ಅಂಜಲಿ ಹತ್ಯೆ ಪ್ರಕರಣ | ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು
x

ಅಂಜಲಿ ಹತ್ಯೆ ಪ್ರಕರಣ | ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು


ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು, ಆರೋಪಿ ಗಿರೀಶ್​ ಸಾವಂತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು.

ಅಂಜಲಿ ಹತ್ಯೆ ನಡೆದ ನಗರದ ವೀರಾಪೂರ ಓಣಿಯಲ್ಲಿರುವ ಮನೆಗೆ ಆರೋಪಿಯನ್ನು ಕರೆತಂದ ಸಿಐಡಿ ಅಧಿಕಾರಿಗಳು, ಘಟನಾ ಸ್ಥಳ ಹಾಗೂ ಸುತ್ತಲಿನ ಪ್ರದೇಶ ಪರಿಶೀಲಿಸಿದರು. ಆರೋಪಿ ಗಿರೀಶ್, ಅಂಜಲಿ ಮನೆಯತ್ತ ಬರುತ್ತಿದ್ದಂತೆ ಅಂಜಲಿ‌ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಿಐಡಿ ಅಧಿಕಾರಿಗಳು ಕುಟುಂಬಸ್ಥರನ್ನು ಸಮಾಧಾನಪಡಿಸಿದರು.

ಅಂಜಲಿ ಕೊಲೆ‌ಗೆ ಗಿರೀಶ್​ ಸಾವಂತ ಬಳಸಿದ್ದ ಚಾಕು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಇಂದು ವೀರಾಪೂರ ಓಣಿಯ ಸುತ್ತಾಮುತ್ತ ಚಾಕು ಪತ್ತೆಗೆ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದರು. ಬಿಜೆಪಿ ಯುವ ಮುಖಂಡ ಅನೂಪ ಬಿಜವಾಡ ಮನೆಯಲ್ಲಿ ಸುಮಾರು ನಾಲ್ಕು ಗಂಟೆಯವರೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

ಸಿಐಡಿ ಎಸ್.ಪಿ. ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಆರೋಪಿಯನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ಇಲ್ಲಿನ ಜೆಎಂಎಫ್ ನ್ಯಾಯಾಲಯ ಗುರುವಾರ ಆದೇಶಿಸಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ತನಿಖೆ ವೇಳೆ ಆರೋಪಿಯು ಹತ್ಯೆಗೆ ಕಾರಣ ಏನು ಎನ್ನುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ʻʻನಾನು ಮೈಸೂರಿಗೆ ಬಾ ಅಂತ ಕರೆದೆ, ಅವಳು ಬರಲಿಲ್ಲ. ಅಲ್ಲದೇ ಕೊಲೆಯಾಗುವ ಹಿಂದಿನ ದಿನ 1000 ರೂ. ಫೋನ್ ಪೇ ಮಾಡಿದ್ದೆ. ಹಣ ತಗೊಂಡು ಬ್ಲಾಕ್ ಮಾಡಿಬಿಟ್ಟಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆʼʼ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Read More
Next Story