ಅಂಜಲಿ ಕೊಲೆ| ಮಾಹಿತಿಯಿದ್ದರೂ ನಿರ್ಲಕ್ಷ್ಯ; ಅಮಾನತಾದ ಪೊಲೀಸ್‌ ಅಧಿಕಾರಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ
x

ಅಂಜಲಿ ಕೊಲೆ| ಮಾಹಿತಿಯಿದ್ದರೂ ನಿರ್ಲಕ್ಷ್ಯ; ಅಮಾನತಾದ ಪೊಲೀಸ್‌ ಅಧಿಕಾರಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆ


ಮೊದಲೆ ಮಾಹಿತಿಯಿದ್ದರೂ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆಯಾಗುವುದನ್ನು ತಪ್ಪಿಸಲುವಲ್ಲಿ ನಿರ್ಲಕ್ಷ್ಯ ತೋರಿದ ಆರೊಪ ಹೊತ್ತಿರುವ ಹುಬ್ಬಳ್ಳಿಯ ಪೊಲೀಸ್‌ ಅಧಿಕಾರಿಗಳು ಒಬ್ಬೊಬ್ಬರಾಗಿ ಸೇವೆಯಿಂದ ಅಮಾನತುಗೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚತ್ತುಕೊಂಡಿರುವ ಗೃಹ ಇಲಾಖೆ ಕರ್ತವ್ಯ ಲೋಪಗೈದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾಗಿದೆ. ಈ ಪರಿಣಾಮವಾಗಿ ಈಗ ಹುಬ್ಬಳ್ಳಿ ನಗರದ ದಕ್ಷಿಣ ಉಪ ವಿಭಾಗದ ಎಸಿಪಿ ವಿಜಯಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಕೆಲ ದಿನಗಳ ಮುನ್ನ ಹುಬ್ಬಳ್ಳಿ ನಗರದ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ. ರಾಜೀವ್‌ ಅವರನ್ನು ಅಮಾನತುಗೊಳಿಸಲಾಗಿತ್ತು.

ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್‌ ಸಿ.ಬಿ. ಚಿಕ್ಕೋಡಿ, ಮಹಿಳಾ ಮುಖ್ಯಪೇದೆ ರೇಖಾ ಅವರನ್ನೂ ಪೊಲೀಸ್‌ ಆಯುಕ್ತರಾದ ರೇಣುಕಾ ಸುಕುಮಾರ ಅವರು ಅಮಾನತುಗೊಳಿಸಿ ಆದೇಶ ಹೊರಿಡಿಸಿದ್ದರು. ಇದರಿಂದ ಒಟ್ಟು ನಾಲ್ಕು ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಂತಾಗಿದೆ.

ಹುಬ್ಬಳ್ಳಿಯ ವೀರಾಪುರಗುಡಿ ಓಣಿ ನಿವಾಸಿ ಅಂಜಲಿ ಅಂಬೀಗೇರ (೨೦) ಎಂಬ ಯುವತಿಯನ್ನು ಗಿರೀಶ ಸಾವಂತ (೨೧) ಎಂಬ ಯುವಕ ತನ್ನ ಪ್ರೇಮ ನಿರಾಕರಿಸಿದ ಕಾರಣಕ್ಕೆ ಮೇ ೧೫ ರಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಅಂಜಲಿ ಕೊಲೆ ಮಾಡಿದ ಆರೋಪಿಯನ್ನು ಮೇ 16ರ ಗುರುವಾರ ತಡರಾತ್ರಿ ದಾವಣಗೆರೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸಿದ್ದರು. ಅಂಜಲಿ ಕೊಲೆಗೈದ ಬಳಿಕ ಆರೋಪಿ ಗಿರೀಶ್ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೊರಟಿದ್ದನು. ಇದೇ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತನನ್ನು ಹಿಡಿದ ಸಾರ್ವಜನಿಕರು ಥಳಿಸಲು ಮುಂದಾದರು. ಇದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪ ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದು ಗಾಯಗೊಂಡಿದ್ದ ಆತನನ್ನು ಪೊಲೀಸರ ವಶಕ್ಕೆ ಪಡೆಯಲಾಗಿತ್ತು. ಇತ್ತೀಚೆಗೆ ಅಂಜಲಿ ಸೋದರಿ ಅಕ್ಕನ ಸಾವಿನಿಂದ ನೊಂದು ಆತ್ಮಹತ್ಯೆಗೆ ಯತ್ನ ನಡೆಸಿದ್ದಳು. ಈ ಘಟನೆಯಿಂದ ಪೊಲೀಸ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದರು.

ಅಂಜಲಿ ಕೊಲೆಯಾಗುವುದಕ್ಕೆ ಕೆಲವು ವಾರಗಳ ಹಿಂದೆ ಅದೇ ಓಣಿಯ ನಿವಾಸಿ ನೇಹಾ ಎಂಬ ಯುವತಿಯನ್ನು ಯುವಕನೊಬ್ಬ ಇರಿದು ಕೊಲೆ ಮಾಡಿದ್ದ. ಕೆಲ ದಿನಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ (16) ಎಂಬವಳನ್ನು ಮೊಣ್ಣಂಡ ಪ್ರಕಾಶ್ (34) ತಲೆ ಕತ್ತರಿಸಿ ಹತ್ಯೆ ಮಾಡಿದ್ದ. ಈ ತ್ರಿವಳಿ ಘಟನೆಗಳಾದ ಬಳಿಕ ಗೃಹ ಇಲಾಖೆ ಮತ್ತು ಪೊಲೀಸರು ಸಾರ್ವಜನಿಕರ ಟೀಕೆಗೆ ಒಳಗಾಗಿದ್ದರು. ಬಳಿಕ ಗೃಹ ಇಲಾಖೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾಗಿದೆ. ನೇಹಾ ಮತ್ತು ಅಂಜಲಿ ಕೊಲೆ ಪ್ರಕರಣಗಳನ್ನು ಈಗ ಪ್ರತ್ಯೇಕವಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ.

Read More
Next Story