಎಂದು ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದಾನೆ.

ಆರೋಪಿ ವಿಶ್ವನ ಈ ಕೃತ್ಯವನ್ನು ತಡೆಯಲು ಅಂಜಲಿ ಕುಟುಂಬಸ್ಥರು ಮುಂದಾದಾಗ, ಅಂಜಲಿಯನ್ನು ಮನೆಯ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾನೆ. ಅಂಜಲಿ ಸತ್ತ ಬಳಿಕ ಅಲ್ಲಿಂದ ಪರಾರಿಯಾಗಿದ್ದನು.

Read More
Next Story