ಅಂಜಲಿ ಹತ್ಯೆ ಪ್ರಕರಣ| ಆರೋಪಿ ವಿಶ್ವನನ್ನು ಎಂಟು ದಿನ ಸಿಐಡಿ ವಶಕ್ಕೆ ನೀಡಿದ ನ್ಯಾಯಾಲಯ
x

ಅಂಜಲಿ ಹತ್ಯೆ ಪ್ರಕರಣ| ಆರೋಪಿ ವಿಶ್ವನನ್ನು ಎಂಟು ದಿನ ಸಿಐಡಿ ವಶಕ್ಕೆ ನೀಡಿದ ನ್ಯಾಯಾಲಯ


ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಶ್ವನಾಥ್‌​ನನ್ನು ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಮೂರ್ತಿ ನಾಗೇಶ್ ನಾಯ್ಕ್​ ಅವರು ಆದೇಶಿಸಿದ್ದಾರೆ.

ವಿಶ್ವನಾಥ್ ಅಲಿಯಾಸ್​ ಗಿರೀಶ್‌ನನ್ನು ಮತ್ತೆ 15 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡಿತ್ತು. ಈ ಹಿನ್ನಲೆ ಇಂದು(ಮೇ.23) ಹುಬ್ಬಳ್ಳಿ ಒಂದನೇ ಸಿವಿಲ್‌ ನ್ಯಾಯಾಲಯ, ಜೆಎಂಎಫ್‌ಸಿ ಕೋರ್ಟ್‌ ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾನೆ. ಇದಕ್ಕೆ ಹತ್ಯೆ ಮಾಡುವಾಗ ಗೊತ್ತಾಗಲಿಲ್ವಾ ಎಂದು ನ್ಯಾಯಾಧೀಶರು ಗದರಿದ್ದಾರೆ.

ಕೊಲೆಯ ರಹಸ್ಯ ಬಾಯ್ಬಿಟ್ಟಿದ್ದ ಆರೋಪಿ

ಸಿಐಡಿ ಅಧಿಕಾರಿಗಳ ಎದುರು ಮಾತನಾಡಿದ ಆರೋಪಿ ವಿಶ್ವ, ಅಂಜಲಿಯನ್ನು ನಾನು ಮೈಸೂರಿಗೆ ಬಾ ಎಂದು ಕರೆದಿದ್ದೆ. ಆಕೆ ಬರಲಿಲ್ಲ. ಹಾಗಾಗಿ ಕೊಲೆ ಮಾಡಿದ್ದೇನೆ. ಅಂಜಲಿ ಕೊಲೆಯಾಗುವ ಹಿಂದಿನ ದಿನವೇ ಅಂಜಲಿಗೆ 1000 ರೂಪಾಯಿ ಫೋನ್ ಪೇ ಕೂಡ ಮಾಡಿದ್ದೆ. 1000 ರೂ. ಹಣ ತೆಗೆದುಕೊಂಡು ನಂತರ ಆಕೆ ನನ್ನನ್ನು ಬ್ಲಾಕ್ ಮಾಡಿದ್ದಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆ ಎಂದು ವಿಶ್ವ ಸಿಐಡಿ ಅಧಿಕಾರಿಗಳ ಬಳಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದೀಗ ಇನ್ನು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ಎಂಟು ದಿನ ಸಿಐಡಿ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.

ಘಟನೆ ಹಿನ್ನೆಲೆ

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮೇ 15ರಂದು ನಸುಕಿನಲ್ಲಿ ಅಂಜಲಿ ಹತ್ಯೆ ಮಾಡಲಾಗಿತ್ತು. ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ರೀತಿಯಲ್ಲಿಯೇ ಅಂಜಲಿಯನ್ನು ಕೊಲೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆರೋಪಿಯು ಅಂಜಲಿಗೆ ನೇಹಾ ಕೊಲೆಯಾದಂತೆಯೇ ನಿನ್ನ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಆರೋಪಿ ವಿಶ್ವ ಅಂಜಲಿಗೆ ಬೆದರಿಕೆ ಹಾಕಿದ್ದ ವಿಚಾರವಾಗಿ ಆಕೆಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಅಜ್ಜಿಯ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡದ ಪೊಲೀಸರು, ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು ಎನ್ನಲಾಗಿತ್ತು. ಈ ಕೊಲೆ ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದಲ್ಲದೆ, ಕಾನೂನು ಸುವ್ಯವಸ್ಥೆ ವಿಚಾರವಾಗಿ ಸರ್ಕಾರವನ್ನೂ ಮುಜುಗರಕ್ಕೀಡು ಮಾಡಿತ್ತು.

Read More
Next Story